ಮಂಗಳೂರು : ನಮ್ಮ ದೇಶದಲ್ಲಿ ಪ್ರತ್ಯೇಕವಾಗಿ ನಮ್ಮ ತುಳುನಾಡಿನಲ್ಲಿ ಸಂಚಾರ (ಸಾರಿಗೆ) ವ್ಯವಸ್ಥೆಯಡಿ ಯಾವ ಸಂದರ್ಭಗಳಲ್ಲೂ, ಯಾವ ಸಮಯಗಳಲ್ಲೂ ಸಿಗುವ ಒಂದೇ ಒಂದು ಸೌಕರ್ಯ ಅಂದರೆ ಅದು “ಆಟೋ ರಿಕ್ಷಾ”. ದಿನವಿಡೀ ಹಗಲು-ರಾತ್ರಿ, ಬಿಸಿಲು-ಮಳೆ ಎನ್ನದೆ ದುಡಿದು ದಾರಿಯುದ್ದಕ್ಕೂ ಸಾರ್ವಜನಿಕರಿಗೆ ರಕ್ಷಣೆಯಾಗಿ ನಿಲ್ಲುವುದು ಇದೇ ರಿಕ್ಷಾ ಡ್ರೈವರ್ ಗಳು.
“ರಿಕ್ಷಾ ಡ್ರೈವರ್” ಶೀರ್ಷಿಕೆಯಲ್ಲೇ ಇದು ಸಾಮಾನ್ಯ ರಿಕ್ಷಾ ಡ್ರೈವರ್ನ ಬದುಕಿನ ಕಥೆಯೆಂದು ಪ್ರತಿಯೊಬ್ಬರಲ್ಲೂ ಮೂಡಿಬರುವ ಭಾವನೆ. ಹೌದು, ಈ ಚಿತ್ರ ಕೂಡ ಪ್ರತಿಯೊಬ್ಬ ರಿಕ್ಷಾ ಡ್ರೈವರ್ನ ಕಷ್ಟದ ಬದುಕಿನ ಜೊತೆಗೆ ಯಾವ ರೀತಿ ಊರಿಗೆ, ದೇಶಕ್ಕೆ ಸಹಕಾರಿಯಾಗುತ್ತಾನೆ ಎಂಬ ಸಾರಾಂಶ ಮಾತ್ರವಲ್ಲದೆ ಕೋಮು ಸೌಹಾರ್ದತೆ ಕಾಪಡುವ ಹಾಗೂ ಯುವಕ ಯುವತಿಯರು ಹದಿ ಹರೆಯದಲ್ಲಿ ಯಾವ ರೀತಿ ಪ್ರೀತಿ ಪ್ರೇಮಕ್ಕೆ ಬಲಿಪಶುವಾಗುತ್ತಾರೆ ಎನ್ನುವ ಒಂದು ಒಳ್ಳೆಯ ಕಥಾ ವಸ್ತು ಹೊಂದಿದ ಚಿತ್ರವಾಗಿರುತ್ತದೆ. ಅದರಲ್ಲೂ ಮಕ್ಕಳು, ಮಹಿಳೆಯರು ಒಬ್ಬಂಟಿಯಾಗಿ ಪ್ರಯಾಣಿಸುವ ಇಂದಿನ ಸಂದರ್ಭಗಳಲ್ಲಿ ಯಾವ ರೀತಿ ಜಾಗೃತರಾಗಿರಬೇಕು ಎಂದು ಇಡೀ ಸಮಾಜಕ್ಕೆ ಸಂದೇಶ ಸಾರುವ ಚಿತ್ರವಾಗಿರುತ್ತದೆ ಎಂದು ನಿರ್ಮಾಪಕ ಪ್ರವೀಣ್ ಕುಮಾರ್ ಕೊಂಚಾಡಿ ಹೇಳಿದರು.
ಗುರುವಾರ 26-09-13 ರಂದು ಸಿನಿ ಪೊಲಿಶ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಹೇಳಿದರು. ತುಳು ಚಿತ್ರ ರಂಗದಲ್ಲೇ ಬಹಳ ಅದ್ದೂರಿ ಚಲನಚಿತ್ರ ಇದಾಗಿದ್ದು ಪ್ರಥಮ ಬಾರಿಗೆ ಕನ್ನಡದ ಖ್ಯಾತ ಕಲಾವಿದರಾದ ಅವಿನಾಶ್ (ಆಪ್ತಮಿತ್ರ ಖ್ಯಾತಿ), ಪದ್ಮಜಾ ರಾವ್ (ಮುಂಗಾರು ಮಳೆ ಖ್ಯಾತಿ), ಚಿತ್ರ ಶೆಣೈ, ಸುರೇಶ್ ಮಂಗಳೂರು ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಷ್ಯದಿಂದ ಕರೆತಂದ ಬೆಲ್ಲಿ ಡ್ಯಾನ್ಸರ್ ಜೆನ್ನಿಯವರು ತಮ್ಮ ಮೈಕುಲುಕುವ ಬೆಲ್ಲಿ ಡ್ಯಾನ್ಸ್ ಮೂಲಕ ಚಿತ್ರ ರಸಿಕರನ್ನು ರಂಜಿಸಲಿದ್ದಾರೆ. ಪ್ರಥಮ ಬಾರಿಗೆ ನಾಯಕ ನಟರಾಗಿ ಕಾತರ್ಿಕ್ ಬಂಜನ್ (ಕಾರ್ತಿಕ್ ಅತ್ತಾವರ್) ಈ ಚಿತ್ರದಲ್ಲಿ ಮಿಂಚಲಿದ್ದಾರೆ. ಮುಂಬಯಿಯ ಸಾರ ಶರ್ಮ (ತೆಲುಗು ನಟಿ) ಹಾಗೂ ದಿಲ್ಲಿಯ ನೇಹ ಸಕ್ಸೇನ (ಕನ್ನಡ, ತೆಲುಗು ನಟಿ) ಈ ಚಿತ್ರದ ಪ್ರಮುಖ ನಾಯಕಿಯರಾಗಿ ಚಿತ್ರ ಪ್ರೇಮಿಗಳ ಮನ ಗೆಲ್ಲಲಿದ್ದಾರೆ ಎಂದು ಕೊಂಚಾಡಿ ಹೇಳಿದರು.
