ಮಂಗಳೂರು: ಕರ್ನಾಟಕ ಆಯುರ್ವೇದ ಮತ್ತು ಯುನಾನಿ ಮಂಡಳಿ ಬೆಂಗಳೂರು ಅಧಿಕಾರಿಗಳು ನಗರದ ಎರಡು ಕ್ಲಿನಿಕ್ ಗಳಿಗೆ ದಾಳಿ ನಡೆಸಿ ಇಬ್ಬರು ನಕಲಿ ವೈದ್ಯರನ್ನು ಪತ್ತೆ ಹಚ್ಚಿ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಶನಿವಾರ ನಡೆದಿದೆ.
ಬಂಧಿತರನ್ನು ಸೈಯದ್ ಯೂನಿಸ್ ರಾಣಾ ರಜಪೂತ್ ಡಾ.ರಜಪೂತ್ ಡಿಸ್ಪೆನ್ಸರಿ ಕ್ಲಿನಿಕ್ ನ್ ವೈದ್ಯ ಹಾಗೂ ನಸರತ್ ಚೌಹಾನ್, ಚೌಹಾನ್ ಡಿಸ್ಪೆನ್ಸರಿ ವೈದ್ಯ ಎಂದು ಗುರುತಿಸಲಾಗಿದೆ. ಇವರಿಬ್ಬರು ಕಳೆದ ಕೆಲವು ವರ್ಷಗಳಿಂದ ನಗರದಲ್ಲಿ ಕ್ಲಿನಿಕ್ ಗಳನ್ನು ನಡೆಸುತ್ತಿದ್ದು ಇಬ್ಬರೂ ವೈದ್ಯಕೀಯ ವಿದ್ಯಾಭ್ಯಾಸ ನಡೆಸಿ ಯಾವುದೇ ರೀತಿಯ ವೈದ್ಯಕೀಯ ಪದವಿಯನ್ನು ಪಡೆದಿಲ್ಲ ಎನ್ನಲಾಗಿದೆ. ಇವರು ಲೈಂಗಿಕ ಸಮಸ್ಯೆಗೆ ಪರಿಹಾರ ಮಾಡುವುದಾಗಿ ರೋಗಿಗಳಿಂದ ಸಾವಿರಾರು ರೂಪಾಯಿ ಪಡೆದು ರೋಗ ಗುಣ ಪಡಿಸದೆ ಮೆಡಿಕಲ್ ನಿಂದ ಡಾಬರ್ ಚವನ ಪ್ರಾಸ ಲೆಹಗಳನ್ನು ಮತ್ತು ಕಾಮ ಉತ್ತೆಜಿಸುವ ಮಾತ್ರೆಗಳನ್ನು ಕೊಡುತ್ತಿದ್ದರು ಎಂದು ದೂರುದಾರರು ತಿಳಿಸಿದ್ದಾರೆ.
ಈ ದಾಳಿಯನ್ನು ಕರ್ನಾಟಕ ಆಯುರ್ವೇದಿಕ್ ಹಾಗೂ ಯುನಾನಿ ಮಂಡಳಿಯ ಅಧ್ಯಕ್ಷ ಡಾ.ಸತ್ಯಮೂರ್ತಿ ಭಟ್ ನೇತೃತ್ವದಲ್ಲಿ ಶನಿವಾರ ಬೆಳಿಗ್ಗೆ 11.45 ನಡೆಸಲಾಗಿದೆ. ಈ ಸಂದರ್ಭ ಬಂಧಿತ ವೈದ್ಯರಿಂದ ಕೊಲ್ಕೊತ್ತಾ ದಿಂದ ಪಡೆದ ನಕಲಿ ಸರ್ಟಿಫಿಕೇಟ್, ಕೆಲವು ಮಾತ್ರೆಗಳು ಮತ್ತು ಲೆಹಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಇನ್ನಷ್ಟು ಇಂತಹ ಕ್ಲಿನಿಕ್ ಗಳು ಕಾರ್ಯಾಚರಿಸುತ್ತಿರುವ ಬಗ್ಗೆ ಮಾಹಿತಿ ದೊರಕಿದ್ದು ಶೀಘ್ರದಲ್ಲಿ ಅವುಗಳ ಮೇಲೆಯೂ ದಾಳಿ ನಡೆಸಲಾಗುವುದು ಎಂದು ಡಾ.ಸತ್ಯಮೂರ್ತಿ ಭಟ್ ತಿಳಿಸಿದ್ದಾರೆ.
ದಾಳಿಯಲ್ಲಿ ಮಂಡಳಿಯ ರಿಜಿಸ್ಟ್ರಾರ್ ಡಾ.ತಿಮ್ಮಪ್ಪ ಶೆಟ್ಟಿಗಾರ್, ಡಾ. ಸದಾಶಿವ ಆನಂದ್, ಡಾ.ಮಹಮ್ಮದ್ ಅಷ್ಪಕ್, ಡಾ. ಮುರಳೀಧರ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು. ಪಾಂಡೇಶ್ವರ ಮತ್ತು ಬಂದರು ಪೊಲೀಸರು ಇಬ್ಬರೂ ನಕಲಿ ವೈದ್ಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Click this button or press Ctrl+G to toggle between Kannada and English