ಪೇಶಾವರ: ಇಬ್ಬರು ಆತ್ಮಾಹುತಿ ಬಾಂಬರ್‍ಗಳು ಪಾಕಿಸ್ತಾನದ ಪೇಶಾವರದಲ್ಲಿರುವ ಐತಿಹಾಸಿಕ ಚರ್ಚ್ ಮೇಲೆ ನಡೆಸಿದ ದಾಳಿಯಲ್ಲಿ ಕನಿಷ್ಟ 70 ಜನರು ಸಾವಿಗೀಡಾಗಿರುವ ಶಂಕೆಯಿದ್ದು, ನೂರಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಪಾಕ್ ಇತಿಹಾಸ ದಲ್ಲೇ ಅಲ್ಪಸಂಖ್ಯಾತ ಕ್ರೈಸ್ತರ ಪ್ರಾರ್ಥನಾ ಮಂದಿರದ ಮೇಲೆ ನಡೆದ ಅತ್ಯಂತ ಘೋರ ದಾಳಿ ಇದಾಗಿದೆ.
ಪೇಶಾವರದ ಕೊಹಟಿ ಗೇಟ್ ಪ್ರದೇಶದಲ್ಲಿರುವ ಆಲ್ ಸೈಂಟ್ ಚರ್ಚ್‍ನಲ್ಲಿ ನೀಡಲಾಗುತ್ತಿದ್ದ ಮಧ್ಯಾಹ್ನದ ಊಟಕ್ಕೆಂದು ಸುಮಾರು 600ರಷ್ಟು ಜನರು ಸೇರಿದ್ದರು. ಈ ಸಂದರ್ಭ ಪೊಲೀಸ್ ವಸ್ತ್ರ ಧರಿಸಿ ಪ್ರವೇಶ ಮಾಡಿದ ಬಾಂಬರ್‍ಗಳು ತಮ್ಮ ಸೊಂಟಕ್ಕೆ ಕಟ್ಟಿದ್ದ ಬಾಂಬ್‍ನ್ನು ಸ್ಫೋಟಿಸಿ ದ್ದರು. ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಸಂಭವಿಸಿದ ಸ್ಫೋಟದ ತೀವ್ರತೆಗೆ ಚರ್ಚ್‍ನ ಗೋಡೆಗಳು ಧರಾಶಾಹಿಯಾಗಿದ್ದು, ಶವಗಳು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಸ್ಫೋಟದ ಆಘಾತದಿಂದ ಪಕ್ಕದ ಮನೆಗಳ ಕಿಟಕಿ ಗಾಜುಗಳು ಪುಡಿಯಾಗಿದ್ದು, ಗೋಡೆಗಳು ಬಿರುಕು ಬಿಟ್ಟಿವೆ. ಬಾಂಬ್‍ಗಳಲ್ಲಿ ಅಳವಡಿಸಲಾಗಿದ್ದ ಬಾಲ್‍ಬೇರಿಂಗ್ ಮತ್ತು ಇತರ ಲೋಹದ ವಸ್ತುಗಳ ಹೊಡೆತದಿಂದ ಚರ್ಚ್‍ನ ಗೋಡೆಗಳಲ್ಲಿ ದೊಡ್ಡದೊಡ್ಡ ಕುಳಿಗಳಾಗಿದ್ದು, ಸ್ಫೋಟದ ತಿಕ್ಷ್ಣತೆಗೆ ಸಾಕ್ಷಿ ನುಡಿಯುತ್ತಿದ್ದವು. ಸತ್ತವರ ಪೈಕಿ ಮಹಿಳೆಯರು ಹಾಗೂ ನಾಲ್ವರು ಮಕ್ಕಳೂ ಸೇರಿದ್ದಾರೆ.
ಈ ಪ್ರದೇಶದಲ್ಲಿ ಮಾರುಕಟ್ಟೆ ಹಾಗೂ ಹಲವು ವ್ಯಾಪಾರಿ ಮಳಿಗೆಗಳು ಇರುವುದರಿಂದ ಮಹಿಳೆಯರೇ ಹೆಚ್ಚಾಗಿ ಇಲ್ಲಿ ಜಮಾಯಿಸುತ್ತಿದುದರಿಂದ ಭಾನುವಾರದಂದು ಜನಸಮೂಹ ಮತ್ತಷ್ಟು ಹೆಚ್ಚಿತ್ತು. ತೆಹ್ರಿಕ್ ಎ ತಾಲಿಬಾನ್ ಪಾಕಿಸ್ತಾನ್ ಸಂಘಟನೆಯ ಅಂಗವಾಗಿರುವ ಜಂದುಲ್ಲಾ ಗುಂಪು ಈ ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿದೆ. ಅಮೆರಿಕಾ ನಡೆಸುತ್ತಿರುವ ಡ್ರಾನ್ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಸಂಘಟನೆ ಹೇಳಿಕೊಂಡಿದೆ. ಸಂಘಟನೆಯ ವಕ್ತಾರ ಅಹ್ಮದ್ ಮರ್ವತ್ ಅಮೆರಿಕಾವು ಡ್ರಾನ್ ದಾಳಿ ನಿಲ್ಲಿಸುವವರೆಗೆ ಅವಕಾಶ ಸಿಕ್ಕಾಗಲೆಲ್ಲಾ ಈ ರೀತಿಯ ದಾಳಿ ನಡೆಸುತ್ತಲೇ ಇರುವುದಾಗಿ ಹೇಳಿಕೊಂಡಿದ್ದಾನೆ.
