ಮಂಗಳೂರು : ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ನಿ. ಇದರ ಸ್ಥಾಪಕಾಧ್ಯಕ್ಷ ದಿ| ಆರ್.ಡಿ. ಮೆಂಡನ್ ಅವರ ಸವಿನೆನೆಪಿಗಾಗಿ ಮಂಗಳೂರು ಮೀನುಗಾರಿಕಾ ಬಂದರು ಬಳಿ ನಿರ್ಮಿಸಿರುವ ನೂತನ ಕಚೇರಿ ಕಟ್ಟಡದ ಉದ್ಘಾಟನೆ ಹಾಗೂ ಸಂಸ್ಥೆಯ ವಿವಿಧ ಸೌಲಭ್ಯಗಳ ವಿತರಣಾ ಸಮಾರಂಭವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಗುರುವಾರ ಉದ್ಘಾಟಿಸಿದರು.
ಸಚಿವ ವಿನಯ ಕುಮಾರ್ ಸೊರಕೆ ಅವರು ಮಾತನಾಡಿ, ಮೀನುಗಾರಿಕಾ ಕ್ಷೇತ್ರಕ್ಕೆ ರಾಜ್ಯ ಸರಕಾರ ಹೆಚ್ಚಿನ ಒತ್ತು ನೀಡಿದ್ದು, ಈ ದಿಶೆಯಲ್ಲಿ ಈಗಾಗಲೇ ಹಲವು ಯೋಜನೆಗಳನ್ನು ಪ್ರಕಟಿಸಿ ಅನುಷ್ಠಾನಗೊಳಿಸುತ್ತಿದೆ. ಈ ಬಾರಿಯ ರಾಜ್ಯ ಮುಂಗಡಪತ್ರದಲ್ಲಿ ಮೀನುಗಾರರಿಗೆ ಸಬ್ಸಿಡಿ ದರದಲ್ಲಿ ನೀಡುವ ಡೀಸೆಲ್ ಹಾಗೂ ಸೀಮೆಎಣ್ಣೆ ಪ್ರಮಾಣವನ್ನು ಸರಕಾರ ಹೆಚ್ಚಿಸಿದೆ. ಮತ್ಸಾಶ್ರಯ ಯೋಜನೆಯಲ್ಲಿ ಸಹಾಯಧನವನ್ನು ರೂ.1.20 ಲಕ್ಷ ಗೇರಿಸಿದ್ದು, 7,500 ಮನೆಗಳನ್ನು ನಿರ್ಮಿಸುವ ಗುರಿ ಇರಿಸಿದೆ. ಕುಳಾಯಿಯಲ್ಲಿ 160 ಕೋ. ರೂ. ವೆಚ್ಚದಲ್ಲಿ ಮೀನುಗಾರಿಕಾ ಬಂದರು ನಿರ್ಮಾಣ ಕುರಿತಂತೆ ಈಗಾಗಲೇ ಪ್ರಕ್ರಿಯೆಗಳು ಆರಂಭಗೊಂಡಿದೆ. ಹೆಜಮಾಡಿಯಲ್ಲಿ 100 ಕೋ. ರೂ. ವೆಚ್ಚದಲ್ಲಿ ಮೀನುಗಾರಿಕಾ ಬಂದರು ನಿರ್ಮಾಣವಾಗಲಿದೆ. ಮರವಂತೆಯಲ್ಲಿ ಕೇರಳ ಮಾದರಿಯಲ್ಲಿ ನಾಡದೋಣಿ ಮೀನುಗಾರರಿಗೆ ಜಟ್ಟಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಕೊಡೇರಿ ಬಂದರು ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಸಮುದಾಯದ ಅಭಿವೃದ್ಧಿಗೆ ಕೊಡುಗೆ ಸಲ್ಲಿಸಿದವರನ್ನು ಸ್ಮರಿಸಬೇಕಾದುದು ಎಲ್ಲರ ಹೊಣೆ. ದಿ| ಎಸ್.ಕೆ. ಅಮೀನ್, ಮಧ್ವರಾಜ್ ಮುಂತಾದ ಮಹನೀಯರು ಬಹಳಷ್ಟು ಕೊಡುಗೆ ನೀಡಿದ್ದಾರೆ. ಡಾ| ಜಿ. ಶಂಕರ್ ಅವರು ಬಹಳಷ್ಟು ಸೇವೆಸಲ್ಲಿಸುತ್ತಿದ್ದಾರೆ.
ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಜೆ.ಆರ್. ಲೋಬೋ, ಮೀನುಗಾರಿಕಾ ಕ್ಷೇತ್ರದಲ್ಲಿ ಸಾವಿರಾರು ಕೋ. ರೂ. ವ್ಯವಹಾರ ನಡೆಯುತ್ತಿದ್ದು, ಸಾವಿರಾರು ಕುಟುಂಬಗಳಿಗೆ ಜೀವನಾಧಾರವಾಗಿದೆ. ಗಣನೀಯ ವಿದೇಶಿ ಬಂಡವಾಳ ತರುತ್ತಿದೆ. ಈ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಅಗತ್ಯ ಎಂದರು.
ಸಂಸ್ಥೆಯ ವಿವಿಧ ಸೌಲಭ್ಯಗಳನ್ನು ಸಚಿವ ವಿನಯ ಕುಮಾರ್ ಸೊರಕೆ, ಶಾಸಕ ಜೆ.ಆರ್. ಲೋಬೋ ವಿತರಿಸಿದರು.
ಈ ಸಮಾರಂಭದಲ್ಲಿ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಗಣಪತಿ ಭಟ್, ನಿತಿನ್ ಕುಮಾರ್, ಬೇಬಿ ಎಸ್. ಸಾಲ್ಯಾನ್, ಲತೀಫ್, ರತಿಕಲಾ ಹಾಗೂ ಸುರೇಶ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English