ಮುಖ್ಯಮಂತ್ರಿಯವರು ರಾಜೀನಾಮೆ ನೀಡಬೇಕು : ದ.ಕ ಜಿಲ್ಲಾ ಯುವ ಮೋರ್ಚಾ
3:06 PM, Tuesday, November 26th, 2013
Loading...
ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಲ್ಪ ಸಂಖ್ಯಾತರ ತುಷ್ಟೀಕರಣ ನೀತಿ ಅನುಸರಿಸುತ್ತಿದ್ದಾರೆ ಹಾಗಾಗಿ ಮುಖ್ಯಮಂತ್ರಿಯವರು ರಾಜೀನಾಮೆ ನೀಡಬೇಕು ಎಂದು ಅಗ್ರಹಿಸಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾದ ವತಿಯಿಂದ ಸೋಮವಾರ ದ.ಕ. ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಯುವಮೋರ್ಚಾದ ರಾಜ್ಯಾಧ್ಯಕ್ಷ ಪಿ.ಮುನಿರಾಜು, ಇಂಡಿಯನ್ ಮುಜಾಹಿದ್ದೀನ್ ಎಂಬ ಭಯೋತ್ಪಾದನಾ ಸಂಘಟನೆಯನ್ನು ಹುಟ್ಟು ಹಾಕಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸುತ್ತಿರುವ ಕರ್ನಾಟಕದವನೇ ಆಗಿರುವ ಯಾಸಿನ್ ಭಟ್ಕಳ್ ಯಾರೆಂಬುದು ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ರಾಜ್ಯದ ಹಿತ ಕಾಯಬೇಕಾದ ಮುಖ್ಯಮಂತ್ರಿಯೊಬ್ಬರು ಇಂತಹ ಹೇಳಿಕೆಗಳನ್ನು ನೀಡಿದ್ದಾರೆಂದರೆ ನಾಚಿಕೆ ಕೇಡಿನ ಸಂಗತಿಯಾಗಿದೆ. ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳಲು ಯೋಗ್ಯತೆಯಿಲ್ಲದಂತೆ ಸಿದ್ದರಾಮಯ್ಯನವರು ವರ್ತಿಸಿದ್ದಾರೆ. ಆದುದರಿಂದ ಬಿಜೆಪಿ ಯುವಮೋರ್ಚಾವು ಮುಖ್ಯಮಂತ್ರಿಯವರು ಈ ಕೂಡಲೇ ರಾಜೀನಾಮೆಯನ್ನು ನೀಡಬೇಕು ಎಂದು ಒತ್ತಾಯಿಸುತ್ತದೆ. ಇಲ್ಲದೇ ಹೋದಲ್ಲಿ ರಾಜ್ಯ ವ್ಯಾಪಿ ಉಗ್ರ ಹೋರಾಟವನ್ನು ನಡೆಸಲು ಯುವಮೋರ್ಚಾವು ತೀರ್ಮಾನಿಸಿದೆ ಎಂದು ಹೇಳಿದರು.
ಮುಖ್ಯಮಂತ್ರಿಯವರು ಶಾದಿ ಭಾಗ್ಯದಂತಹ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅಲ್ಪ ಸಂಖ್ಯಾತರ ಓಟ್ ಬ್ಯಾಂಕ್ ಮೇಲೆ ಕಣ್ಣಿರಿಸಿದ್ದಾರೆ. ಆದರೆ ಮುಖ್ಯಮಂತ್ರಿಯವರು ಕೇವಲ ಅಲ್ಪ ಸಂಖ್ಯಾತರ ಮುಖ್ಯಮಂತ್ರಿಯಾಗಿರದೆ ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇವರು ಏನೂ ತಿಳಿಯದ ಶಾಲಾ ಮಕ್ಕಳಲ್ಲಿಯೂ ಜಾತಿ ಭೇಧ ಸೃಷ್ಟಿ ಮಾಡಲು ಅಹಿಂದ ಮಕ್ಕಳಿಗೆ ಮಾತ್ರ ಪ್ರವಾಸ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದಾರೆ. ಬಿಜೆಪಿಯನ್ನು ಕೋಮುವಾದಿ ಎನ್ನುವ ಇವರು ರಾಜ್ಯದಲ್ಲಿನ ಮುಂಚೂಣಿಯ ಕೋಮವಾದಿ ಎಂದು ಮುನಿರಾಜು ಆರೋಪಿಸಿದರು.
ಈ ಪ್ರತಿಭಟನೆಯಲ್ಲಿ ಬಿಜೆಪಿ ಯುವಮೋರ್ಚಾದ ಕಾರ್ಯದರ್ಶಿ ಎಸ್.ವಿ.ರಾಘವೇಂದ್ರ, ಉಪಾಧ್ಯಕ್ಷ ಕಿಶೋರ್ ಕುಮಾರ್ ಪುತ್ತೂರು, ದ.ಕ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ರಂಜನ್ ಗೌಡ, ಕೊಡಗು ಜಿಲ್ಲಾಧ್ಯಕ್ಷ ಭರತೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.