ಮಂಗಳೂರು : ಗುರುಪುರ ಶ್ರೀ ವಜ್ರದೇಹಿ ಮಠದಲ್ಲಿ ಜ.3ರಿಂದ ಆರಂಭಗೊಂಡಿರುವ ವಜ್ರದೇಹಿ ಜಾತ್ರೆಯ ಎರಡನೇ ದಿನವಾದ ಶನಿವಾರದಂದು ವಿವಿಧ ವೈದಿಕ ಕಾರ್ಯಗಳು, ಧಾರ್ಮಿಕ ಸಭೆ, ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದವರಿಗೆ ಸನ್ಮಾನ ಹಾಗೂ ಗಂಗಾವತಿ ಪ್ರಾಣೇಶ್ ತಂಡದವರಿಂದ ನಗೆ ಹಬ್ಬ ಕಾರ್ಯಕ್ರಮ ನಡೆಯಿತು.
ಧಾರ್ಮಿಕ ಸಭೆಯ ಉದ್ಘಾಟನೆಯನ್ನು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನೆರವೇರಿಸಿದರು. ಜಂಗಮ ಮಠದ ಶ್ರೀ ಮ|ನಿ|ಪ್ರ| ರುದ್ರಮುನಿ ಮಹಾಸ್ವಾಮಿ ಅನುಗ್ರಹ ಸಂದೇಶ ನೀಡಿದರು. ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಬಂಟರ ಮಾತೃ ಸಂಘ , ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್‌ರೈ ಮಾಲಾಡಿ ವಹಿಸಿದ್ದರು.
ಧಾರ್ಮಿಕ ಸಭೆಯಲ್ಲಿ ಪೌರೋಹಿತ್ಯಕ್ಕಾಗಿ ವೇದಮೂರ್ತಿ ಅನಂತ ಉಪಾಧ್ಯಾಯ, ಶಿಕ್ಷಣಕ್ಕಾಗಿ ಡಾ.ರಾಜೇಶ್ ರೈ ಪಾಲ್ತಾಜೆ, ಸಾಲೆತ್ತೂರು, ಸಮಾಜ ಸೇವೆಗಾಗಿ ಕೆ.ಸುರೇಶ್ ಭಂಡಾರಿ ಮುಂಬೈ, ರಂಗಭೂಮಿಯಲ್ಲಿ ಚಂದ್ರಹಾಸ್ ಕದ್ರಿ, ಬಾಲಪ್ರತಿಭೆ ಕುಮಾರಿ ಹಾಸಿನಿ ಉಡುಪಿ ಇವರನ್ನು ಸಮ್ಮಾನಿಸಲಾಯಿತು.
ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ತಮ್ಮ ಆಶೀರ್ವಚನ ಸಂದೇಶದಲ್ಲಿ ಪ್ರಖರವಾದ ಸೂರ್ಯನನ್ನು ಬರಿ ಕಣ್ಣಿನಿಂದ ನೋಡಲು ಹೇಗೆ ಸಾಧ್ಯವಿಲ್ಲವೋ ಹಾಗೆ, ದೇವರನ್ನು ಕಾಣಲು ಸಾದ್ಯವಿಲ್ಲ, ಯಾರು ನಿಷ್ಕಲ್ಮಶವಾಗಿ ಬಡವಸೇವೆ, ದಾನ ಧರ್ಮ ಮಾಡುತ್ತಾನೋ ಅವನು ದೇವರು ಎಂದು ಹೇಳಿದರು.
ಅದ್ಯಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಮೊಕ್ತೇಸರ ಮಂಜುನಾಥ ಭಂಡಾರಿ ಶೆಡ್ಡೆ, ಸಂಸದ ನಳಿನ್‌ಕುಮಾರ್ ಕಟೀಲು, ಬಡಗ ಎಡಪದವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ,ಮೂಳೂರು ಶ್ರೀ ವೈದ್ಯನಾಥ ದೈವಸ್ಥಾನದ ಆಡಳಿತ ಮೊಕ್ತೇಸರ ಪ್ರಮೋದ್ ಕುಮಾರ್ ರೈ,ಉದ್ಯಮಿ ಜನಾರ್ದನ ಅರ್ಕುಳ ಮುಂತಾದವರು ಉಪಸ್ಥಿತರಿದ್ದರು.
ಜನವರಿ ೫ ಮಧ್ಯಾಹ್ನ ಗಂಟೆ ೨ಕ್ಕೆ ಗುರುಪುರ ಕೈಕಂಬದಿಂದ ಶೋಭಾ ಯಾತ್ರೆ ಹೊರಟು ೩.೩೦ಕ್ಕೆ ಗುರುಪುರ ಮಠದಲ್ಲಿ ಬ್ರಹತ್ ಹಿಂದೂ ಸಮಾವೇಶ ನಡೆಯಲಿದೆ.
Click this button or press Ctrl+G to toggle between Kannada and English