ಮೂಡುಬಿದರೆ : ಸಿದ್ಧಾಂತ ಮಂದಿರ ವಿಗ್ರಹ ಕಳವು ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸಿ ಜೈನಮಠದ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ನೇತೃತ್ವದಲ್ಲಿ ನಿನ್ನೆ ಸಾವಿರಕಂಬ ಬಸದಿ ವಠಾರದಲ್ಲಿ ನಿರಶನ ನಡೆಯಿತು. ಇಲ್ಲಿಗೆ ಆಗಮಿಸಿದ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ. ಸ್ವಾಮೀಜಿ ಜೊತೆ ಮಾತುಕತೆ ನಡೆಸಿ, ನೇರವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯರವರನ್ನು ದೂರವಾಣಿ ಮುಖಾಂತರ ಸಂಪ ರ್ಕಿಸಿ, ಬಸದಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಮಸ್ಯೆಯನ್ನು ವಿವರಿಸಿ ಸಿಬಿಐ ತನಿಖೆಯ ಭರವಸೆ ಪಡೆದಿದ್ದಾರೆ.
ಸಿದ್ಧರಾಮಯ್ಯ ‘ಸಿ.ಬಿ.ಐ ತನಿಖೆ ಬಗ್ಗೆ ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದು ಕೊಳ್ಳಲಾಗುವುದು. ಸಿ.ಬಿ.ಐ ತನಿಖೆಗೆ ನಾನು ಬದ್ಧ’ ಎಂದು ಉತ್ತರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಾತನಾಡಿದ ಜನಾರ್ದನ ಪೂಜಾರಿ, ಒಂದು ವೇಳೆ ಮುಖ್ಯಮಂತ್ರಿಯವರು ಮಾತು ತಪ್ಪಿದಲ್ಲಿ ನಾನು ಅಮರಣಾಂತ ಉಪವಾಸ ಕುಳಿತುಕೊಳ್ಳುತ್ತೇನೆ. ಇತರ ರಾಜ್ಯಗಳಲ್ಲಿ ತನಿಖೆ ನಡೆಯಬೇಕಾದ ಕಾರಣ ಸಿ.ಬಿ.ಐ ಅನಿವಾರ್ಯ ಎಂದರು. ಬಳಿಕ ಮಾತನಾಡಿದ ಚಾರುಕೀರ್ತಿ ಸ್ವಾಮೀಜಿಯವರು ಮುಖ್ಯಮಂತ್ರಿ ನೀಡಿದ ಭರವಸೆಯನ್ನು ಶೀಘ್ರವಾಗಿ ಕಾರ್ಯರೂಪಕ್ಕೆ ತರಬೇಕು ಎಂದರು. ಸುಮಾರು 2000ಕ್ಕೂ ಹೆಚ್ಚು ಜನ ಸ್ಥಳಕ್ಕೆ ಧಾವಿಸಿ ತಮ್ಮ ಸಾಂಕೇತಿಕ ಬೆಂಬಲವನ್ನು ವ್ಯಕ್ತಪಡಿಸಿದರು. ಸಂಜೆ 5 ಗಂಟೆಗೆ ಸ್ವಾಮೀಜಿ ಲಿಂಬೆ ರಸವನ್ನು ಸೇವಿಸುವುದರ ಮೂಲಕ ನಿರಶವನ್ನು ಅಂತ್ಯಗೊಳಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್, ಕಲ್ಲಡ್ಕ ಪ್ರಭಾಕರ ಭಟ್, ನಾಗರಾಜ ಶೆಟ್ಟಿ, ಡಾ.ಎಂ. ಮೋಹನ್ ಆಳ್ವ ಮೊದಲಾದ ಗಣ್ಯರು ಭಾಗವಹಿಸಿ ನಿರಶನಕ್ಕೆ ಬೆಂಬಲ ಸೂಚಿಸಿದ್ದಾರೆ.
Click this button or press Ctrl+G to toggle between Kannada and English