ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಹದಗೆಟ್ಟ ನಗರ ಹಾಗೂ ಗ್ರಾಮೀಣ ರಸ್ತೆಗಳನ್ನು ಸಂಚಾರಯೋಗ್ಯವನ್ನಾಗಿ ಮಾಡಲು ಹಾಗೂ ದೊಡ್ಡ ದೊಡ್ಡ ಹೊಂಡಗಳನ್ನು ನವೆಂಬರ್ 10 ರೊಳಗೆ ಮುಚ್ಚಬೇಕೆಂದು ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಬಿ. ನಾಗರಾಜ ಶೆಟ್ಟಿ ಅವರು ಇಲಾಖಾಧಿಕಾರಿಗಳಿಗೆ ಗಡುವು ನೀಡಿದ್ದರು. ಈ ಆದೇಶ ಪರಿಪಾಲನೆಗೆ ಸಂಬಂಧಿಸಿದಂತೆ ರಸ್ತೆ ಕಾಮಗಾರಿ ಅಭಿವೃದ್ಧಿ ಕುರಿತ ಸಭೆಯನ್ನು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಾಧಿಕಾರದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು. ಲೋಕೋಪಯೋಗಿ, ಮಹಾನಗರಪಾಲಿಕೆ, ರಾಷ್ಟ್ರೀಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಿಗಳು ಪಾಲ್ಗೊಂಡ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಂಪರ್ಕ ವ್ಯವಸ್ಥೆಗೆ ಹಣದ ಕೊರತೆ ಇಲ್ಲ; ಬಿಡುಗಡೆಯಾದ ಹಣವನ್ನು ಸದ್ಬಳಕೆ ಮಾಡುತ್ತಿಲ್ಲ ಎಂದರು. ಜಿಲ್ಲೆಯ ಪ್ರಮುಖ ರಸ್ತೆ (ಎಂ ಡಿ ಆರ್) ಗಳ ಅಭಿವೃದ್ಧಿ ಪ್ರಮಾಣ ಕಡಿಮೆ ಇದೆ ಎಂದರು.
ದ.ಕ.ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 13, 48 ಹಾಗೂ 234 ರಲ್ಲಿರುವ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಡಿಸೆಂಬರ್ ಹತ್ತರೊಳಗೆ ಮುಗಿಸಬೇಕು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ರಸ್ತೆಯನ್ನು ಖುದ್ದಾಗಿ ಪರಿಶೀಲಿಸುವುದಾಗಿ ಎಚ್ಚರಿಕೆ ನೀಡಿದ ಪ್ರಾಧಿಕಾರದ ಅಧ್ಯಕ್ಷರು, ರಸ್ತೆ ಹೊಂಡ ಮುಚ್ಚಲು ಅನುದಾನವಿಲ್ಲ ಎಂಬ ಸಬೂಬು ಹೇಳಬೇಡಿ ಎಂದರು. ರಾಷ್ಟ್ರೀಯ ಹೆದ್ದಾರಿ 48 ಒಟ್ಟು 74.8 ಕಿ.ಮೀ ಉದ್ದವಿದ್ದು, 54.8 ಕಿ.ಮೀ ಉದ್ದ ರಸ್ತೆಯ ಹೊಂಡ ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಶಿರಾಡಿ ಮತ್ತು ಅಮೈ – ಬಿ.ಸಿ.ರೋಡು ಬಳಿ ಹೊಂಡ ಮುಚ್ಚಲಾಗಿಲ್ಲ; ಈ ಪ್ರದೇಶಗಳನ್ನು 3 ವಾರದೊಳಗೆ ಮುಚ್ಚಲಾಗುವುದು ಎಂದರು. ರಾಷ್ಟ್ರೀಯ ಹೆದ್ದಾರಿ 13 ರ ವ್ಯಾಪ್ತಿ 36.90 ಕಿ.ಮೀನಷ್ಟಿದ್ದು, 28 ಕಿ.ಮೀ ರಸ್ತೆ ಹೊಂಡ ಮುಚ್ಚಲಾಗಿದೆ. ಸಾಮಾನ್ಯ ವೆಚ್ಚಕ್ಕೆಂದು ನೀಡಲಾದ 61 ಲಕ್ಷ ರೂ.