‘ರಿಯಾಲಿಟಿ ಷೊ’ಹಾಡಿಯ ಹೈದ ರಾಜೇಶನ ಕುಟುಂಬದ ಅರಣ್ಯರೋದನ

1:23 PM, Friday, January 24th, 2014
Share
1 Star2 Stars3 Stars4 Stars5 Stars
(4 rating, 6 votes)
Loading...

Rajeshಮೈಸೂರು: ‘ರಿಯಾಲಿಟಿ ಷೊ’ ಮೂಲಕ ರಾತ್ರೋರಾತ್ರಿ ಜನಪ್ರಿಯತೆ ಗಳಿಸಿ ಸಿನಿಮಾ ನಾಯಕ ನಟನೂ ಆಗಿ ದುರಂತ ಅಂತ್ಯ ಕಂಡ ‘ಜಂಗಲ್‌ ಜಾಕಿ’ ರಾಜೇಶನ ಕುಟುಂಬ ಅತ್ತ ಹಾಡಿಗೂ ಹೋಗ­ಲಾಗದೆ ಇತ್ತ ಮೈಸೂರಿ­ನಲ್ಲಿ­ಯೂ ನೆಲೆ ಕಂಡುಕೊಳ್ಳಲಾಗದೆ ಅಕ್ಷ­ರಶಃ ತ್ರಿಶಂಕು ಸ್ಥಿತಿ ಎದುರಿಸುತ್ತಿದೆ.

Rajesh-Familyರಾಜೇಶನ ಜನಪ್ರಿಯತೆಯನ್ನೇ ಕಾಸಾ­ಗಿಸಿಕೊಳ್ಳಲು ಸಿನಿಮಾ ನಿರ್ಮಿಸಿ ಆತ­ನನ್ನು ನಾಯಕ ನಟನಾಗಿ ದುಡಿಸಿದ ನಿರ್ಮಾಪಕರು ನೀಡಿದ ಸಂಭಾವನೆಯ ಚೆಕ್‌ಗಳು ಬೌನ್ಸ್‌ ಆಗಿರುವ ಕಾರಣ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬ ದಿನದ ತುತ್ತಿಗೂ ಪರದಾಡು­ವಂತಾಗಿದೆ. ಹಾಡಿಗೆ ಹೋದರೆ ಜನ­ರಿಂದ ಮೂದಲಿಕೆ, ನಗರದಲ್ಲೇ ನೆಲೆ­ಸಲು ಹಣಕಾಸಿನ ತೊಂದರೆಯಿಂದಾಗಿ ಇಡೀ ಕುಟುಂಬವೇ ಮನೋವೇದನೆಗೆ ಒಳಗಾಗಿದೆ.

‘ಬಳ್ಳೆಯಲ್ಲಿ ಕೂಲಿ ಮಾಡಿಕೊಂಡು ಬದುಕುತ್ತಿದ್ದೆವು. ಬಣ್ಣದ ಲೋಕದ­ವರು ಮಗನನ್ನು ಮೋಡಿ ಮಾಡಿ ನಾಡಿಗೆ ಕರೆ ತಂದು ಬಣ್ಣದ ಗೀಳು ಹಿಡಿಸಿ ಅವನನ್ನು ಕೊಂದರು. ನಮ್ಮನ್ನು ನಡುನೀರಿನಲ್ಲಿ ಕೈಬಿಟ್ಟರು. ಈಗ ನಾಡಿ­ನಲ್ಲಿ ನೆಲೆಗಾಗಿ ಹೋರಾಡಬೇಕಾಗಿದೆ. ಮನೆ ಬಾಡಿಗೆ, ಕುಟುಂಬ ನಿರ್ವಹಣೆಗೆ ಕಾಸು ಹೊಂದಿಸುವುದು ಕಷ್ಟವಾಗಿದೆ. ಸಹಾಯ ಮಾಡುವುದಾಗಿ ಭರವಸೆ ನೀಡಿದ್ದವರು ನಂಬಿಕೆ ದ್ರೋಹ ಎಸಗಿದ್ದಾರೆ’ ಎಂದು ಸಂಕಷ್ಟಗಳನ್ನು ಬಿಚ್ಚಿಡುತ್ತಾರೆ ರಾಜೇಶನ ತಂದೆ ಕೃಷ್ಣ.

