ಮಂಗಳೂರು : ಬಿಎಸ್‌ಎನ್‌ಎಲ್ ನೌಕರರ ಫೆಡರೇಶನ್ ನ ಮೂರನೇ ಜಿಲ್ಲಾ ಮಟ್ಟದ ಸಮ್ಮೇಳನ ವನ್ನು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್,ಲೋಬೊ ಶುಕ್ರವಾರ ನ 15, 2013 ರಂದು ನಗರದ ನಾಸಿಕ್ ಬಂಗೇರ ಹಾಲ್ ನಲ್ಲಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಒಂದು ಕಾಲದಲ್ಲಿ ದೂರವಾಣಿ ಸಂಪರ್ಕ ಹೊಂದುವುದು ಪ್ರತಿಷ್ಟೆಯಾಗಿತ್ತು, ಇಂದು ದೂರವಾಣಿ ಜಗತ್ತಿನಲ್ಲಿ ಕ್ರಾಂತಿಯಾಗಿದೆ ಪ್ರತಿಯೊಬ್ಬರಿಗೂ ದೂರ್ವಾಣಿ ಸಂಪರ್ಕ ಕೈಗೆಟಕುವ ದರದಲ್ಲಿ ಸಿಗುತ್ತಿದೆ. ಗ್ರಾಹಕರಿಗೆ ಅನೇಕ ಆಯ್ಕೆಯ ಅವಕಾಶಗಳಿವೆ. ಬಿಎಸ್‌ಎನ್‌ಎಲ್ ಜನರಿಗೆ ವಿಭಿನ್ನವಾದ ಸೇವೆ ನೀಡುತ್ತಿದೆ, ಜನರು ನಿರೀಕ್ಷಿಸುವ ರೀತಿಯಲ್ಲಿ ಸೇವೆ ನೀಡದಾಗ ಸಂಸ್ಥೆಯು ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.
ಯಾವುದೇ ಒಂದು ಸಂಸ್ಥೆಯಲ್ಲಿನ ನೌಕರರು ಉತ್ತಮ ಸೇವೆ ನೀಡುವ ಮೂಲಕ ಸಂಸ್ಥೆಯನ್ನು ಬೆಳೆಸಿದರೆ ಸಂಸ್ಥೆಯ ಬೆಳವಣಿಗೆಯೊಂದಿಗೆ ನೌಕರರ ಶ್ರೇಯೋಭಿವೃದ್ದಿಯೂ ಆಗುತ್ತದೆ. ಇದೀಗ ಗ್ರಾಹಕರ ಆಯ್ಕೆಗೆ ಅವಕಾಶಗಳು ತುಂಬಾ ಇದ್ದು, ಅವರನ್ನು ತಮ್ಮೆಡೆಗೆ ಸೆಳೆಯುವಲ್ಲಿ ನಾವು ಕಾರ್ಯ ಪ್ರವೃತ್ತರಾಗಬೇಕು ಎಂದರು.
ರಾಜೀವಗಾಂಧಿ ಪ್ರಧಾನಿಯಾಗಿರುವ ಸಂದರ್ಭದಲ್ಲಿ ಸ್ಯಾಮ್ ಪಿತ್ರೋಡ ಸಮಿತಿಯನ್ನು ರಚಿಸಿ ಟೆಲಿಫೋನ್ ಕ್ಷೇತ್ರದಲ್ಲಿ ಸರಳ ತಾಂತ್ರಿಕತೆಯನ್ನು ಅಳವಡಿಸುವಲ್ಲಿ ಯಶಸ್ವಿಯಾದರು ಎಂದು ತಿಳಿಸಿದರು.
ಸಮಾರಂಭದಲ್ಲಿ ಅಕ್ಷರ ಸಂತನೆಂಬ ಖ್ಯಾತಿಗೆ ಪಾತ್ರರಾಗಿರುವ ಹರೇಕಳ ಹಾಜಬ್ಬ, ನಿವೃತ್ತ ಬಿಎಸ್‌ಎನ್‌ಎಲ್ ಅಧಿಕಾರಿ ಎಂ.ಆರ್.ನಾಗರಾಜ್ ಅವರುಗಳನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಸೂರಜ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಮಂಜುನಾಥ್ ರೇವಣ್ಕರ್, ಬಿಎಸ್‌ಎನ್‌ಎಲ್ ಮಂಗಳೂರಿನ ಪ್ರಿನ್ಸಿಪಾಲ್ ಜನರಲ್ ಮ್ಯಾನೇಜರ್ ವೈ.ಸಿ.ಮಿಶ್ರ, ಕೆ.ಎಂ.ಶೆಟ್ಟಿ, ಸಿ.ಕೆ.ಮತಿವನನ್, ವಾಸುನಾಯಕ್, ಹಿರಿಯಣ್ಣ, ನಾಗಪ್ಪ ಪೂಜಾರಿ, ಕೆ.ಪದ್ಮನಾಭ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English