ಮಂಗಳೂರು : ಹಿರಿಯ ಜನಪರಚಿತ್ರಕಲಾವಿದ, ಜಗತ್ ಆರ್ಟ್ ಗ್ಯಾಲರಿ ಸಂಸ್ಥಾಪಕ ಜಗದೀಶ ಅಮ್ಮುಂಜೆ (58) ಬುಧವಾರ ಬೆಳಗ್ಗೆ ನಗರದ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.
ಶ್ರಮಜೀವಿಯಾದ ಜಗದೀಶ ಅಮ್ಮುಂಜೆ ಅತಿಯಾದ ಮಧುಮೇಹದಿಂದ ಬಳಲುತ್ತಿದ್ದರು. ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಕಳೆದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ವಯಸ್ಸಾಗಿತ್ತು. ಅವರು ಮಡದಿ, ಇಬ್ಬರು ಮಕ್ಕಳು, ಸಂಬಂಧಿಕರು ಮತ್ತು ಅಸಂಖ್ಯ ಸ್ನೇಹಿತರನ್ನು ಅಗಲಿದ್ದಾರೆ.
ಹುಟ್ಟು ಕಲಾವಿದನಾಗಿದ್ದ ಜಗದೀಶ ಅಮ್ಮುಂಜೆ ಅವರು ಕಲಾತ್ಮಕ ಚಿತ್ರಗಳು,ಲ್ಯಾಂಡ್ ಸ್ಕೇಪ್, ಪೋಟ್ರ್ಯೇಟ್, ಟೆರ್ರಾಕೋಟಾ ಪ್ರತಿಮೆಗಳಿಗಾಗಿ ಪ್ರಸಿದ್ಧರು. ಮಂಗಳೂರಿನಲ್ಲಿ ಸ್ಕ್ರೀನ್ ಪ್ರಿಟಿಂಗ್ ಉದ್ಯಮದಲ್ಲಿ ಮೊದಲಿಗರಾಗಿದ್ದ ಅಮ್ಮುಂಜೆ ನಗರದಲ್ಲಿ ಜಗತ್ ಎಂಬ ಆರ್ಟ್ ಗ್ಯಾಲರಿ ಕೂಡ ಆರಂಭಿಸಿದ್ದರು. ಕರಾವಳಿಯಲ್ಲಿ ಹಲವಾರು ಕಲಾಶಿಬಿರಗಳಿಗೆ ಕಾರಣಕರ್ತರಾಗಿದ್ದರು. ರಾಜ್ಯ ಮಟ್ಟದ ಸಂಘಟನೆ ಸಮುಚ್ಛಯ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿದ್ದರು.
ಅಲೋಷಿಯಸ್ ಕಾಲೇಜಿನಲ್ಲಿ ಶಿಕ್ಷಣ ಪಡೆದ ಜಗದೀಶ ಅಮ್ಮುಂಜೆ ಅವರು ಎಡಪಂಥೀಯ ಸಂಘಟನೆಗಳ ಸಂಪರ್ಕ ಹೊಂದಿದ್ದರು. ಗೋಡೆಬರಹ, ಪ್ಲೇಕಾರ್ಡ್ ಮೂಲಕ ಕುಂಚ ಹಿಡಿದ ಅಮ್ಮುಂಜೆ ಅವರು ಜನರ ಕಷ್ಟಕಾಪರ್ಣ್ಯಗಳನ್ನು ತೆರೆದಿಡುವ ಜನರಕಲಾವಿದರಾಗಿ ಬೆಳೆದರು. ಇಂದು ಸಮಾಜದಲ್ಲಿ ಕಾಣುವ ಕ್ಲಾಸ್ ಆರ್ಟಿಸ್ಟ್ ಆಗಲು ಇಷ್ಟಪಡದ ಅಮ್ಮುಂಜೆ ಯಾವಾಗಲು ಮಾಸ್ ಆರ್ಟಸ್ಟ್ ಆಗಿದ್ದರು. ಇಂದಿನ ಅಸಂಖ್ಯ ಸಮಕಾಲೀನ ಚಿತ್ರಕಲಾವಿದರಿಗೆ ಮಾರ್ಗದರ್ಶಕರಾಗಿದ್ದರು.
