ವಿದ್ಯಾರ್ಥಿನಿ ಸೌಜನ್ಯ ಪ್ರಕರಣವನ್ನು ಸಿಬಿಐಗೆ ವಹಿಸಲು ರಾಷ್ಟ್ರಪತಿಗೆ ಮನವಿ ಸಲ್ಲಿಸುವ ನಿರ್ಧರ

12:06 PM, Saturday, October 26th, 2013
Share
1 Star2 Stars3 Stars4 Stars5 Stars
(4 rating, 6 votes)
Loading...

belthangady

ಮಂಗಳೂರು : ವಿದ್ಯಾರ್ಥಿನಿ ಸೌಜನ್ಯ ಪ್ರಕರಣವನ್ನು  ಸಿಬಿಐ ಅಧಿಕಾರಿಗಳಿಗೆ ವಹಿಸಬೇಕೆಂದು ಆಗ್ರಹಿಸಿ ಬೆಳ್ತಂಗಡಿಯಲ್ಲಿ ಶುಕ್ರವಾರ ಬೃಹತ್ ಪ್ರತಿಭಟನಾ ಸಭೆ  ನಡೆಯಿತು.

ಪ್ರಜಾಪ್ರಭುತ್ವ ವೇದಿಕೆ ಬೆಳ್ತಂಗಡಿ ಇದರ ಆಶ್ರಯದಲ್ಲಿ ಸಾಮಾಜಿಕ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿ ಮುಂದಾಳತ್ವದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಲು ರಾಷ್ಟ್ರಪತಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಬೆಳಿಗ್ಗೆಯಿಂದಲೇ ಸಾವಿರಾರು ನಾಗರಿಕರು ಪ್ರತಿಭಟನೆಗೆ ಆಗಮಿ ಸಿದ್ದರು. ತಾಲೂಕಿನ ಎಲ್ಲೆಡೆ ಜನರು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಮುಚ್ಚಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸೌಜನ್ಯ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ವೈಫಲ್ಯ, ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನಕ್ಕೆ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಯಿತು.

ಇದು ಸ್ವಾರ್ಥದ ಹೋರಾಟವಲ್ಲ, ಅನ್ಯಾಯದ ವಿರುದ್ಧದ ಹೋರಾಟ. ಅನ್ಯಾಯ ಮಾಡಿದವರನ್ನು ಬೀದಿಗೆ ತಂದು ನಿಲ್ಲಿಸುವರೆಗೆ ವಿರಮಿಸುವುದಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿ ಗುಡುಗಿದರು. ಅವರು ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಬಗ್ಗೆ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಸೌಜನ್ಯ ಪ್ರಕರಣದಲ್ಲಿ ನ್ಯಾಯದ ಪರ ಎಂದು ಬೆಳ್ತಂಗಡಿ ತಾಲೂಕಿನ ಜನತೆ ಇಂದು ತೋರಿಸಿಕೊಟ್ಟಿದ್ದಾರೆ, ಸಮಾಜವನ್ನು ಅಸ್ಥಿರ ಮಾಡಿ ಅತ್ಯಾಚಾರಿಗಳಿಗೆ, ಕೊಲೆಗಟುಕರಿಗೆ ಬೆಂಬಲ ನೀಡುತ್ತಿರುವ, ಸಾಕ್ಷಿಯನ್ನು ನಾಶ ಮಾಡಿದ ಪೊಲೀಸರು ಇನ್ನಾದರೂ ಸತ್ಯವನ್ನು ಎತ್ತಿ ಹಿಡಿಯುವಂತೆ ಕರೆ ನೀಡಿದರು.

ಈ ಪ್ರತಿಭಟನೆ ಬಡವರ ಪರವಾದ ಪ್ರತಿಭಟನೆ ಎಂದು ಜನತೆ ತೋರಿಸಿ ಕೊಟ್ಟಿದ್ದಾರೆ, `ಮುಂಡಾಸಿನವರಲ್ಲ ಇಲ್ಲಿ ಸೇರಿದ್ದು, ಮುಟ್ಟಾಳೆಯವರು’ ಅತ್ಯಾ ಚಾರಿಗಳ ಪರವಾಗಿ ಹೇಳಿಕೆ ನೀಡುವವರು ಆತ್ಮವಿಮರ್ಶೆ ಮಾಡಿಕೊಳ್ಳಿ ಎಂದರು.

