ಮಂಜೇಶ್ವರ: ತುಳು ರಂಗಭೂಮಯಲ್ಲಿ 5000ಕ್ಕೂ ಅಧಿಕ ನಾಟಕಗಳ ಪ್ರದರ್ಶನದ ಮೂಲಕ ದೇಶ ವಿದೇಶದಲ್ಲಿ ಪ್ರಖ್ಯಾತಿಗಳಿಸಿದ ಹಾಸ್ಯ ಕಲಾವಿದ ಧರ್ಮೇಂದ್ರ ಅಮೀನ್ (40), ಹೃದಯಾಘಾತದಿಂದ ಮೃತರಾಗಿದ್ದಾರೆ. ಮೃತರು ಪತ್ನಿ ಸ್ಮಿತಾ, ಓರ್ವ ಪುತ್ರ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.
ಸೋಮವಾರ ಮಂಗಲ್ಪಾಡಿ ಸಮೀಪದ ಸಿರಿಗೋಳಿಯ ಶ್ರೀ ಸದಾಶಿವ ದೇವಸ್ಥಾನದ ವಾರ್ಷಿಕ ಜಾತ್ರಾ ಪ್ರಯುಕ್ತ, ಕಿಶೋರ ಡಿ. ಶೆಟ್ಟಿಯವರ “ಎಲ್ಯ ವಿಷಯ ಮಲ್ಲ ಮಲ್ಪೊಡ್ಚಿ” ಎಂಬ ನಾಟಕ ಪ್ರದರ್ಶನದ ವೇಳೆ ಸುಮಾರು ಮಧ್ಯರಾತ್ರಿ 2 ಗಂಟೆಯ ವೇಳೆಗೆ ನಾಟಕದ ಎರಡನೇ ದೃಶ್ಯದ ಕೊನೆಯ ಡೈಲಾಗ್ ಹೇಳುವ ಸಂದರ್ಭದಲ್ಲಿ ಧರ್ಮೇಂದ್ರ ಅಮೀನ್ರಿಗೆ ತೀವ್ರ ಎದೆ ನೋವು ಉಂಟಾಯಿತು. ನಾಟಕ ತಂಡದ ಕಲಾವಿದರು ಕೂಡಲೇ ಅವರನ್ನು ಉಪ್ಪಳ ಖಾಸಗೀ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ವೈದ್ಯರು ಧರ್ಮೇಂದ್ರ ಅಮೀನ್ ಮೃತ ಪಟ್ಟಿರುವುದನ್ನು ಖಚಿತ ಪಡಿಸಿದರು.
ಬಾಲ್ಯದಲ್ಲೇ ನಾಟಕದ ಅಭಿರುಚಿ ಬೆಳೆಸಿಕೊಂಡಿದ್ದ ಧರ್ಮೇಂದ್ರ ಅಮೀನ್, ಇದುವರೆಗೂ 1000 ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಆರಂಭದಲ್ಲಿ ‘ಶಾರದಾ ಕಲಾ ಆರ್ಟ್ಸ್’ ಮಂಜೇಶ್ವರ ತಂಡದ ಮೂಲಕ ರಂಗ ಪ್ರವೇಶ ಮಾಡಿದ್ದರು. ಬಳಿಕ ಹವ್ಯಾಸಿ ಕಲಾವಿದರಾಗಿ ಮಂಗಳೂರು ಹಾಗೂ ಉಪ್ಪಳ ಮೊದಲಾದ ತಂಡಗಳೊಂದಿಗೆ ಅಭಿನಯಿಸಿದ್ದಾರೆ.
ಕೆ. ವಿ. ಶೆಟ್ಟಿಯವರ “ನಾಗಬನ” ನಾಟಕ ಇವರ ಜೀವನದಲ್ಲಿ ಹೊಸ ತಿರುವನ್ನು ತಂದು ಕೊಟ್ಟಿತು. ಬಳಿಕ ಲಕುಮಿ ತಂಡದಲ್ಲಿ ಕಳೆದ ಹತ್ತು ವರ್ಷಗಳಿಂದ ವಿಭಿನ್ನ ಪಾತ್ರಗಳಲ್ಲಿ ತನ್ನದೇ ಶೈಲಿಯ ಅಭಿನಯದಿಂದ ಅಪಾರ ಪ್ರೇಕ್ಷಕ ವರ್ಗವನ್ನುಗಳಿಸಿದ್ದರು. ಇವರ ಅದ್ಭುತ ನಟನಾ ಪ್ರತಿಭೆಗೆ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಯವರು ‘ನಟ ಭೈರವ’ ಎಂಬ ಬಿರುದು ನೀಡಿ ಗೌರವಿಸಿದ್ದರು. ರಾಜ್ಯ ಮತ್ತು ವಿದೇಶಗಳಲ್ಲಿ ವಿಶೇಷ ಸನ್ಮಾನಗಳನ್ನು ಪಡೆದಿದ್ದಾರೆ.
ಲಕುಮಿ ತಂಡದ ಕಿಶೋರ್ ಶೆಟ್ಟಿ , ಸೀತಾರಾಮ್ ಕುಲಾಲ್, ನವನೀತ ಶೆಟ್ಟಿ ಕದ್ರಿ, ಪವನ್ ಕೊಪ್ಪ, ಶಾರದಾ ಆರ್ಟ್ಸ್ ಕಲಾವಿದರು, ಅಮ್ಮ ಕಲಾವಿದರು ಮಂಜೇಶ್ವರ, ನವೀನ್ ಡಿ ಪಡೀಲ್, ರಂಗ ತರಂಗ ಕಾಪು, ಚಾ ಪರ್ಕ ತಂಡ, ರಾಜಶೇಖರಾನಂದ ಸ್ವಾಮೀಜಿ ಮೊದಲಾದವರು ಮೃತರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರ ಅಂತ್ಯಕ್ರಿಯೆಯು ಹೊಸಂಗಡಿ ಸಮೀಪದ ಬಂಗ್ರ ಮಂಜೇಶ್ವರದ ಮನೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆಯಲಿದೆ.
Click this button or press Ctrl+G to toggle between Kannada and English