ಬೆಂಗಳೂರು : ಮಠಗಳ ಮೇಲೆ ನಿಯಂತ್ರಣ ಸಾಧಿಸುವ ಅಧಿಕಾರ ಪಡೆಯಲು ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ.
ಸರ್ಕಾರದ ನಿಯಂತ್ರಣಕ್ಕೆ ಮಠಗಳನ್ನು ಒಳಪಡಿಸಲು ಕಾನೂನು ರೂಪಿಸುವ ಅಗತ್ಯವಿದೆ ಎಂಬ ನ್ಯಾಯಾಲಯದ ಸೂಚನೆಯನ್ನೇ ಮುಂದಿಟ್ಟುಕೊಂಡು ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಕಾಯ್ದೆಗೆ ತಿದ್ದುಪಡಿ ಸರ್ಕಾರ ತರಲು ಹೊರಟಿದೆ.
ಪ್ರಸ್ತುತ ಜಾರಿಯಲ್ಲಿರುವ ಕಾಯ್ದೆಗೆ ತಿದ್ದುಪಡಿ ಮಾಡಿ ಎಲ್ಲ ಮಠಗಳನ್ನು ಕಾಯ್ದೆಯಡಿ ತರುವ ಬಗ್ಗೆ ಚಿಂತನೆ ನಡೆಸಿದ್ದು, ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಮುಜರಾಯಿ ಸಚಿವ ಪ್ರಕಾಶ್ ಹುಕ್ಕೇರಿ ತಿಳಿಸಿದ್ದಾರೆ.
ಸೋಮವಾರ ಪ್ರಶ್ನೋತ್ತರ ವೇಳೆಯಲ್ಲಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರ ಪ್ರಶ್ನೆಗೆ ಲಿಖೀತ ಉತ್ತರ ನೀಡಿರುವ ಅವರು, ಮಠಗಳಲ್ಲಿ ನಡೆಯುವ ಧಾರ್ಮಿಕ ವಿಧಿ- ವಿಧಾನಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ, ದುರಾಡಳಿತ, ಅವ್ಯವಹಾರ, ಆಸ್ತಿ ದುರುಪಯೋಗ ಪ್ರಕರಣ ತಡೆಯುವುದು ಕಾಯ್ದೆ ತಿದ್ದುಪಡಿ ಉದ್ದೇಶ ಎಂದು ಹೇಳಿದ್ದಾರೆ.
ಆದರೆ, ಈ ಮಾನದಂಡವನ್ನು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ಸಂಸ್ಥೆಗಳಿಗೆ ಅನ್ವಯಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದೂ ಸಚಿವರು ಸ್ಪಷ್ಟಪಡಿಸಿದ್ದಾರೆ.
ಹಿಂದೆ ಅಧಿಕಾರ ಇತ್ತು: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ-1997 ಅನುಷ್ಠಾನಗೊಳ್ಳುವ ಪೂರ್ವದಲ್ಲಿ 5 ವಿವಿಧ ಕಾಯ್ದೆಗಳು ರಾಜ್ಯದಲ್ಲಿ ಜಾರಿಯಲ್ಲಿದ್ದವು. ಆ ಪ್ರಕಾರ, ರಾಜ್ಯದ ಹಿಂದೂ ಧಾರ್ಮಿಕ ಸಂಸ್ಥೆಗಳ ಆಡಳಿತವನ್ನು ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮಠಾಧಿಪತಿಗಳು ನಿಧನರಾದರೆ, ವಿದೇಶ ಪ್ರವಾಸ ಕೈಗೊಂಡರೆ, ಮಠಾಧಿಪತಿಗಳು ಅಪ್ರಾಪ್ತ ವಯಸ್ಕರಾಗಿದ್ದರೆ ಮಠದ ಆಡಳಿತ ಮತ್ತು ಆಸ್ತಿ ನಿರ್ವಹಿಸಲು ಆಡಳಿತಾಧಿಕಾರಿ ನೇಮಿಸುವ ಅವಕಾಶ ಸರ್ಕಾರಕ್ಕಿತ್ತು. ಆದರೆ 1997ರ ಕಾಯ್ದೆ ಮಠಗಳಿಗೆ ಅನ್ವಯವಾಗುವುದಿಲ್ಲ ಎಂದು ಸೋಸಲೆ ವ್ಯಾದಿರಾಜ ಮಠದ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪು ನೀಡಿತ್ತು. ದುರಾಡಳಿತ, ಅವ್ಯವಹಾರ, ಆಸ್ತಿ ದುರುಪಯೋಗ ಸರಿಪಡಿಸಲು ಸರ್ಕಾರ ಕ್ರಮ ಕೈಗೊಳ್ಳಬಹುದಾಗಿದೆ ಎಂದೂ ನಿರ್ದೇಶನ ನೀಡಿತ್ತು. ಆ ಆದೇಶ ಪ್ರಶ್ನಿಸಿ ಮಠಾಧಿಪತಿಯವರು ದಾಖಲಿಸಿದ್ದ ರಿಟ್ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸರ್ಕಾರದ ನಿಯಂತ್ರಣಕ್ಕೆ ಮಠಗಳನ್ನು ಒಳಪಡಿಸಲು ಕಾನೂನು ರೂಪಿಸಬೇಕಾಗುತ್ತದೆ ಎಂದು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕಾಯ್ದೆಗೆ ತಿದ್ದುಪಡಿ ಮಾಡಿ ಎಲ್ಲ ಮಠಗಳನ್ನು ಕಾಯ್ದೆಯಡಿ ತರುವ ಪ್ರಸ್ತಾವನೆಯಿದೆ ಎಂದು ಸಚಿವರು ವಿವರಿಸಿದ್ದಾರೆ. ಸರ್ಕಾರದ ಈ ಕ್ರಮ ಧರ್ಮ-ಧರ್ಮದ ಮಧ್ಯೆ ತಾರತಮ್ಯ ನೀತಿ ಅನುಸರಿಸಿದಂತಲ್ಲವೇ ಎಂಬ ಪ್ರಶ್ನೆಗೆ, ಆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಮಠಗಳ ಮೇಲೆ ನಿಯಂತ್ರಣ ಸಾಧಿಸುವ ಸರ್ಕಾರದ ಪ್ರಯತ್ನಕ್ಕೆ ಹಿಂದೆ ಭಾರೀ ವಿರೋಧ ವ್ಯಕ್ತವಾಗಿತ್ತು. ಹಿಂದೂ ಧಾರ್ಮಿಕ ಮಠಗಳ ಮೇಲೆ ಮಾತ್ರ ನಿಯಂತ್ರಣ ಹೊಂದಲು ಕಾಯ್ದೆಗೆ ತಿದ್ದುಪಡಿ ತರುವ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಇದು ವಿವಾದಕ್ಕೂ ಕಾರಣವಾಗಿತ್ತು.
Click this button or press Ctrl+G to toggle between Kannada and English