belthangady

ಸಚಿವ ಸೊರಕೆ ಓಟುಗಳನ್ನು ಮಾರಾಟ ಮಾಡಲು ಹೊರಟಿದ್ದಾರೆ, ಸರ್ಕಾರವನ್ನು ಒತ್ತೆ ಇಡಲು ಯತ್ನಿಸಿದ್ದಾರೆ. ಆರೋಪಿಗಳನ್ನು ರಕ್ಷಿಸುವವರ ವೇದಿಕೆಯಲ್ಲಿ ಕುಳಿತ ಸಚಿವರು ಕೂಡಾ ಆರೋಪಿಯಾಗುತ್ತಾರೆ, ತಕ್ಷಣ ಸಚಿವರು ರಾಜೀನಾಮೆ ನೀಡಬೇಕು, ಇಲ್ಲಿನ ಶಾಸಕರೇ ಸಿಬಿಐ ತನಿಖೆ ಆಗ ಬೇಕು ಎಂದು ಹೇಳುತ್ತಿದ್ದಾರೆ, ಪೊಲೀಸ್ ಇಲಾಖೆಯನ್ನು, ತಮ್ಮ ಸಚಿವರನ್ನು ಸರಿ ಮಾಡಿ ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ ಮಹೇಶ್ ಶೆಟ್ಟಿ, ಒಂದು ವೇಳೆ ಆಗದಿದ್ದರೆ ರಾಜೀನಾಮೆ ನೀಡಿ ಅಧಿಕಾರದಿಂದ ಕೆಳಗಿಳಿಯಿರಿ ಎಂದರು.

ಸೌಜನ್ಯ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ರವಿ ಪೂಜಾರಿ ಎಂಬವರು ಕೆಲ ಸಮಯದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಒಂದು ಕೊಲೆಯನ್ನು ಮುಚ್ಚಿ ಹಾಕಲು ಅನೇಕ ಕೊಲೆಗಳು ನಡೆಯುತ್ತಿದೆ. ಪೊಲೀಸ್ ಇಲಾಖೆಯ ಹಿಂದೆ ನಾವಿದ್ದೇವೆ, ಸೌಜನ್ಯ ಮಣ್ಣಾದಂತೆ ದಾಖಲೆಗಳನ್ನು ಮಣ್ಣು ಮಾಡಬೇಡಿ ಎಂದು ವಿನಂತಿಸಿದರು. ಹಣದ ಬಲದಿಂದ ಪ್ರಕರಣವನ್ನು ಮುಚ್ಚುವ ಕೆಲಸ ಆಗುತ್ತಿದೆ, ಆದರೆ ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗದಿದ್ದರೆ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಕೂಡ ಪ್ರತಿಭಟನೆ ನಡೆಸಲಾಗುವುದು ಎಂದು ತಿಮರೋಡಿ ಎಚ್ಚರಿಸಿದರು.

ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿ, ಮಾತನಾಡಿ ಸೌಜನ್ಯ ಪ್ರಕರಣದಲ್ಲಿ ನನ್ನ ಕಾವಿ ತೆಗೆದರೂ ವಿರಮಿಸಲಾರೆ, ಶಾಂತಿಯ ಪ್ರತಿಪಾದಕರು ನಾವು, ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತೇವೆ. ಇಲ್ಲಿ ವ್ಯಕ್ತಿ, ಸಂಸ್ಥೆಯ ವಿರುದ್ಧ ಹೋರಾಟವಲ್ಲ. ಪ್ರಕರಣವನ್ನು ಸಿಬಿಐಗೆ ನೀಡಬೇಕು. ಇಲ್ಲವಾದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ತಿಳಿಸಿದರು.

