ಬೆಂಗಳೂರು : ನಗರದ ಜೈನ ದೇವಾಲಯವೊಂದರಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಧ್ವಂಸಗೊಳಿಸಿ, ಭದ್ರತಾ ಸಿಬ್ಬಂದಿ ಪ್ರಜ್ಞೆ ತಪ್ಪಿಸಿ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಹುಂಡಿ ಹಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಅಕ್ಕಿಪೇಟೆಯ ಜೈನ ದೇವಾಲಯಕ್ಕೆ ನುಗ್ಗಿದ ದುಷ್ಕರ್ಮಿಗಳು, ಅಲ್ಲಿದ್ದ ಏಳು ಸಿಸಿಟಿವಿ ಕ್ಯಾಮರಾಗಳನ್ನು ಧ್ವಂಸಗೊಳಿಸಿದ್ದಾರೆ .
ಐವರು ಭದ್ರತಾ ಸಿಬ್ಬಂದಿ ಪ್ರಜ್ಞೆ ತಪ್ಪಿಸಿ, ಚಿನ್ನಾಭರಣ ಮತ್ತು ಹಣ ದೋಚಿದ್ದಾರೆ. ದೇವಾಲಯಕ್ಕೆ ನುಗ್ಗಿದ ಕಳ್ಳರ ಗುಂಪು, ಭದ್ರತಾ ಸಿಬ್ಬಂದಿ ಮುಖಕ್ಕೆ ಕ್ಲೋರೋಫಾರ್ಮ್ ಹಿಡಿದು ಪ್ರಜ್ಞೆ ತಪ್ಪಿಸಿದ್ದಾರೆ. ನಂತರ ಸಿಸಿಟಿವಿ ಧ್ವಂಸಗೊಳಿಸಿದ್ದಾರೆ. ಕಬ್ಬಿಣದ ಗ್ರಿಲ್ ಕತ್ತರಿಸಿ ದೇವಾಲಯಕ್ಕೆ ನುಗ್ಗಿದ್ದಾರೆ. ದೇವಾಲಯದಲ್ಲಿದ್ದ 6 ಕಾಣಿಕೆ ಹುಂಡಿ ಒಡೆದು ಹಣ ದೋಚಿದ್ದಾರೆ. ಚಿನ್ನಾಭರಣ ಇಟ್ಟಿದ್ದ ಪೆಟ್ಟಿಗೆಯ ಬೀಗ ಮುರಿದು ಸುಮಾರು 25 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣಗಳನ್ನು ತುಂಬಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಐವರು ಭದ್ರತಾ ಸಿಬ್ಬಂದಿಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಈ ಪೈಕಿ ಒಬ್ಬರು ಚೇತರಿಸಿಕೊಂಡಿದ್ದಾರೆ. ಇನ್ನುಳಿದವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚೇತರಿಕೆ ಕಂಡ ಭದ್ರತಾ ಸಿಬ್ಬಂದಿಯಿಂದ ಪೊಲೀಸರು ಪ್ರಾಥಮಿಕ ಮಾಹಿತಿ ಪಡೆದಿದ್ದಾರೆ.
ಮುಂಜಾನೆ ಅರ್ಚಕರು ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಅವರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕಾಟನ್ ಪೇಟೆ ಪೊಲೀಸರು, ಆರೋಪಿಗಳ ಹುಡುಕಾಟಕ್ಕಾಗಿ ಐದು ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಅಕ್ಕಿಪೇಟೆ ಜೈನ ದೇವಾಲಯದಲ್ಲಿ ಐದುವರ್ಷಗಳಲ್ಲಿ ಇದು ಐದನೇ ಬಾರಿ ಕಳ್ಳತನವಾಗುತ್ತಿರುವುದು. ಆದ್ದರಿಂದ ದೇವಾಲಯಕ್ಕೆ ಐವರು ಭದ್ರತಾ ಸಿಬ್ಬಂದಿ ನೇಮಕ ಮಾಡಲಾಗಿತ್ತು. ಸಚಿವ ಮತ್ತು ಸ್ಥಳೀಯ ಶಾಸಕ ದಿನೇಶ್ ಗುಂಡೂರಾವ್ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಲ್ಕು ತಿಂಗಳ ಹಿಂದೆ ಮೂಡ ಬಿದಿರೆಯ ಜೈನ ಬಸದಿಯಲ್ಲಿ ಕಳ್ಳತನ ನಡೆದು ಪುರಾತನವಾದ ವಿಗ್ರಹಗಳನ್ನು ದೋಚಲಾಗಿದ್ದು, ಈ ಪ್ರಕರಣ ತನಿಖೆ ಇನ್ನೂ ನಡೆಯುತ್ತಿದೆ.
Click this button or press Ctrl+G to toggle between Kannada and English