ತುಳು ನಾಡಿನ ಕಾಮಿಡಿ ಕಿಂಗ್ಗಳಾದ ನವೀನ್ ಡಿ.ಪಡೀಲ್ (ದ್ವಿಪಾತ್ರ), ಅರವಿಂದ್ ಬೋಳಾರ್, ಬೋಜರಾಜ್ ವಾಮಂಜೂರು, ಸತೀಶ್ ಬಂದಲೆ ಹಾಗೂ ಇತ್ತೀಚೆಗೆ ಪ್ರಸಿದ್ಧಿ ಪಡೆದ ಟಿ.ವಿ ಶೋ “ಬಲೇ ತೆಲಿಪಾಲೆ” ಕಾರ್ಯಕ್ರಮದಲ್ಲಿ ನಟಿಸಿದ ಅನೇಕ ಹಾಸ್ಯ ಕಲಾವಿದರಿಂದ ನಕ್ಕು ನಗಿಸುವ ಕಾಮಿಡಿ ಹಾಗೂ ನವೀನ್ ಡಿ.ಪಡೀಲ್ರವರ ಆಫ್ರಿಕಾನ್ ಡಾನ್ಸ್ ಮತ್ತು ಅರವಿಂದ್ ಬೋಳಾರ್ ರವರ “ಒಪನ್ ಗಂಗಮ್ ಸ್ಟೈಲ್” ಡ್ಯಾನ್ಸ್ ಈ ಚಿತ್ರದ ವಿಶೇಷತೆಯಾಗಿರುತ್ತದೆ ಎಂದು ಕೊಂಚಾಡಿ ವಿವರಿಸಿದರು.
ಹಿಂದಿ ಗಾಯಾಕರಾದ ಉದಿತ್ತ್ ನಾರಾಯಣ್, ಶಂಕರ್ ಮಹಾದೇವನ್, ರಿಂಗ ರಿಂಗ ಖ್ಯಾತಿಯ ಪ್ರಿಯಾ ಹಿಮೇಶ್, ಆ ಅಂಟೆ ಅಮಾಲಪುರ ಖ್ಯಾತಿಯ ಮಾಲತಿ, ಸೈಂದವಿ, ಕನ್ನಡದ ರಾಜೇಶ್ ಕೃಷ್ಣನ್, ಚೈತ್ರ, ಬೇಬಿ ಹಿರಣ್ಮಯಿ ಹಾಗೂ ಮಂಗಳೂರಿನ ಅನಿತಾ ಡಿಸೋಜರವರ ಕಂಠದಿಂದ ಹೊರಹೊಮ್ಮಿದ ಈ ಚಿತ್ರದ ಗೀತೆಗಳು ಈಗಾಗಲೇ ಮನೆ ಮಾತಾಗಿದ್ದು , ಇಂಟರ್ ನೆಟ್ ತಾಣಗಳಲ್ಲಿ ಮೆಚ್ಚುಗೆ ಪಡೆದಿದೆ ಇದರಲ್ಲೂ ಉಡಲ್ ಕಡಲ್ ಎನ್ನುವ ಗೀತೆ ವರ್ಲ್ಡ್ ತುಳು ನೆಟ್ ವರ್ಕ್ ಮುಖಾಂತರ ಕೇವಲ 6 ದಿನಗಳಲ್ಲಿ 1,00,000 + ಜನರು ವೀಕ್ಷಿಸಿದ ದಾಖಲೆಯಾಗಿರುತ್ತದೆ ಎಂದು ನಾಯಕ ನಟ ಕಾರ್ತಿಕ್ ಬಂಜನ್ ಹೇಳಿದರು.