ಸಾಹಿತಿ ಅತ್ರಾಡಿ ಅಮೃತ ಶೆಟ್ಟಿ ಮಾತನಾಡಿ, ಸೌಜನ್ಯ ಸಾವಿನ ಸೂತಕ ಇನ್ನೂ ಕಳೆದಿಲ್ಲ. ಆದಷ್ಟು ಬೇಗ ಸೂತಕ ಕಳೆಯಬೇಕಾಗಿದೆ. ಸೌಜನ್ಯ ಪ್ರಕರಣ ಆರೋಪಿಗಳು ಅವರ ತಾಯಿಗೆ ಸೇರಿದಂತೆ ಇಡೀ ಹೆಣ್ಣು ಸಮಾಜಕ್ಕೆ ಮಾಡಿದ ಅವಮಾನ. ಇಲ್ಲಿ ನ್ಯಾಯ ಸಿಕ್ಕಿಲ್ಲವಾದಲ್ಲಿ ಅದು ನಮ್ಮ ಸೋಲಲ್ಲ. ನಾವು ಗೆಲ್ಲಿಸಿ ಕಳುಹಿಸಿದ ನಮ್ಮ ಜನಪ್ರತಿನಿಧಿಗಳ ಸೋಲು ಎಂದರು.

belthangady

ಸಾಮಾಜಿಕ ಹೋರಾಟಗಾರ ವಿಷ್ಣುಮೂರ್ತಿ ಭಟ್ ಮಾತನಾಡಿ, ಸೌಜನ್ಯ ಪ್ರಕರಣವನ್ನು ವೃತ್ತ ನಿರೀಕ್ಷಕರ ಹಂತದ ಪೊಲೀಸ್ ಅಧಿಕಾರಿಗಳು ಮಾಡ ಬೇಕಿತ್ತು ಎಂಬ ಸಾಮಾನ್ಯ ಜ್ಞಾನ ಜಿಲ್ಲೆಯ ಹಿಂದಿನ ಎಸ್‍ಪಿಗೆ ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿದ ಭಟ್, ಮಣಿಪಾಲದಲ್ಲಿ ನಡೆದ ಕೃತ್ಯವನ್ನು ಸಾಕ್ಷಿ ಸಹಿತ ಪೊಲೀಸರು ಹಿಡಿಯುವುದಾದರೆ ಧರ್ಮಸ್ಥಳದ ಪ್ರಕರಣದಲ್ಲಿ ಯಾಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.

ವೇದವಲ್ಲಿ ಅವರ ಪತಿ ಡಾ. ಹರಳೆ, ಮಾತನಾಡಿ, ಅನ್ಯಾಯದ ಪರದೆಯನ್ನು ತಾಲೂಕಿನ ಜನತೆ ತೆರೆದಿದ್ದಾರೆ, ಅದನ್ನು ಮುಚ್ಚುವ ಕೆಲಸವಾಗಬೇಕು ಎಂದರು. ಸೌಜನ್ಯ ತಂದೆ ಚಂದಪ್ಪ ಗೌಡ, ತಾಯಿ ಕುಸುಮಾವತಿ, ರಾಷ್ಟ್ರೀಯ ಮಾನವ ಹಕ್ಕು ರಕ್ಷಣಾ ಆಯೋಗದ ಪ್ರಕಾಶ್ ಚೆನ್ನತ್ತಿಲ, ಪಿಯುಎಸ್‍ಎಲ್‍ನ ಪಿ.ಬಿ.ಡೇಸಾ, ಮನ್ಸೂರ್ ಅಹಮ್ಮದ್, ಉಪಸ್ಥಿತರಿದ್ದರು.

ಸೌಜನ್ಯ ತಾಯಿ ಕುಸುಮಾವತಿ ಮಾತಿಗೆ ಆರಂಭಿಸುತ್ತಿದಂತೆ ದುಃಖ ತಡೆಯಲಾರದೆ ಅರ್ಧದಲ್ಲೇ ಮಾತು ನಿಲ್ಲಿಸಿ ಕುಳಿತದ್ದು, ಸಭೆಯಲ್ಲಿದ್ದವರ ಕಣ್ಣಿನಲ್ಲೂ ನೀರು ತರಿಸಿತ್ತು. ತಾಲೂಕಿನ ಉಜಿರೆ, ಬೆಳ್ತಂಗಡಿ, ಮುಂಡಾಜೆ, ವೇಣೂರು, ನಾರಾವಿ, ಅಳದಂಗಡಿ, ಪುಂಜಾಲಕಟ್ಟೆ, ಮಡಂತ್ಯಾರು ಸೇರಿದಂತೆ ತಾಲೂಕಿನಾದ್ಯಂತ ಜನತೆ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರು. ಒಂದು ರೀತಿಯಲ್ಲಿ ತಾಲೂಕಿನಲ್ಲಿ ಅಘೋಷಿತ ಬಂದ್ ಉಂಟಾಗಿತ್ತು. ಎಲ್ಲ್ಲೆಡೆಯಿಂದ ವಾಹನದಲ್ಲಿ ಜನ ಸಾಗರ ಹರಿದುಬಂದ ಕಾರಣ ಗುರು ವಾಯನಕೆರೆ, ಉಜಿರೆ, ಬೆಳ್ತಂಗಡಿಯಲ್ಲಿ ಟ್ರಾಪಿಕ್ ಜಾಮ್ ಉಂಟಾಗಿತ್ತು.

