ಶ್ರೀ ಶಾರದಾ ಮಾತೆಯ ವಿಗ್ರಹದ ವಿಸರ್ಜನಾ ಮೆರವಣಿಗೆಯ ಶೋಭಾಯಾತ್ರೆ

12:18 PM, Wednesday, October 16th, 2013
Share
1 Star2 Stars3 Stars4 Stars5 Stars
(4 rating, 6 votes)
Loading...

shobayathre

ಮಂಗಳೂರು: ನಗರದ ಆಚಾರ್ಯ ಮಠ ವಠಾರದಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಳೆದ 91 ವರ್ಷಗಳಿಂದ ನಡೆದು ಬಂದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಪ್ರಯುಕ್ತ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಶಾರದಾ ಮಾತೆಯ ಭವ್ಯ ವಿಗ್ರಹದ ವಿಸರ್ಜನಾ ಮೆರವಣಿಗೆಯ ಶೋಭಾಯಾತ್ರೆ ಮಂಗಳವಾರ ಸಮಾಪನಗೊಂಡಿತು.

ಸಂಜೆ ಶಾರದಾಮಾತೆಗೆ ಮಂಗಳೂರು ಮಲ್ಲಿಗೆಯ ಜಲ್ಲಿ ಮುಡಿಸಿ, ಭಕ್ತಾದಿಗಳ ದರ್ಶನಕ್ಕೆ ಇಡಲಾಯಿತು. ಬಳಿಕ ವರ್ಣರಂಜಿತ ವಿದ್ಯುದ್ದೀಪಾಲಂಕೃತ ಪ್ರಭಾವಳಿ ಮುಂಭಾಗದಲ್ಲಿ ಹೆಗಲು ಸೇವೆಯ ಮೂಲಕ ಶೋಭಾಯಾತ್ರೆ ಪ್ರಾರಂಭವಾಯಿತು.

ಭಗವದ್ಭಕ್ತರು ಅರ್ಪಿಸಿದ ವಜ್ರ ವೈಡೂರ್ಯಗಳಿಂದ ವಿಶೇಷವಾಗಿ ಮಂಗಳೂರು ಮಲ್ಲಿಗೆಯ ಅಲಂಕಾರದಿಂದ ಶ್ರೀ ಮಾತೆಯ ವಿಗ್ರಹಕ್ಕೆ ಹೊಸ ಕಳೆ ಬಂದಿತ್ತು. ಮನಮೋಹಕ ಅಲಂಕಾರದಿಂದ ಶೋಭಾಯಾತ್ರೆಗೆ ಮೆರುಗು ಬಂದಿತ್ತು. ರಸ್ತೆಯುದ್ದಕ್ಕೂ ತಳಿರು ತೋರಣ, ವಿದ್ಯುದ್ದೀಪಗಳ ವರ್ಣಮಯ ಅಲಂಕಾರ ಕಣ್ಮನ ಸೆಳೆಯುವಂತಿತ್ತು. ಅಬಾಲವೃದ್ಧರು, ಸ್ತ್ರೀಪುರುಷರಾದಿಯಾಗಿ ದೇಶ ವಿದೇಶಗಳಿಂದ ಭಕ್ತಾದಿಗಳು ಆಗಮಿಸಿದ್ದರು. ಸೇವಾರೂಪದಲ್ಲಿ, ಹರಕೆ ರೂಪದಲ್ಲಿ ವೇಷಧಾರಿಗಳು ತಮ್ಮ ಸೇವೆ ಅರ್ಪಿಸಿದರು.

ಶೋಭಾಯಾತ್ರೆ ಶ್ರೀ ವೆಂಕಟರಮಣ ದೇವಸ್ಥಾನದಿಂದ ಹೊರಟು ಶ್ರೀ ಮಹಾಮಾಯಾ ದೇವಸ್ಥಾನ, ಗದ್ದೆಕೇರಿ, ನವಭಾರತ ವೃತ್ತ, ಡೊಂಗರಕೇರಿ, ಚಾಮರಗಲ್ಲಿ ಕೆಳರಥಬೀದಿ ಮೂಲಕ ರಥಬೀದಿಯಲ್ಲಿ ಸಂಚರಿಸಿ ಶ್ರೀ ಮಹಾಮಾಯಾ ತೀರ್ಥದಲ್ಲಿ ಶ್ರೀ ಮಾತೆಯ ವಿಗ್ರಹದ ಜಲಸ್ತಂಭನ ನಡೆಯಿತು.

ಶಾರದೋತ್ಸವ ಸಮಿತಿ ಅಧ್ಯಕ್ಷ ಡಾ| ಉಮಾನಂದ ಮಲ್ಯ, ಕಾರ್ಯದರ್ಶಿ ಅಡಿಗೆ ಬಾಲಕೃಷ್ಣ ಶೆಣೈ ಮೊದಲಾದವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English