ಶ್ರೀ ಮುತ್ತು ಫಿಲಂಸ್ ಬ್ಯಾನರ್ನಡಿ ನಿರ್ಮಾಣವಾದ ಈ ಅದ್ದೂರಿ ರಿಕ್ಷಾ ಡ್ರೈವರ್ ಚಲನಚಿತ್ರಕ್ಕೆ ಪ್ರವೀಣ್ ಕುಮಾರ್ ಕೊಂಚಾಡಿಯವರು ಕಥೆ, ಚಿತ್ರ ಕಥೆಯೊಂದಿಗೆ ನಿರ್ಮಾಪಕರಾಗಿರುತ್ತಾರೆ. ಅವರ ಈ ಮೊದಲ ಏಕಮೇವ ಎನ್ನುವ ಕನ್ನಡ ಚಲನಚಿತ್ರಕ್ಕೆ ಮೆಕ್ಸಿಕೊ ಅಂತರಾಷ್ಟಿಯ ಪ್ರಶಸ್ತಿ ಹಾಗೂ 2 ಕರ್ನಾಟಕ ರಾಜ್ಯ ಪ್ರಶಸ್ತಿ ಲಭಿಸಿರುತ್ತದೆ. ಸಹ ನಿರ್ಮಾಪಕರಾಗಿ ಸಂತೋಷ್ ಕುಮಾರ್ ಕೊಂಚಾಡಿ, ನಿರ್ದೇಶಕರಾಗಿ ಒರಿಯರ್ದ್ ಒರಿ ಅಸಲ್ ಖ್ಯಾತಿಯ ಹ.ಸೂ.ರಾಜ್ ಶೇಖರ್, ಸಾಹಿತ್ಯ-ಸಂಗೀತ ನಿರ್ದೇಶಕ ರಾಗಿ ವಹಬ್ ಸಲೀಂ ಪುತ್ತೂರು, ಸಾಹಸದಲ್ಲಿ ಕೌರವ ವೆಂಕಟೇಶ್, ನೃತ್ಯ ಸಂಯೋಜನೆಯಲ್ಲಿ ಕನ್ನಡದ ಪ್ರಖ್ಯಾತರಾದ ಮದನ್-ಹರಿಣಿ, ಛಾಯಾ ಗ್ರಹಣದಲ್ಲಿ ನಿರಂಜನ್ ಬಾಬು ಬೆಂಗಳೂರು ಹಾಗೂ ವಿಜಯ್ ಕ್ರಾಸ್ತಾ ಮೆಲ್ಕಾರ್, ಕಲೆಯಲ್ಲಿ ಕೇಶವ್ ಸುವರ್ಣ ಮುಂತಾದವರು ಈ ಚಲನಚಿತ್ರಕ್ಕೆ ತಮ್ಮ ಅಮೂಲ್ಯ ಕೊಡುಗೆ ನೀಡಿದ್ದಾರೆ.
ರೋಡ್ ಶೋ : ಚಿತ್ರದ ಪ್ರಚಾರಕ್ಕಾಗಿ ನಗರದಲ್ಲಿ ಚಿತ್ರ ತಂಡದಿಂದ ರೋಡ್ ಶೋ, ಚಿತ್ರದ ತಂಡದಿಂದ ಆಟೋ ತಂಗುದಾಣಗಳಿಗೆ ಬೇಟಿ ನಡೆಯುತ್ತಿದೆ.
ಮಂಗಳೂರಿನ ಸೆಂಟ್ರಲ್, ಸಿನಿ ಪೊಲಿಶ್ ಸಿಟಿ ಸೆಂಟರ್, ಬಿಗ್ ಸಿನೆಮಾ, ಉಡುಪಿ : ಅಲಂಕಾರ್, ಪುತ್ತೂರು : ಅರುಣ, ಬಿ.ಸಿ ರೋಡು : ನಕ್ಷತ್ರ ಸಿನೆಮಾ ಗಳಲ್ಲಿ ಚಿತ್ರ ಬಿಡುಗಡೆಗೊಳ್ಳಲಿದೆ.
ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ಹ.ಸೂ ರಾಜಶೇಖರ್, ಸಂಗೀತ ನಿರ್ದೇಶಕ ವಹಬ್ ಸಲೀಂ ಪುತ್ತೂರು, ನಾಯಕ ನಟ ಕಾರ್ತಿಕ್ ಬಂಜನ್ (ಕಾರ್ತಿಕ್ ಅತ್ತಾವರ್), ನಾಯಕಿ ನಟಿ ಸ್ನೇಹಾ ಸಕ್ಸೇನಾ, ಖಳನಟ ಸುಭಾಸ್ ಶೆಟ್ಟಿ, ಪ್ರವೀಣ್ ಕುಮಾರ್ ಕೊಂಚಾಡಿ ನಿರ್ಮಾಪಕ, ಸಹ ನಿರ್ಮಾಪಕರಾಗಿ ಸಂತೋಷ್ ಕುಮಾರ್ ಕೊಂಚಾಡಿ, ಹಾಸ್ಯ ನಟ ಭೋಜರಾಜ್ ವಾಮಂಜೂರು, ಅರಂವಿಂದ್ ಬೋಳಾರ್ ಮುಂತಾದವರು ಉಪಸ್ಥಿತರಿದ್ದರು.