ದ.ಕ.ಜಿಲ್ಲಾಡಳಿತದ ವತಿಯಿಂದ 58ನೇ ಕನ್ನಡ ರಾಜ್ಯೋತ್ಸವವ ಆಚರಣೆ

5:56 PM, Friday, November 1st, 2013
Share
1 Star2 Stars3 Stars4 Stars5 Stars
(No Ratings Yet)
Loading...

Rajostava

ಮಂಗಳೂರು : ದ.ಕ.ಜಿಲ್ಲಾಡಳಿತದ ವತಿಯಿಂದ ಮಂಗಳೂರು ನೆಹರೂ ಮೈದಾನದಲ್ಲಿ 58ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಧ್ವಜಾರೋಹಣ ನೆರವೇರಿಸಿ, ಬಳಿಕ ಪಥಸಂಚಲನ ಕಮಾಂಡರ್ ರಿಂದ ಗೌರವವಂದನೆ ಸ್ವೀಕರಿಸಿದರು.

ಬಿ.ರಮನಾಥ ರೈ ಅವರು ಕನ್ನಡ ರಾಜ್ಯೋತ್ಸವದ ಸಂದೇಶದಲ್ಲಿ ನಮ್ಮ ನಾಡಿನ ಭಾಷೆ, ಕಲೆ, ಸಂಸ್ಕೃತಿ ಹಾಗೂ ಪರಂಪರೆಗಳನ್ನು ನೆನೆದು ಅವುಗಳನ್ನು ಪ್ರಾಮಾಣಿಕವಾಗಿ ಜಾರಿಗೆ ತರುವುದರ ಮೂಲಕ ಅವುಗಳನ್ನು ಅಭಿವೃದ್ದಿಗೊಳಿಸುವ ಮಹತ್ವದ ದಿನ. ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಕನ್ನಡ ಬಳಕೆಗೆ ನಮ್ಮ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದು, ಸಮೃದ್ದ ಕರ್ನಾಟಕ ನಿರ್ಮಾಣ ಮಾಡುವುದೇ ನಮ್ಮ ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಕನ್ನಡ ಮಾಧ್ಯಮದಲ್ಲೇ ಉತ್ತಮ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ನೀಡಬೇಕೆಂಬ ನಿಲುವಿಗೆ ಇದೀಗ ರಾಜ್ಯಸರಕಾರ ಬದ್ದವಾಗಿದೆ ಎಂದು ತಿಳಿಸಿದರು.

ಅನೇಕ ಕಲ್ಯಾಣ ಯೋಜನೆಗಳ ಜೊತೆಗೆ ಶಿಕ್ಷಣ ಕ್ಷೇತ್ರದ ಪ್ರಗತಿಗೂ ಹೆಚ್ಚಿನ ಗಮನ ಹರಿಸಲಾಗಿದೆ. ಸರ್ಕಾರವು ಶಾಲಾಮಕ್ಕಳಿಗೆ ಬಿಸಿಯೂಟ ಯೋಜನೆಯನ್ನು ಹಮ್ಮಿಕೊಂಡಿದೆ. ಕಡು ಬಡವರಿಗೆ ನೆರವಾಗುವ ದೃಷ್ಟಿಯಿಂದ ಸರ್ಕಾರ ಒಂದು ರೂ.ಗೆ ಒಂದು ಕೆ.ಜಿ ಅಕ್ಕಿಕೊಡುವ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಜಿಲ್ಲೆಯಲ್ಲಿ ಪ್ರಸ್ತುತ 21,079 ಅಂತ್ಯೋದಯ, 1,79,293 ಬಿಪಿ‌ಎಲ್ ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.ಅದೆ ರೀತಿ ಕ್ಷೀರ ಭಾಗ್ಯ ಯೋಜನೆ ಹಮ್ಮಿಕೊಂಡಿದ್ದು, ಅಂಗನವಾಡಿ ಯಿಂದ 1೦ನೇ ತರಗತಿ ವರೆಗಿನ 1.2ಕೋಟಿ ಮಕ್ಕಳಿಗೆ ನಮ್ಮ ಸರ್ಕಾರ ಉಚಿತವಾಗಿ 150 ಮಿ.ಲಿ ಹಾಲು ನೀಡುತ್ತಿದೆ. ಹಾಗೂ ಹಾಲು ಉತ್ಪಾದನೆಯನ್ನು ರಾಜ್ಯದಲ್ಲಿ ಮತ್ತಷ್ಟು ಉತ್ತೇಜಿಸಿ ರೈತರ ಆರ್ಥಿಕ ಮಟ್ಟವನ್ನು ಸುಧಾರಿಸಲು ಪ್ರೋತ್ಸಾಹ ಧನವನ್ನು 4ರೂ.ಗೆ ಹೆಚ್ಚಿಸಲಾಗಿದೆ. ಇದಕ್ಕಾಗಿ 818ಕೋಟಿ ಕೋಟಿ ಅನುದಾನ ನಿಗದಿಪಡಿಸಲಾಗಿದೆ .ಪ್ರಾದೇಶಿಕ ಅಸಮತೋಲನ ಕೂಗನ್ನು ನಿವಾರಿಸಲು ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ನೀಡಲು ಕೇಂದ್ರ ಸರಕಾರ ಅಧಿಕೃತ ಮುದ್ರೆ ಯೊತ್ತಿದ್ದು, ರಾಷ್ಟ್ರಪತಿಗಳ ಅಂಗೀಕಾರವೂ ದೊರೆತ್ತಿದೆ.

