ಬೆಂಗಳೂರು : ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಸಂಚರಿಸುವ ಜನರಿಗೆ ಸಿಹಿ ಸುದ್ದಿ ಕಾದಿದೆ, ಜ.24ರಿಂದ ಎರಡು ರಸ್ತೆಗಳಲ್ಲಿ ಉಚಿತ ವೈಫೈ ಸೇವೆ ಆರಂಭವಾಗಲಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರ ಬಜೆಟ್ ಘೋಷಿಸಿದ್ದ ಈ ಯೋಜನೆ ಸದ್ಯ ಕಾರ್ಯರೂಪಕ್ಕೆ ಬರುತ್ತಿದೆ. `ನಮ್ಮ ವೈಫೈ` ಹೆಸರಿನಲ್ಲಿ ಈ ಸೇವೆ ಆರಂಭವಾಲಿದೆ.
ಈ ಮಹತ್ವದ ಯೋಜನೆಗಾಗಿ ಸರ್ಕಾರ ಡಿ-ವಿಯೋಸ್ ಎಂಬ ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ ಹಂತದಲ್ಲಿ ಶಾಂತಿನಗರ, ಯಶವಂತಪುರ, ಕೋರಮಂಗಲ ಮುಂತಾದ ಬಿಎಂಟಿಸಿಯ ಟಿಟಿಎಂಸಿಯಲ್ಲಿಯೂ ವೈಫೈ ಯೋಜನೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಆದರೆ, ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಶುಕ್ರವಾರದಿಂದ ವೈಫೈ ಸೇವೆ ಲಭ್ಯವಿರುತ್ತದೆ.
ನೀವು ವೈಫೈ ಸೇವೆ ಪಡೆಯಲು ಬ್ರೌಸರ್ ಓಪನ್ ಮಾಡಿ `ನಮ್ಮ ವೈಫೈ`ಸೇವೆಗೆ ಹೋಗಬೇಕು. ನಂತರ ನಿಮ್ಮ ಮೊಬೈನ್ ನಂ ಅನ್ನು ನಮೂದಿಸಿದ ನಂತರ ನಿಮಗೆ ಪಾಸ್ ವರ್ಡ್ ಸಂದೇಶ ರೂಪದಲ್ಲಿ ಬರುತ್ತದೆ. ನಂತರ 24 ಗಂಟೆಯಲ್ಲಿ ನೀವು 30 ನಿಮಿಷ ಉಚಿತವಾಗಿ ಬ್ರೌಸ್ ಮಾಡಬಹುದಾಗಿದೆ. ಮೂಲಗಳ ಪ್ರಕಾರ ವೈಫೈವೇಗ 512ಕೆಬಿಪಿಎಸ್ ಇರಲಿದೆ.
ಸರ್ಕಾರ ಮುಂದಿನ ದಿನಗಳಲ್ಲಿ ಇಂತಹ ಉಚಿತ ವೈಫೈಸೇವೆಯನ್ನು ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ಇತರ ಪ್ರಮುಖ ನಗರಗಳಿಗೆ ವಿಸ್ತರಿಸಲು ಚಿಂತನೆ ನಡೆಸುತ್ತಿದೆ. ಅಂದಹಾಗೆ ಈ ಉಚಿತ ವೈಫೈ ಸೇವೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಸಮಿತಿ ಅಧ್ಯಕ್ಷ ಮೋಹನ್‌ದಾಸ್ ಪೈ ಅವರ ಕನಸು. ಐಸಿಟಿ ಸಮಿತಿ ಎರಡೂ ರಸ್ತೆಗಳಲ್ಲಿ ವೈಫೈ ಸೇವೆ ಆರಂಭಿಸುವ ಕುರಿತು ಸರ್ಕಾರಕ್ಕೆ ವರದಿ ನೀಡಿತ್ತು.
Click this button or press Ctrl+G to toggle between Kannada and English