ಮಂಗಳೂರು :ವಿಶ್ವಾಸದ ವರ್ಷಾಚರಣೆ ಸಮಾರೋಪದ ಅಂಗವಾಗಿ ಮಂಗಳೂರು ಧರ್ಮ ಪ್ರಾಂತ್ಯದ ವತಿಯಿಂದ ಮೂರು ದಿನಗಳ ವಿಶ್ವಾಸ ಸಮ್ಮೇಳನವನ್ನು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ರೈ| ರೆ| ಡಾ| ಅಲೋಶಿಯಸ್ ಪಾವ್ ಡಿ’ಸೋಜಾ ಶುಕ್ರವಾರ ಉದ್ಘಾಟಿಸಿದರು.
ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ರೈ| ರೆ| ಡಾ| ಅಲೋಶಿಯಸ್ ಪಾವ್ ಡಿ’ಸೋಜಾ ಕ್ಯಾಥೊಲಿಕ್ ಕ್ರೈಸ್ತರು ಆಚರಿಸಿಕೊಂಡು ಬಂದಿರುವ ವಿಶ್ವಾಸದ ವರ್ಷಾಚರಣೆ ದೇವರ ಮೇಲಿರುವ ವಿಶ್ವಾಸ ಬಲಪಡಿಸಲು ಹಾಗೂ ಅದು ಜೀವನದಲ್ಲಿ ಸ್ಥಿರವಾಗಿ ಉಳಿಯಲು ಪೂರಕವಾಗಬೇಕು ಎಂದು ಹೇಳಿದರು.ವಿಶ್ವಾಸ ಬಲಪಡಿಸಿ ಅದನ್ನು ಜೀವಂತವಾಗಿರಿಸಿದ ಬಗ್ಗೆ ಸಾಕ್ಷಿಯಾಗಿ ಕೆಲವೊಂದು ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಅವರು ಸಲಹೆ ಮಾಡಿದರು.
ನಿವೃತ್ತ ಪೋಪ್ ಬೆನೆಡಿಕ್ಟ್ – 16 ಅವರು ವಿಶ್ವಾಸದ ವರ್ಷಾಚರಣೆ ಘೋಷಿಸಿ 2012 ಅ. 11ರಂದು ಚಾಲನೆ ನೀಡಿದ್ದರು. ಹಾಲಿ ಪೋಪ್ ಫ್ರಾನ್ಸಿಸ್ ಅವರು ವಿಶ್ವಪತ್ರ ಹೊರಡಿಸಿ ಅರ್ಥವತ್ತಾಗಿ ಆಚರಿಸಲು ಕರೆ ನೀಡಿದ್ದರು ಎಂದು ಸ್ಮರಿಸಿದ ಧರ್ಮಾಧ್ಯಕ್ಷರು, ಕಳೆದ ಒಂದು ವರ್ಷದ ಅವಧಿಯಲ್ಲಿ ಹಲವು ಕಾರ್ಯಕ್ರಮ ನಡೆಸಲಾಗಿದ್ದು, ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಮೂರು ದಿನಗಳ ವಿಶ್ವಾಸ ಸಮ್ಮೇಳನಕ್ಕೆ ಸಹಕರಿಸುತ್ತಿರುವವರನ್ನು ಅಭಿನಂದಿಸಿದರು.
ಧರ್ಮಪ್ರಾಂತ್ಯದ ಪ್ರಧಾನ ಧರ್ಮಗುರು ಹಾಗೂ ವಿಶ್ವಾಸ ವರ್ಷಾಚರಣೆ ಸಮಾರಂಭದ ಸಂಚಾಲಕ ಮೊ| ಡೆನ್ನಿಸ್ ಮೊರಾಸ್ ಪ್ರಭು, ಫಾ| ವಿನ್ಸೆಂಟ್ ಮೊಂತೇರೊ, ಫಾ| ನೆಲ್ಸನ್, ಫಾ| ಮೆಲ್ವಿನ್ ಪಿಂಟೊ ಮೊದಲಾದವರು ಉಪಸ್ಥಿತರಿದ್ದರು.
ವಿಶ್ವಾಸ ಸಮ್ಮೇಳನದ ಮೊದಲ ದಿನದ ಕಾರ್ಯಕ್ರಮದಲ್ಲಿ ‘ದೇವರು ನಮ್ಮ ಸೃಷ್ಟಿಕರ್ತ’ ಎಂಬ ವಿಷಯದ ಮೇಲೆ ಸ್ತುತಿ ಮತ್ತು ಆರಾಧನೆ (ಫಾ| ಕ್ಲಿಫರ್ಡ್ ಫೆರ್ನಾಂಡಿಸ್), ‘ವಿಶ್ವಾಸ ಎಂದರೇನು’ (ಫಾ| ಜೋಸೆಫ್ ಎಡಟ್ಟು) ಮತ್ತು ‘ವಿಶ್ವಾಸದ ಪ್ರತಿಫಲಗಳು’ (ಫಾ| ವಿನೀತ್) ಎಂಬ ವಿಷಯಗಳ ಮೇಲೆ ಪ್ರವಚನ ನಡೆಯಿತು. ಫಾ| ಅಬ್ರಹಾಂ ಅವರು ಪರಮ ಪ್ರಸಾದದ ಆರಾಧನೆ ನಡೆಸಿಕೊಟ್ಟರು. ಫಾ| ಮೈಕೆಲ್ ಸಾಂತುಮಯೊರ್ ನೇತೃತ್ವದ ಗಾಯನ ಮಂಡಳಿಯವರು ಭಕ್ತಿ ಗೀತೆಗಳ ಮೂಲಕ ಆರಾಧನೆಗೆ ಸಾಥ್ ನೀಡಿದರು.
ವೈಸಿಎಸ್ ನಿರ್ದೇಶಕ ಫಾ| ಎಡ್ವಿನ್ ಕೊರೆಯಾ ಮತ್ತು ಐಸಿವೈಎಂ ನಿರ್ದೇಶಕ ಫಾ| ರೊನಾಲ್ಡ್ ಡಿ’ಸೋಜಾ ಅವರು ಕಾರ್ಯಕ್ರಮ ನಿರ್ವಹಿಸಿದರು.
Click this button or press Ctrl+G to toggle between Kannada and English