ರಾಜ್ಯದಲ್ಲಿ ಕಲಾವಿದರು ನಡೆಸಿದ ಹಲವಾರು ಸಾಮಾಜಿಕ – ರಾಜಕೀಯ ಜಾಥಗಳಲ್ಲಿ ಭಾಗವಹಿಸಿದ ಜಗದೀಶ ಅಮ್ಮುಂಜೆ ಅವರು ಅನಂತರ ಸಾಕ್ಷರತಾ ಆಂದೋಲನದಿಂದ ತೊಡಗಿ, ಕರಾವಳಿ ಉತ್ಸವ, ಮೈಸೂರು ದಸರಾ ಉತ್ಸವಗಳಲ್ಲಿ ತಮ್ಮ ಸೃಜನಶೀಲ ಪ್ರತಿಭೆಯನ್ನು ಮೆರೆದಿದ್ದಾರೆ.
ಇತ್ತೀಚೆಗೆ ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನ ಸಂದರ್ಭದಲ್ಲಿ 50 ವರ್ಷ ಹಳೆಯ ತುಳು ಗ್ರಾಮವನ್ನು ಜಗದೀಶ ಅಮ್ಮುಂಜೆ ವಿನ್ಯಾಸಗೊಳಿಸಿ ಲಕ್ಷಾಂತರ ಜನರ ಪ್ರಶಂಸೆ ಪಡೆದಿದ್ದರು.
ಹುಟ್ಟು ಕಲಾವಿದಾನಾದ ಜಗ್ಗ ಹೆಣ್ಣುಹೃದಯದ ತಾಯಿಯ ಅಂತಃಕರಣವುಳ್ಳ ವ್ಯಕ್ತಿ.ತನ್ನ ಜೀವನದ ನೋವನ್ನು ಕಲೆಯ ಮೂಲಕ ಅದ್ಭುತವಾಗಿ ಅಭಿವ್ಯಕ್ತಿ ಗೊಳಿಸುತ್ತಿದ್ದ. ಇಂದು ತನ್ನ ಬದುಕಿನ ಕಲಾಕೃತಿಯನ್ನು ಪೂರ್ಣಗೊಳಿಸದೇ ಹೊರಟೇ ಬಿಟ್ಟಿದ್ದಾನೆ. ಜಗ್ಗ ಇನ್ನು ಇರುವುದಿಲ್ಲ ಅನ್ನುವುದನ್ನು ಅರಗಿಸಿಕಳ್ಳಲು ಆಗುತ್ತಿಲ್ಲ ಎಂದು ನಗರದ ಖ್ಯಾತ ವೈದ್ಯ ಡಾ.ಶ್ರೀನಿವಾಸ್ ಕಕ್ಕಿಲ್ಲಾಯ ಕಂಬನಿ ಮಿಡಿದಿದ್ದಾರೆ.
ಒಳ್ಳೆಯ ಕಲಾವಿದ , ಶ್ರಮಜೀವಿ , ಸಂಘಟಕ . ನಾನು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಆದ ಆರಂಭದಲ್ಲಿ 1994ರಲ್ಲಿ ನನಗೆ ಅನೇಕ ರೀತಿಯಲ್ಲಿ ನೆರವಾಗಿದ್ದರು . ಅನೇಕ ಆಮಂತ್ರಣ ಪತ್ರಿಕೆ ಮತ್ತು ಪುಸ್ತಕಗಳ ಕಲಾವಂತಿಕೆ ಅವರದ್ದಾಗಿತ್ತು . ಬಹಳ ನೋವಿನ ಸಂಗತಿ ಎಂದಿದ್ದಾರೆ ಪ್ರೊ.ಬಿ.ಎ.ವಿವೇಕ ರೈ.
ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ ಹಿಂದೂ ಪತ್ರಿಕೆಯ ಗ್ರಾಮೀಣ ವ್ಯವಹಾರಗಳ ಸಂಪಾದಕ ಪಿ.ಸಾಯಿನಾಥ್ ಅವರಿಗೆ ನೀಡಲಾದ ನೇಗಿಲ ಗುಳದಲ್ಲಿರುವ ಲೇಖನಿ ಸ್ಮರಣಿಕೆಯನ್ನು ಅಮ್ಮುಂಜೆ ರಚಿಸಿದ್ದರು.
Click this button or press Ctrl+G to toggle between Kannada and English