‘ಸಿನಿಮಾ ನಿರ್ಮಾಪಕರು ಮಗನ ಹೆಸರಿಗೆ ನೀಡಿದ್ದ ಚೆಕ್‌ (ರೂ. 40 ಸಾವಿರ) ಖಾತೆಯಲ್ಲಿ ನಿಗದಿತ ಹಣ ಇಲ್ಲದೇ ‘ಬೌನ್ಸ್‌’ ಆಗಿದೆ. ದಿನಾಂಕ ನಮೂದಿಸ­ದಿ­ರುವ ಇನ್ನೂ ಎರಡು ಚೆಕ್‌ಗಳು (ತಲಾ­ ರೂ. 2 ಲಕ್ಷ ಮೊತ್ತ) ಇವೆ. ಆದರೆ, ಬ್ಯಾಂಕಿನವರು ಈ ಚೆಕ್‌ಗಳನ್ನು ಕಲೆ­ಕ್ಷನ್‌ಗೂ ಸ್ವೀಕರಿಸುತ್ತಿಲ್ಲ. ಚೆಕ್‌ದಾತ­ರನ್ನು ಮುಖಾಮುಖಿ, ಫೋನ್‌ ಮೂಲಕ ಸಂಪರ್ಕಿಸಲು ನಡೆಸಿದ ಯತ್ನಗಳು ವಿಫಲವಾಗಿವೆ. ಪುತ್ರ ಶೋಕ, ಸಾಲದ ಶೂಲ ನಿದ್ದೆಗೆಡಿಸಿವೆ’ ಎಂದು ಅವರು ದುಃಖಿಸುತ್ತಾರೆ.

‘ಕುಟುಂಬದವರೆಲ್ಲ ದುಡಿದರೂ ಈ ಊರಿನಲ್ಲಿ ಜೀವನ ನಡೆಸುವುದು ಕಷ್ಟ. ಯಾರಾದರೂ ನೆರವು ನೀಡಿದರೆ ಏನಾ­ದರೂ ಕಸುಬು ನಡೆಸಲು ಸಹಾಯ­ವಾಗುತ್ತದೆ’ ಎಂದು ಗೋಳಿಟ್ಟರು.

‘ಅಣ್ಣ ಸಿನಿಮಾ ಸೇರಿಕೊಂಡ ಮೇಲೆ ಹಾಡಿಗೆ ಕಾರಿನಲ್ಲಿ ಬರುತ್ತಿದ್ದೆ. ಹೀರೋ ತಂಗಿ ಅಂತ ಮೆರೆಯುತ್ತಿದ್ದೆ. ಷೋಕಿ ಮಾಡುತ್ತಿದ್ದೆ. ಈಗ ಮತ್ತೆ ಕೂಲಿ ಮಾಡೋ ಪರಿಸ್ಥಿತಿ ಬಂತಾ’ ಎಂದು ಹಾಡಿ­ಯಲ್ಲಿ ಜನ ಆಡಿಕೊಳ್ತಾರೆ ಎನ್ನು­ತ್ತಾರೆ ರಾಜೇಶನ ತಂಗಿ ಮಂಜುಳಾ ನೋವು ತೋಡಿಕೊಳ್ಳುತ್ತಾರೆ.

‘ಮಗ ಹೋದ ಮೇಲೆ ನಮ್ಮನ್ನು ನೋಡಿಕೊಳ್ಳುವವರೇ ಇಲ್ಲ. ಹಾಡಿಯಲ್ಲಿದ್ದಾಗ ಮಗ ಕಾಫಿ ತೋಟ, ಗದ್ದೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಸಂಸಾರ ಚೆನ್ನಾಗಿತ್ತು. ಹಾಡಿ ತೊರೆದು ನಾಡಿಗೆ ಬಂದು ಹಾಳಾಗಿ ಹೋದ್ವಿ. ಎಲ್ಲಿ ಹೋದರೂ ಮಗ ನೆನಪಿಗೆ ಬರ್‌ತಾನೆ’ ಎಂದು ರೋದಿಸುತ್ತಾರೆ ತಾಯಿ ಲಕ್ಷ್ಮೀ.

ಎಚ್‌.ಡಿ. ಕೋಟೆ ತಾಲ್ಲೂಕಿನ ಬಳ್ಳೆ ಹಾಡಿಯ ಹೈದ ರಾಜೇಶ ನಗರದ ಪರಸಯ್ಯನ ಹುಂಡಿಯಲ್ಲಿ ನ. 3ರಂದು ಮನೆಯ ಮಹಡಿಯಿಂದ ಬಿದ್ದು ಮೃತಪಟ್ಟಿದ್ದ. ಈತನ ಕುಟುಂಬದವರು ಆ ಮನೆ ಖಾಲಿ ಮಾಡಿ, ಈಗ ಶ್ರೀರಾಂಪುರ ಒಂದನೇ ಹಂತದಲ್ಲಿಯ ಮನೆಯೊಂದರಲ್ಲಿ ದಯನೀಯ ಸ್ಥಿತಿಯಲ್ಲಿ ದಿನ ದೂಡುತ್ತಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English