ಗಳು ಖರ್ಚಾಗಿಲ್ಲ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ತನ್ನ ಮುಂದಿರುವ ಒಂದೇ ಕಾರ್ಯಸೂಚಿ ಎಂದರೆ ರಸ್ತೆಯನ್ನು ವಾಹನ ಓಡಾಟಕ್ಕೆ ಸಜ್ಜುಗೊಳಿಸುವುದು. ಆದ್ದರಿಂದ ಅಧಿಕಾರಿಗಳು ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದರು. ಎನ್ ಎಚ್ 234ರಲ್ಲಿ 67 ಕಿ.ಮೀ ವಿಸ್ತಾರ ರಸ್ತೆಯಿದ್ದು, 25 ಕಿ.ಮೀ ರಸ್ತೆ ಹೊಂಡ ಮುಚ್ಚಲಾಗಿದೆ ಎಂದರು. ಒಂದೊಂದು ರಸ್ತೆಗೆ ಒಬ್ಬೊಬ್ಬ ಅಧಿಕಾರಿಯನ್ನು ಹೊಣೆಯಾಗಿಸಬೇಕು. ಪ್ರತೀ ಬಾರಿ ಅಂತಿಮ ಗಡುವು, ದಿನಾಂಕ ನಿಗದಿ ಮಾಡಲು ತನಗೆ ಅವಕಾಶ ನೀಡಬೇಡಿ ಎಂದು ಎಚ್ಚರಿಸಿದರು. ನಾಳೆಯೇ ಎನ್ ಎಚ್ 13 ರಸ್ತೆಯನ್ನು ತನಿಖೆ ಮಾಡಲಿದ್ದೇನೆ ಎಂದರು. ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನದಿಂದ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಬೇಕು. ಅಭಿವೃದ್ಧಿ ಕಾಮಗಾರಿಗೆ ಸಹಕಾರ ಸ್ಪಂದನೆ ನೀಡದ ಅಧಿಕಾರಿಗಳು ಜಿಲ್ಲೆಯಿಂದ ಬೇರೆಡೆಗೆ ವರ್ಗಾವಣೆ ತೆಗೆದುಕೊಂಡು ಹೋಗಬಹುದೆಂದರು.
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 120 ರಸ್ತೆಗಳಿದ್ದು, 50 ರಸ್ತೆಗಳನ್ನು ಆದ್ಯತೆಯ ಮೇಲೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದರು. ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ 645.80 ಕಿ.ಮೀ ರಸ್ತೆಯಿದ್ದು, 52 ರಸ್ತೆಗಳ ರಿಪೇರಿ ಆರಂಭಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಇಂಜಿನಿಯರ್ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಕಾಲುಸಂಕ ಗಳಿಗೆ ಐದು ಕೋಟಿ ರೂ. ಬಿಡುಗಡೆಯಾಗಿದ್ದು, ರಸ್ತೆಯ ಬಳಿಕ ಕಾಲುಸಂಕ ಕಾಮಗಾರಿ ಆರಂಭಿಸಲಾಗುವುದು ಎಂದರು. ಆರು ಘಾಟಿಗಳಲ್ಲಿ ರಸ್ತೆ ಅಭಿವೃದ್ಧಿಗೆ 100 ಕೋಟಿ ರೂ. ಬಿಡುಗಡೆಯಾಗಿದ್ದು, ಘಾಟಿ ರಸ್ತೆಗಳ ಕಾಮಗಾರಿ ವಿವರವನ್ನು ಸೂಪರಿಂಟೆಂಡೆಂಟ್ ಇಂಜಿನಿಯರ್ ಶ್ರೀ ಬಾಲಕೃಷ್ಣ ಅವರು ನೀಡಿದರು. ಶಿರಾಡಿ ಘಾಟ್ ಅಭಿವೃದ್ಧಿ ಮತ್ತು 237ನೇ ಸ್ಟ್ರಚ್ ನಲ್ಲಿ ಶೌಚಾಲಯ ನಿರ್ಮಿಸಲು ಅವಕಾಶ ಮುಕ್ತವಾಗಿರಿಸಲು ಅಧ್ಯಕ್ಷರು ಸೂಚಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಶ್ರೀ ಸುಭೋದ್ ಯಾದವ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English