ದಾಳಿಗೆ ಮುನ್ನ ಉಗ್ರರು ಭದ್ರತಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದು ಈ ಸಂಘರ್ಷದಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಸಾವಿಗೀಡಾಗಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಗೆ ಪ್ರತಿಯಾಗಿ ಕ್ರೈಸ್ತರು ನಗರದ ಬೀದಿಗಳಲ್ಲಿ ಶವಗಳನ್ನು ಇಟ್ಟು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು. ಗಾಯಾಳುಗಳನ್ನು ಲೇಡಿ ರೀಡಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೇಶಾವರದ ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಉತ್ತಮ ಚಿಕಿತ್ಸೆಗಾಗಿ ಹಲವರನ್ನು ಸೇನೆಯ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಾಳುಗಳ ಪೈಕಿ 13 ಜನರ ಸ್ಥಿತಿ ಚಿಂತಾಜನಕವಾಗಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ. ದಾಳಿಯಲ್ಲಿ ಮಡಿದವರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದಾಗಿ ಸ್ಥಳೀಯಾಡಳಿತ ಆತಂಕ ವ್ಯಕ್ತಪಡಿಸಿದೆ. ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿಗಳು ನಡೆಯುತ್ತಲೇ ಇದ್ದು ಕ್ರೈಸ್ತರ ಮೇಲೆ ಈ ರೀತಿಯ ದಾಳಿ ನಡೆಯುವುದು ಬಹಳ ವಿರಳ. ಕಳೆದ ವರ್ಷ ಮರ್ಡಾನ್ ಪ್ರದೇಶದಲ್ಲಿರುವ ಸೇಂಟ್ ಪಾಲ್ ಚರ್ಚ್ ಮೇಲೆ ದಾಳಿ ನಡೆಸಿದ ತೀವ್ರಗಾಮಿಗಳು ಚರ್ಚ್ ಆವರಣದಲ್ಲಿದ್ದಶಾಲೆ, ಗ್ರಂಥಾಲಯ ಹಾಗೂ ಎರಡು ಮನೆಗಳಿಗೆ ಬೆಂಕಿ ಹಚ್ಚಿದ್ದರು. ಸದ್ಯ ಸ್ಫೋಟಕ್ಕೆ ತುತ್ತಾಗಿರುವ ಆಲ್ ಸೇಂಟ್ ಚರ್ಚ್ 1883ರಲ್ಲಿ ಬ್ರಿಟೀಷರಿಂದ ನಿರ್ಮಾಣ ಮಾಡಲಾಗಿತ್ತು.
ಐತಿಹಾಸಿಕ ಹಿನ್ನೆಲೆಯುಳ್ಳ ಚರ್ಚ್ ಮೇಲಿನ ದಾಳಿಯನ್ನು ಕ್ರೈಸ್ತ ಸಂಘಟನೆಗಳು ಸೇರಿದಂತೆ ಹಲವು ಪಾಕಿಸ್ತಾನಿ ರಾಜಕೀಯ ಪಕ್ಷಗಳು ಖಂಡಿಸಿವೆ. ಅವಾಮಿ ನ್ಯಾಷನಲ್ ಪಕ್ಷದ ನಾಯಕ ಇಫ್ತಿಕಾರ್ ಹುಸೇನ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಕ್ರೈಸ್ತ ಸಮುದಾಯಕ್ಕೆ ಸಾಂತ್ವಾನ ನೀಡಿದ್ದಾರೆ. ಅಂತಾರಾಷ್ಟ್ರೀಯ ಧಾರ್ಮಿಕ ಸಭೆಯು ಮೂರು ದಿನಗಳ ಶೋಕಾಚರಣೆಗೆ ಕರೆ ನೀಡಿದ್ದು, ಪೇಶಾವರದ ಕ್ರೈಸ್ತ ಸಂಸ್ಥೆಗಳ ಆಧೀನದಲ್ಲಿರುವ ಶಾಲಾ ಕಾಲೇಜುಗಳಿಗೆ ಮೂರು ದಿನ ರಜೆ ಘೋಷಿಸಲಾಗಿದೆ.
Click this button or press Ctrl+G to toggle between Kannada and English