ಮಂಗಳೂರು : ಸಮಾಜದ ಪ್ರತಿಯೊಂದು ಸಮುದಾಯದಲ್ಲೂ ಬಡ ವರ್ಗದವರಿದ್ದಾರೆ. ಮುಸ್ಲಿಂ ಹೆಣ್ಣುಮಕ್ಕಳಿಗೆ ಮಾತ್ರ ನೀಡಲಾಗುವ ವಿದಾಯ್ ಹೆಸರಿನ ಶಾದಿ ಭಾಗ್ಯ ಯೋಜನೆಯನ್ನು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳಗಳು ತೀವ್ರರೀತಿಯಾಗಿ ವಿರೋಧಿಸುತ್ತವೆ ಎಂದು ವಿಶ್ವ ಹಿಂದೂ ಪರಿಷತ್‌ನ ವಿಭಾಗ ಸೇವಾ ಪ್ರಮುಖ್ ಡಾ.ಪಿ.ಅನಂತಕೃಷ್ಣ ಭಟ್ ಹೇಳಿದರು.
ಅವರು ಬುಧವಾರ ನಗರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ ಕೇವಲ ಮುಸ್ಲಿಂ ಹೆಣ್ಣುಮಕ್ಕಳಿಗೆ ವಿವಾಹದ ಸಂದರ್ಭದಲ್ಲಿ ವಸ್ತುಗಳನ್ನು ಖರೀದಿಸುವುದಕ್ಕಾಗಿ ಧನ ಸಹಾಯ ನೀಡುವುದು ರಾಜ್ಯ ಸರ್ಕಾರದ ಪಕ್ಷಪಾತಿ ಹಾಗೂ ವೋಟ್ ಬ್ಯಾಂಕ್ ರಾಜಕಾರಣವಾಗಿದೆ. ಈ ಯೋಜನೆಯಿಂದ ಕೇವಲ ಹಿಂದುಗಳಿಗೆ ಮಾತ್ರವಲ್ಲ ಸಮಾಜದ ಇತರ ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಅನ್ಯಾಯವಾಗಿದೆ ಎಂದು ತಿಳಿಸಿದರು.
ಕರ್ನಾಟಕದ ಸಮಸ್ಥ ಸಮುದಾಯದವರು ಶಾದಿ ಭಾಗ್ಯ ಯೋಜನೆಯನ್ನು ವಿರೋಧಿಸಿ ಧಿಕ್ಕರಿಸಿ ಸರ್ಕಾರದ ವಿರುದ್ದ ಹೋರಾಟವನ್ನು ನಡೆಸಬೇಕು. ವಿಶ್ವ ಹಿಂದು ಪರಿಷತ್ ಈ ಕುರಿತು ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮತ್ತು ಪ್ರತಿಭಟನಾ ಸಭೆಗಳನ್ನು ಹಮ್ಮಿಕೊಳ್ಳಲಿದೆ ಎಂದು ಅವರು ತಿಳಿಸಿದರು.
ವಿಹಿಂಪದ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ಮಾತನಾಡಿ ಶಾದಿ ಭಾಗ್ಯ ಯೋಜನೆಯನ್ನು ಜಾರಿಗೆ ತರುವ ಬದಲು ಸಮಾಜದಲ್ಲಿರುವ ಸಮಸ್ತ ಬಡವರಿಗೆ ಸಹಾಯ ಮಾಡುವಂತಹ ಯೋಜನೆಗಳನ್ನು ಜಾರಿಗೆ ತನ್ನಿ. ಸರ್ಕಾರಗಳು ಯಾವತ್ತೂ ಒಂದು ಸಮಾಜದ ಪರವಾಗಿ ಯೋಜನೆಗಳನ್ನು ಜಾರಿಗೆ ತರಬಾರದು. ಜನಸಾಮಾನ್ಯರಿಂದ ಪಡೆದಂತಹ ತೆರಿಗೆಯ ಹಣವನ್ನು ಸರ್ಕಾರಗಳು ತಮ್ಮ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ತಮಗೆ ಇಚ್ಚೆ ಬಂದಂತೆ ಉಪಯೋಗಿಸಿಕೊಳ್ಳಬಾರದು. ಇಂತಹ ಯೋಜನೆಯನ್ನು ಸಮಸ್ಥ ಜನರು ವಿರೋಧಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಹಿಂಪದ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ, ಜಿಲ್ಲಾ ಕಾರ್ಯದರ್ಶಿ ಗೋಪಾಲ್ ಕುತ್ತಾರ್, ಜಿಲ್ಲಾ ಧರ್ಮಪ್ರಸರಣಾ ಪ್ರಮುಖ್ ಜಿತೇಂದ್ರ ಎಸ್. ಕೊಟ್ಟಾರಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English