ಗೊಮ್ಮಟೇಶ್ವರ ಮೂರ್ತಿಗೆ 64ನೇ ಮಸ್ತಕಾಭಿಷೇಕ

2:58 PM, Monday, October 21st, 2013
Share
1 Star2 Stars3 Stars4 Stars5 Stars
(4 rating, 6 votes)
Loading...

gommateshwara

ಮೈಸೂರು : ಹುಣಸೂರು ತಾಲ್ಲೂಕಿನ ಗೊಮ್ಮಟಗಿರಿ ಕ್ಷೇತ್ರದ ಗೊಮ್ಮಟೇಶ್ವರ ಮೂರ್ತಿಗೆ ಭಾನುವಾರ 64ನೇ ಮಸ್ತಕಾಭಿಷೇಕ ನೆರವೇರಿತು.

ಅರಬ್ಬಿತಿಟ್ಟು ಅರಣ್ಯಕ್ಕೆ ಹೊಂದಿಕೊಂಡಿರುವ ಬೆಟ್ಟದೂರು ಸಮೀಪ ವಿರಾಜಮಾನವಾಗಿರುವ ಬಾಹುಬಲಿಯನ್ನು ಭಕ್ತಿಯಿಂದ ಪೂಜಿಸಲಾಯಿತು.

ಶಿವಮೊಗ್ಗ ಜಿಲ್ಲೆಯ ಹೊಂಬುಜ ಜೈನ ಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು. 200 ಅಡಿ ಎತ್ತರದ ಬೆಟ್ಟದ ಮೇಲೆ ಪ್ರತಿಷ್ಠಾಪಿಸಲಾಗಿರುವ 16 ಅಡಿಯ ಮೂರ್ತಿಗೆ ಬೆಳಿಗ್ಗೆ 9.30ರಿಂದ 11.30ರವರೆಗೆ 108 ಕಳಶಾಭಿಷೇಕ ನೆರವೇರಿತು.

ಮಧ್ಯಾಹ್ನ 12.30ರಿಂದ ಆರಂಭವಾದ ಮಸ್ತಕಾಭಿಷೇಕ 40 ನಿಮಿಷಗಳ ಕಾಲ ನಿರಂತರವಾಗಿ ನಡೆಯಿತು. ಜಲಾಭಿಷೇಕದಿಂದ ಪುಷ್ಪವೃಷ್ಟಿಯವರೆಗೆ ಒಂಬತ್ತು ವಿಧದ ಅಭಿಷೇಕವನ್ನು ಸ್ವಸ್ತಿಶ್ರೀ ಮಧ್ಯವೇಂದ್ರ ಭಟ್ಟಾರಕ ಪಟ್ಟಾಚಾರ್ಯವರ್ಯ ಅವರ ನೇತೃತ್ವದಲ್ಲಿ ಬಾಹುಬಲಿಗೆ ಅಭಿಷೇಕ ಮಾಡಲಾಯಿತು. ಅಭಿಷೇಕಕ್ಕೆ ಬೆಟ್ಟದ ಪಾದದಿಂದ ನಾದಸ್ವರದ ತಂಡದೊಂದಿಗೆ ಹೆಂಗಳೆಯರು ಪೂರ್ಣ ಕುಂಭಗಳನ್ನು ಹೊತ್ತು ತಂದರು.

ಕ್ಷೀರ, ಕಲ್ಕಚೂರ್ಣ, ಅರಿಸಿನ, ಕನಕ, ಕಷಾಯ, ಕೆಂಪು ಚಂದನ, ಅಷ್ಟಗಂಧ ಅಭಿಷೇಕಗಳು ಒಂದಾದ ನಂತರ ಒಂದು ನೆರವೇರಿದವು. ಸೇವಂತಿ, ಗುಲಾಬಿ, ಮಲ್ಲಿಗೆ, ಚೆಂಡು, ಕನಕಾಂಬರ ಸೇರಿದಂತೆ ವಿವಿಧ ಹೂಗಳ ಪುಷ್ಪವೃಷ್ಟಿ ಮಾಡಲಾಯಿತು. ಮುಡಿಯಿಂದ ಅಡಿಯವರೆಗೆ ಅಭಿಷೇಕ ಮಿಂದ ಮೂರ್ತಿಯನ್ನು ಕಂಡು ಪುನೀತರಾದ ಭಕ್ತರು ‘ಬಾಹುಬಲಿ ಮಹಾರಾಜ್‌ ಕಿ ಜೈ’, ‘ಅಹಿಂಸಾ ಪರಮೋಧರ್ಮಕಿ ಜೈ’ ಸ್ತುತಿಗಳನ್ನು ಮೊಳಗಿಸಿದರು.

ನಂತರ ಧಾರ್ಮಿಕ ಉಪನ್ಯಾಸ ನೀಡಿದ ದೇವೇಂದ್ರ­ಕೀರ್ತಿ ಭಟ್ಟಾರಕ ಸ್ವಾಮೀಜಿ, ಭಾರತದ ಪ್ರಾಚೀನ ಧರ್ಮ­ಗಳಲ್ಲಿ ಜೈನ ಧರ್ಮವೂ ಒಂದು. ಜೈನ ಧರ್ಮದ 24 ತೀರ್ಥಂಕರರಲ್ಲಿ ಬಾಹುಬಲಿಯ ತ್ಯಾಗ, ಬಲಿದಾನಗಳು ವಿಭಿನ್ನ. ಅಹಿಂಸೆ, ತ್ಯಾಗದ ಗುಣಗಳನ್ನು ಸಮಾಜಕ್ಕೆ ಪರಿಚ ಯಿಸಿದ ಅವರು ಶಾಂತಿಯ ಪ್ರತೀಕ. ಶ್ರವಣಬೆಳಗೊಳ, ಬಾದಾಮಿ, ಕಾರ್ಕಳ ಸೇರಿದಂತೆ ನಾಡಿನ ವಿವಿಧೆಡೆ ಬಾಹು ಬಲಿಯ ಮೂರ್ತಿಗಳಿವೆ. ಗೊಮ್ಮಟಗಿರಿಯ ಗೊಮ್ಮಟೇಶ್ವರ ಮೂರ್ತಿಗೆ 64 ವರ್ಷಗಳಿಂದ ಮಸ್ತಕಾಭಿಷೇಕ ಮಾಡಲಾಗುತ್ತಿದೆ ಎಂದು ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English