ಸೌಜನ್ಯ ಪರ ಪ್ರತಿಭಟನೆಯಲ್ಲಿ ಸೇರಿದ ಸಾವಿರಾರು ಜನರಲ್ಲಿ ತಮ್ಮ ಇಚ್ಛೆಯ ನುಸಾರ ಹಣ ಹಾಕುವಂತೆ ಹುಂಡಿಯೊಂದನ್ನು ಇಡಲಾಗಿತ್ತು. ಕಾರ್ಯಕ್ರಮ ಮುಗಿದ ನಂತರ ಅಲ್ಲಿ ಸಂಗ್ರಹವಾದ ಹಣವನ್ನು ಲೆಕ್ಕ ಹಾಕಿದಾಗ ಒಟ್ಟು ಮೊತ್ತ ಎರಡು ಲಕ್ಷ ದಾಟಿತ್ತು. ನಿನ್ನೆ ಸಂಗ್ರಹವಾದ ಎರಡು ಲಕ್ಷ ಹಣವನ್ನು ಸೌಜನ್ಯ ಮನೆಯವರ ಮುಂದಿನ ಕಾನೂನು ಹೋರಾಟಕ್ಕೆ ವಿನಿಯೋಗಿಸಲು ನಿರ್ಧರಿಸಲಾಗಿದೆ.

belthangady

ಉಡುಪಿ: ಸೌಜನ್ಯ ಸಹಿತ ಧರ್ಮಸ್ಥಳ ಮತ್ತು ಉಜಿರೆ ಗ್ರಾಮಗಳಲ್ಲಿ ಕಳೆದ 26 ವರ್ಷಗಳಲ್ಲಿ ನಡೆದ ಎಲ್ಲಾ ಅಸಹಜ ಮರಣ, ಆತ್ಮಹತ್ಯೆ, ಕೊಲೆ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಹಕ್ಕೊತ್ತಾಯ ಮಂಡಿಸಿ ಕರ್ನಾಟಕ ಜನಪರ ವೇದಿಕೆಯು ಅಕ್ಟೋಬರ್ 27ರಂದು ಬೆಳಗ್ಗೆ 10 ಗಂಟೆಗೆ ಉಡುಪಿ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ಯುವ ವಿದ್ಯಾರ್ಥಿ ಹಿತ ರಕ್ಷಣಾ ವೇದಿಕೆ ಮತ್ತು ಹಿರಿಯಡ್ಕದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೆಂಬಲ ವ್ಯಕ್ತಪಡಿಸಿದೆ.

ಅ.27 ರಂದು ಉಡುಪಿಯಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ದಲಿತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ದಸಂಸ ಮುಖಂಡ ದೇಜಪ್ಪ ಹಿರಿಯಡ್ಕ ಮನವಿ ಮಾಡಿದ್ದಾರೆ.

ಸೌಜನ್ಯ ಮೇಲೆ ನಡೆದ ಅತ್ಯಾಚಾರ ಇಡೀ ವಿದ್ಯಾರ್ಥಿ ಸಮೂಹದ ಮೇಲೆಯೇ ನಡೆದ ದೌರ್ಜನ್ಯವಾಗಿದೆ. ಆದುದರಿಂದ ಸೌಜನ್ಯಾ ಪರವಾಗಿ ನಡೆಯುವ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಯುವ ವಿದ್ಯಾರ್ಥಿ ಹಿತ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ರಾಘವೇಂದ್ರ ಮಡಿವಾಳ ವಿನಂತಿಸಿದ್ದಾರೆ.

ಪ್ರತಿಭಟನೆ ಅ.27 ಆದಿತ್ಯವಾರ ಬೆಳಗ್ಗೆ 10 ಗಂಟೆಗೆ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ನಡೆಯಲಿದೆ. belthangady

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English