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಭಾಷೆಯ ಬಳಕೆಗಾಗಿ ಯೂನಿಕೋಡ್ ಕನ್ನಡ ಸಾಫ್ಟ್‌ವೇರ್ ನ್ನು ಜನಪ್ರಿಯಗೊಳಿಸಲು ಈಗಾಗಲೇ ಸರಕಾರಕ್ಕೆ ವರದಿ ನೀಡಲಾಗಿದೆ. ಕರ್ನಾಟಕವನ್ನು ಗುಡಿಸಲು ರಹಿತ ರಾಜ್ಯವನ್ನಾಗಿ ರೂಪಿಸುವ ಉದ್ದೇಶದಿಂದ ಪ್ರತಿ ವರ್ಷವೂ ಹೊಸದಾಗಿ 3ಲಕ್ಷ ಮನೆಗಳನ್ನು ನಿರ್ಮಾಣ ಮಾಡುವ ಗುರಿಹಾಕಿಕೊಳ್ಳಲಾಗಿದೆ. ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ಯೋಜನೆಗಳಡಿ ಬಾಕಿ ಇರುವ ದಂಡ ಸಹಿತ ವಿದ್ಯುತ್ತ್ ದರವನ್ನು ಮನ್ನಮಾಡಲಾಗಿದೆ. ಬಡತನ ರೇಖೆಗಿಂತ ಕೆಳಗಿರುವ 4೦ ವರ್ಷ ದಾಟಿದ ಅವಿವಾಹಿತ ಮಹಿಳೆಯರಿಗೆ ಹಾಗೂ ಬಡತನ ರೇಖೆಗಿಂತ ಕೆಳಗಿರುವ ವಿಚ್ಚೇದಿತ ಮಹಿಳೆಯರಿಗೆ ಮಾಸಿಕ 5೦೦ ರೂ.ಗಳ ಮಾಸಾಶನ ಒದಗಿಸುವ ಮನಸ್ವಿನಿ ಯೋಜನೆಯನ್ನು ನೂತನವಾಗಿ ಜಾರಿಗೆ ತರಲಾಗಿದೆ. ಲೈಂಗಿಕ ಅಲ್ಪಸಂಖ್ಯಾತರಿಗೆ ಮಾಸಿಕ 5೦೦ ರೂ.ಗಳ ಮಾಸಾಶನ ಒದಗಿಸುವ ಹೊಸ ಯೋಜನೆ ಮೈತ್ರಿಯನ್ನು ಈ ಸಾಲಿನಿಂದ ಜಾರಿಗೊಳಿಸಿದೆ ಎಂದು ಹೇಳಿದರು.

ಕಾಸರಗೋಡಿನಲ್ಲಿ ಕನ್ನಡ ಚಟುವಟಿಕೆಗಳಿಗೆ ಉತ್ತೇಜಿಸುವ ದೃಷ್ಟಿಯಿಂದ ಮಂಜೇಶ್ವರದಲ್ಲಿರುವ ರಾಷ್ಟ್ರ ಕವಿ ಎಂ.ಗೋವಿಂದ ಪೈ ಪ್ರತಿಷ್ಟಾನಕ್ಕೆ ಸಭಾಂಗಣ ನಿರ್ಮಾಣಕ್ಕೆ 5೦ಲಕ್ಷ ರೂ ಅನುದಾನವನ್ನು ರಾಜ್ಯಬಜೆಟ್ ನಲ್ಲಿ ಒದಗಿಸಲಾಗಿದೆ. ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಜೈನ ಕವಿ ರತ್ನಾಕರವರ್ಣಿ ಅಧ್ಯಯನ ಪೀಠ ಸ್ಥಾಪಿಸಲು ಒಂದು ಕೋಟಿ ರೂ ಒದಗಿಸಲಾಗುತ್ತಿದೆ. ಕೋಟಿ ಚೆನ್ನಯ್ಯರ ಜನ್ಮಸ್ಥಳವಾದ ಪಡುಮಲೈಯಲ್ಲಿ ದೊರೆತ ಕರುಹುಗಳನ್ನು ಅಭಿವೃದ್ದಿ ಪಡಿಸಲು 5 ಕೋಟಿ ರೂಗಳನ್ನು ನೀಡಲಾಗುತ್ತಿದೆ ಎಂದರು.

