`ಅನಧಿಕೃತ ನಿರ್ಮಾಣ ಸ್ವ ಇಚ್ಛೆಯಿಂದ ತೆರವಿಗೆ ಡಿಸೆಂಬರ್ 15ರ ಗಡುವು’

9:10 PM, Monday, November 29th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಜಿಲ್ಲಾಧಿಕಾರಿ ಶ್ರೀ ಸುಬೋಧ್ ಯಾದವ್ಮಂಗಳೂರು : ಸುಪ್ರೀಂ ಕೋರ್ಟ್ ಆದೇಶದನ್ವಯ ಜನಪರವಾಗಿ ತೆಗೆದುಕೊಂಡಿರುವ ಅನಧಿಕೃತ ಧಾರ್ಮಿಕ ನಿರ್ಮಾಣಗಳ ತೆರವು ಕಾರ್ಯಾಚರಣೆಯನ್ನು ಸಂಬಂಧಪಟ್ಟವರು ಸ್ವ ಇಚ್ಛೆಯಿಂದ ಕೈಗೊಳ್ಳಲು ಡಿಸೆಂಬರ್ 15ರವರೆಗೆ ಜಿಲ್ಲಾಡಳಿತ ಕಾಲಾವಕಾಶ ನೀಡಿದೆ.
ಇಂದು ಈ ಸಂಬಂಧ ಜಿಲ್ಲಾಧಿಕಾರಿ ಶ್ರೀ ಸುಬೋಧ್ ಯಾದವ್ ಅವರ ನೇತೃತ್ವದಲ್ಲಿ ಜರುಗಿದ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಜನಪರ ನಿರ್ಧಾರವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಈಗಾಗಲೇ ಜಿಲ್ಲಾ  ಮತ್ತು ತಾಲೂಕು ಮಟ್ಟದಲ್ಲಿ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿತ್ತು.ಈ ಸಭೆಗಳಿಗೆ ಧಾರ್ಮಿಕ ಮುಖಂಡರು ಹಾಜರಾಗಿದ್ದು, ಸ್ಥಳೀಯರಲ್ಲಿ ಅರಿವು ಮೂಡಿಸಲು ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅನಧಿಕೃತವಾಗಿದ್ದು, ಸಾರ್ವಜನಿಕರ ದೈನಂದಿನ ವ್ಯವಹಾರಗಳಿಗೆ ತೊಂದರೆಯಾಗಿರುವ ನಿರ್ಮಾಣಗಳನ್ನು ತೆಗೆಯಲು ಬಹುತೇಕರು ಸ್ವ ಇಚ್ಛೆಯಿಂದ ಮುಂದೆ ಬಂದಿರುವರೆಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 1579 ಅನಧಿಕೃತ ನಿರ್ಮಾಣಗಳನ್ನು ಗುರುತಿಸಲಾಗಿದ್ದು, ಪುತ್ತೂರಿನಲ್ಲಿ 152, ಕಡಬದಲ್ಲಿ 150, ಮಂಗಳೂರಿನಲ್ಲಿ 363, ಬಂಟ್ವಾಳದಲ್ಲಿ 352, ಬೆಳ್ತಂಗಡಿಯಲ್ಲಿ 298, ಸುಳ್ಯದಲ್ಲಿ 136 ಮೂಡಬಿದ್ರೆಯಲ್ಲಿ 98 ಇವೆ. ಸ್ವ ಇಚ್ಛೆಯಿಂದ ತೆರವು ಗೊಳಿಸುವ ಗಡುವು ಮುಗಿದ ಬಳಿಕ, ಆದ್ಯತೆಯ ನೆಲೆಯಲ್ಲಿ ಜಿಲ್ಲಾಡಳಿತ  ಸ್ಥಳೀಯಾಡಳಿತದ ನೆರವಿನಿಂದ ತೆರವು ಕಾರ್ಯಾಚರಣೆ ನಡೆಸಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಆದ್ಯತಾ ಪಟ್ಟಿಯನ್ನು ಸ್ಥಳೀಯ ಅಧಿಕಾರಿಗಳು ಡಿಸೆಂಬರ್ 10ರೊಳಗೆ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಶ್ರೀ ಸುಬೋಧ್ ಯಾದವ್  ಸೂಚನೆ ನೀಡಿದರು. ಪಟ್ಟಿ ತಯಾರಿಸುವಾಗ ಪೊಲೀಸ್ ಇಲಾಖೆಯ ಜೊತೆಗೂ ಚರ್ಚಿಸಬೇಕೆಂದು ಸಲಹೆ ನೀಡಿದ ಜಿಲ್ಲಾಧಿಕಾರಿಗಳು, ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಇನ್ನಷ್ಟು ಸಭೆಗಳನ್ನು ನಡೆಸುವ ಹಾಗೂ ಸ್ಥಳೀಯವಾಗಿ ವಿವೇಚನ ಶಕ್ತಿಗನುಸಾರ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಸ್ಥಳೀಯ ಉನ್ನತಾಧಿಕಾರಿಗಳಿಗೆ ನೀಡಿದರು.
ಸಭೆಯಲ್ಲಿ ಪೊಲೀಸ್ ಅಧೀಕ್ಷಕರಾದ ಡಾ. ಸುಬ್ರಮಣ್ಯೇಶ್ವರ ರಾವ್, ಅಪರ ಜಿಲ್ಲಾಧಿಕಾರಿ ಶ್ರೀ ಪ್ರಭಾಕರ ಶರ್ಮಾ, ಡಿಸಿಪಿ ಶ್ರೀ ರಮೇಶ್, ಸಿಇಒ ಶ್ರೀ ಪಿ. ಶಿವಶಂಕರ್, ಮಂಗಳೂರು ಎಸಿ, ಪುತ್ತೂರು ಎಸಿ, ಎಲ್ಲ ತಾಲೂಕಿನ ತಹಸೀಲ್ದಾರ್ ಸೇರಿದಂತೆ ಎಲ್ಲ ಹಿರಿಯ ಹಾಗೂ ಅನುಷ್ಠಾನಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English