ಕಾಸರಗೋಡು : ಉಪ್ಪಳದ ಮಣ್ಣಂಗುಳಿ ಮೈದಾನ ಪರಿಸರದ ರಿಯಲ್ ಎಸ್ಟೇಟ್ ಉದ್ಯಮಿ ಮುತ್ತಲೀಬ್ ರಫೀಕ್ (38) ಅವರು ಕಾರಿನಲ್ಲಿ ಮನೆಗೆ ಹೋಗುತ್ತಿದ್ದಾಗ ಕಾರನ್ನು ತಡೆದು ನಿಲ್ಲಿಸಿ ಗುಂಡು ಹಾರಿಸಿದ್ದರಿಂದಾಗಿ ನಿಯಂತ್ರಣ ತಪ್ಪಿದ ಕಾರು ಗೋಡೆಗೆ ಬಡಿದು ಮುಂದಕ್ಕೆ ಸಾಗಿ ನಿಂತಿತು. ಬೆನ್ನಟ್ಟಿ ಬಂದ ತಂಡವೊಂದು ಕಾರಿಗೆ ಹಾನಿಗೊಳಿಸಿದ ಬಳಿಕ ಮುತ್ತಲೀಬ್ ಅವರನ್ನು ಕಾರಿನಲ್ಲೇ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಗುರುವಾರ ರಾತ್ರಿ 10.30 ರಿಂದ 11 ಗಂಟೆಯ ಮಧ್ಯೆ ನಡೆದಿದೆ.
ಮನೆಗೆ ಹಿಂತಿರುಗುತ್ತಿದ್ದ ಸಂದರ್ಭ ಮನೆಯಿಂದ ಕೇವಲ 75 ಮೀ. ದೂರದಲ್ಲಿ ಮುತ್ತಲೀಬ್ ಅವರನ್ನು ಕಾರಿನಲ್ಲೇ ಬರ್ಬರವಾಗಿ ಕೊಲೆ ಮಾಡಲಾಯಿತು. ಬೊಬ್ಬೆ ಕೇಳಿ ಪ್ಲಾಟ್‌ನಿಂದ ಮತ್ತು ಸಮೀಪದ ಮನೆಗಳಿಂದ ಜನರು ಸ್ಥಳಕ್ಕೆ ಧಾವಿಸಿದಾಗ ಅಕ್ರಮಿಗಳು ಪರಾರಿಯಾಗಿದ್ದರು. ಓಡಿ ಬಂದವರು ಮುತ್ತಲೀಬ್ ಅವರನ್ನು ಕಾರಿನಿಂದ ಹೊರ ತೆಗೆದು ತತ್‌ಕ್ಷಣ ಉಪ್ಪಳದ ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಗಂಭೀರ ಗಾಯಗೊಂಡಿದ್ದರಿಂದ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತು. ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ದಾರಿ ಮಧ್ಯೆ ತೊಕ್ಕೋಟಿನಲ್ಲಿ ಸಾವು ಸಂಭವಿಸಿತು.
ಶೂಟೌಟ್ ನಡೆಸಿ ಕೊಲೆಗೈದ ಆರೋ ಪಿಗಳು ಕರ್ನಾಟಕಕ್ಕೆ ಪರಾರಿಯಾಗಿರುವ ಸುಳಿವು ದೊರೆತಿರುವ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ಹಂತಕರೊಂದಿಗೆ ನಿಕಟ ಸಂಬಂಧ ವಿರಿಸಿರುವ ಹಲವರನ್ನು ಪೊಲೀಸರು ವಿಚಾರಣೆಗೆಂದು ವಶಕ್ಕೆ ಪಡೆದುಕೊಂಡಿದ್ದಾರೆ. ಶವ ಮಹಜರಿನಲ್ಲಿ ಮೃತ ದೇಹದಲ್ಲಿ ಶೇ.40 ರಷ್ಟು ಇರಿತದ ಗಾಯಗಳಾಗಿದ್ದು, ಗುಂಡೇಟಿನಿಂದ ಸಾವನ್ನಪ್ಪಿರುವುದಾಗಿ ವರದಿ ನೀಡಿದೆ.
ಸಾಯುವ ಮುನ್ನ ತನ್ನನ್ನು ಕಾಲಿಯಾ ರಫೀಕ್ ಹಾಗೂ ಇತರ ಮೂವರು ಸೇರಿ ಹತ್ಯೆಗೈದಿರುವುದಾಗಿ ತಿಳಿಸಿದ್ದರು. ದರೋಡೆ ಪ್ರಕರಣದಲ್ಲಿ ಆರೋಪಿ ಯಾಗಿರುವ ಕಾಲಿಯಾ ರಫೀಕ್ ಹಿಂದೆ ಕರ್ನಾಟಕ ಪೊಲೀಸರಿಂದ ತಪ್ಪಿಸಿ ಕೊಂಡಿದ್ದ. ರಾತ್ರಿ ವೇಳೆ ವಾಹನಗಳನ್ನು ತಡೆದು ಹಫ್ತಾ ವಸೂಲಿ ಮಾಡುತ್ತಿದ್ದುದನ್ನು ವಿರೋಧಿಸಿದ ಮುತ್ತಲೀಬ್ ನನ್ನು ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಮುಖ್ಯಸ್ಥ ಥೋಮ್ಸನ್ ಜೋಸ್, ಕುಂಬಳೆ ಸಿ.ಐ ಸಿಬಿ ಥೋಮಸ್, ಮಂಜೇಶ್ವರ ಠಾಣಾ ಎಸ್.ಐ ಬಿಜುಲಾಲ್ ಮೊದಲಾದ ಪೊಲೀಸಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.
Click this button or press Ctrl+G to toggle between Kannada and English