ಮತ್ಸ್ಯಾಶ್ರಯ ಯೋಜನೆಯಡಿ ಗೃಹ ನಿರ್ಮಾಣದ ಸಹಾಯ ಧನವನ್ನು 6೦,೦೦೦ ರೂಗಳಿಂದ 1.2೦ಲಕ್ಷ ರೂಗಳಿಗೆ ಹೆಚ್ಚಿಸಲಾಗುವುದು. ಮೀನುಗಾರರಿಗೆ ಉಚಿತವಾಗಿ ನೀಡುವ ಮೀನುಗಾರಿಕೆ ಸಲಕರಣೆಗಳ ಕಿಟ್‌ನ ಮೌಲ್ಯವನ್ನು 5000ರೂ ಗಳಿಂದ 1೦,೦೦೦ ರೂಗಳಿಗೆ ಹೆಚ್ಚಿಸಲಾಗುವುದು. ರಾಜ್ಯದ ಮೀನುಗಾರಿಕಾ ಇಲಾಖಾ ಕಾರ್ಯಕ್ರಮಕ್ಕಾಗಿ 2013-14ನೇ ಸಾಲಿಗೆ 229 ಕೋಟಿ ರೂ.ಒದಗಿಸಲಾಗಿದೆ ಎಂದು ತಿಳಿಸಿದರು.

ಗಂಧದ ಮರದ ನೆಡುತೋಪುಗಳನ್ನು ಹೆಚ್ಚಿಸುವುದಕ್ಕಾಗಿ ಸಿರಿಚಂದನವನ ಕಾರ್ಯಕ್ರಮ ಜಾರಿಗೆಗೊಳಿಸಲಾಗಿದೆ. ಸಾರಿಗೆ ಸೇವೆಯನ್ನು ಉನ್ನತೀಕರಣಗೊಳಿಸಲು ಮಂಗಳೂರು ಮತ್ತು ಗುಲ್ಬರ್ಗಾ ಗಳಲ್ಲಿ 30 ಕೋಟಿ ರೂ ವೆಚ್ಚದಲ್ಲಿ ವಾಹನ ಚಾಲಕರ ತರಭೇತಿ ಸಂಸ್ಥೆ ಸ್ಥಾಪಿಸಲು ಉದ್ದೇಶಿಸಲಾಗಿದೆ. ಒಟ್ಟಾರೆಯಾಗಿ ಕನ್ನಡ ರಾಜ್ಯವನ್ನು ಬಲಿಷ್ಟವಾಗಿ ಕಟ್ಟಿ, ಕನ್ನಡಿಗರಿಗೆ ಉತ್ತಮ ನಾಳೆಗಳನ್ನು ನೀಡಲು ಸರಕಾರವು ಅಭಿವೃದ್ದಿಯ ಮಂತ್ರದೊಂದಿಗೆ ದೃಢವಾದ ಹೆಜ್ಜೆಗಳನ್ನಿಡುತ್ತಾ ಸಾಗುತ್ತಲಿದೆ ಎಂದ ಸಚಿವ ಬಿ.ರಮನಾಥ ರೈ, ದ.ಕ. ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಬಗ್ಗೆ ತಿಳಿಸಿದರು.

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವಂತಹ ಜಿಲ್ಲೆಯ 20 ಮಂದಿ ಸಾಧಕರಾದ ಸಾಹಿತ್ಯ ಕ್ಷೇತ್ರ-ಬಿ.ಎಲ್.ನಾಗರಾಜ್, ಸಿಲ್ವರ್ ಬ್ಯಾಂಡ್ ವಾದಕ-ಹ್ಯಾರಿ ಡಿಸೋಜ, ಕಲಾ ವಿಭಾಗ-ಸುರೇಶ್ ಅತ್ತಾವರ, ಕನ್ನಡಪರ ಸಂಘಟನೆ- ಉಳ್ತೂರು ಅಣ್ಣಯ್ಯ ಕುಲಾಲ್, ಜಾನಪದ ವಿದ್ವಾಂಸ-ದಯಾನಂದ ಕತ್ತಲ್ಸಾರ್, ಜಾನಪದ ಕ್ಷೇತ್ರ-ಅಣ್ಣು ಪರವನ್ ಯಾನೆ ಕುಟ್ಟಿ ಪರವನ್, ಸಂಶೋಧನೆ ಮತ್ತು ಗಡಿನಾಡ ಸಾಂಸ್ಕೃತಿಕ ಸೇವೆ-ಡಾ.ಡಿ.ಸಿ.ಚೌಟ, ರಂಗಭೂಮಿ ಕ್ಷೇತ್ರ-ದಿನೇಶ್ ಅತ್ತಾವರ, ಪತ್ರಿಕೋದ್ಯಮ(ನಗರ) ಪಿ.ಬಿ.ಹರೀಶ್ ರೈ ,(ಗ್ರಾಮಾಂತರ)-ಹರೀಶ್ ಬಂಟ್ವಾಳ, ಸಮಾಜಸೇವೆ-ಎಲಿಯಾಸ್ ಸಾಂಕ್ಟಿಸ್, ಚಲನಚಿತ್ರ-ಅರವಿಂದ ಬೋಳಾರ್, ಕಲೆಗೆ ಪ್ರೋತ್ಸಾಹ-ವಿಜಯನಾಥ ವಿಠಲಶೆಟ್ಟಿ, ಪರಿಸರ-ಮಾಧವ ಉಳ್ಳಾಲ, ಶಿಕ್ಷಣ ವಿಶಿಷ್ಟ ಸಾಹಿತ್ಯ ಸೇವೆ-ಉಮೇಶ್ ರಾವ್ ಎಕ್ಕಾರ್, ಸಂಪ್ರದಾಯಿಕ ವಾದ್ಯ ಸಂಗೀತ-ಡಿ.ಬಿ.ಪ್ರಕಾಶ್ ದೇವಾಡಿಗ, ಕನ್ನಡ ಸಾಹಿತ್ಯ ಸೇವೆ-ಶಾಂತಿ ಪ್ರಕಾಶನ, ಸಂಘಟನೆ-ಮಾರುತಿ ಯುವಕ ಮಂಡಲ, ಉಳ್ಳಾಲ ಇವರಿಗೆ 2013ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಜಿಲ್ಲಾಮಟ್ಟದ ಆಯ್ಕೆ ಸಮಿತಿಯಿಂದ 13-14ನೇ ಸಾಲಿನಲ್ಲಿ ಪ್ರತೀ ಕ್ಷೇತ್ರದಲ್ಲಿ ಇಬ್ಬರಂತೆ ಒಟ್ಟು 8 ಮಂದಿ ಅಸಾಧಾರಣ ಪ್ರತಿಭೆ ತೋರಿದ ಮಕ್ಕಳಾದ ನಿಹಾಲ್, ಅಮಿತ್.ವಿ.ಕಾಮತ್, ಹರಿತಾ ಎಂ.ಬಿ, ಅನುಷಾ ಕೆ, ಸ್ವಾತಿ ಕೆ.ಎಂ, ಮನೀಶ್ ಶೆಣೈ, ನಿರೀಕ್ಷಾ ಯು.ಕೆ, ಸ್ವಾತಿ ಭಟ್ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕೊನೆಯಲ್ಲಿ ನಗರದ ಉತ್ತರವಲಯದ ಪ್ರೌಢಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಆಕರ್ಷಕ ಪಥಸಂಚಲನದಲ್ಲಿ ಭಾರತ್ ಸೇವಾದಳ ಬಾಲಕಿಯರ ತುಕಡಿಯು ಪ್ರಥಮ ಸ್ಥಾನ ಗಳಿಸಿತು ಅಂತಯೇ ಎನ್.ಸಿ.ಸಿ ನೇವಲ್ ಸೀನಿಯರದ ವಿಭಾಗದ ತುಕಡಿಯು ದ್ವಿತೀಯ ಸ್ಥಾನ ಪಡೆದುಕೊಂಡಿತು.

ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೊರಗಪ್ಪ ನಾಯ್ಕ, ಶಾಸಕರಾದ ಜೆ.ಆರ್.ಲೊಬೋ, ಮೊಯ್ದಿನ್ ಬಾವಾ, ಜಿಲ್ಲಾಧಿಕಾರಿ ಎನ್.ಪ್ರಕಾಶ್, ಪೊಲೀಸ್ ಆಯುಕ್ತ ಮನೀಷ್ ಕರ್ಬೀಕರ್, ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತಾನು ಸಿನ್ಹ, ಸಹಾಯಕ ಕಮಿಷನರ್ ದಯಾನಂದ್, ಕಲ್ಕೂರ ಪ್ರತಿಷ್ಟಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ,ಮನಪಾ ಆಯುಕ್ತ ಶಾನಡಿ ಅಜಿತ್ ಕುಮಾರ್ ಹೆಗ್ಡೆ,ಹಾಗೂ ಇನ್ನಿತ್ತರ ಗಣ್ಯರು ಉಪಸ್ಥಿತರಿದ್ದರು.

Rajostava

Rajostava

Rajostava

Rajostava

Rajostava

Rajostava

Rajostava

Rajostava

Rajostava

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English