ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಬಿಜೆಪಿ ನಾಯಕರು ಇಂದು ಕೋರ್ ಕಮಿಟಿ ಸಭೆ ನಡೆಸಿದ್ದಾರೆ. 28 ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಿಗೆ ಬಿಜೆಪಿ ಪಟ್ಟಿ ಸಿದ್ಧವಾಗಿದ್ದರೆ ಉಳಿದವು ತುಸು ಕಗ್ಗಂಟು ಎನಿಸಿದೆ. ಈ ಮಧ್ಯೆ, ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಣಕ್ಕಿಳಿಸುವ ಸಂಬಂಧ ಗಹನವಾದ ಚರ್ಚೆಗಳು ನಡೆದವು. ಶಿವಮೊಗ್ಗದಿಂದ ಸ್ಪರ್ಧಿಸುವಂತೆ ಬಿಎಸ್ವೈ ಮೇಲೆ ಪಕ್ಷದ ರಾಜ್ಯ ಮುಖಂಡರೂ ಒತ್ತಡ ಹಾಕಿದ್ದಾರೆ.
ಶಿವಮೊಗ್ಗದ ಸ್ಥಳೀಯರು ಮುಖಂಡರು ಹಿಂದಿನಿಂದಲೂ ಯಡಿಯೂರಪ್ಪ ಮೇಲೆ ಒತ್ತಡ ಹಾಕುತ್ತಿದ್ದು, ಚುನಾವಣೆಗೆ ನಿಲ್ಲುವಂತೆ ಕೋರಿದ್ದಾರೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೋರ್ ಕಮಿಟಿ ಸಭೆಯಲ್ಲಿಯೂ ‘ಯಡಿಯೂರಪ್ಪ ಅವರನ್ನು ಶಿವಮೊಗ್ಗದಿಂದ ಕಣಕ್ಕಿಳಿಯುವಂತೆ ಮನವೊಲಿಸುವ ಪ್ರಯತ್ನ ನಡೆಯಿತು’ ಎಂದು ಮೂಲಗಳು ತಿಳಿಸಿವೆ. 14 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಸುಗಮ ಆಯ್ಕೆ: ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಮಲ್ಲೇಶ್ವರದಲ್ಲಿರುವ ಪಕ್ಷದ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಸಭೆಯಲ್ಲಿ ಆಯಾ ಜಿಲ್ಲಾ ಬಿಜೆಪಿ ಮುಖಂಡರ ಸೂಕ್ತ ಅಭ್ಯರ್ಥಿಗಳ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡರು.
ಕರ್ನಾಟಕದ ದಕ್ಷಿಣ ಭಾಗದ 14 ಲೋಕಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಕೋರ್ ಕಮಿಟಿ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ ಮುಖಂಡರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡು ಅಭ್ಯರ್ಥಿಗಳ ಆಯ್ಕೆಯನ್ನು ಸುಲಲಿತವಾಗಿ ಅಂತಿಮಗೊಳಿಸಲಾಗಿದೆ. ಆದರೆ ಉಳಿದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಕಠಿಣವಾಗಿದ್ದು, ಮುಂದಿನ ಸಭೆಯಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸಭೆ ನಿರ್ಧರಿಸಿದೆ.
ಗಮನಾರ್ಹವೆಂದರೆ 14 ಕ್ಷೇತ್ರಗಳಲ್ಲಿ ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಗೆಲ್ಲುವ ಮುಖಗಳಿಗೆ ಮಣೆ ಹಾಕಲು ಕೋರ್ ಕಮಿಟಿಯಲ್ಲಿ ತೀರ್ಮಾನಿಸಲಾಗಿದೆ. 1. ಬೆಂಗಳೂರು ದಕ್ಷಿಣ, 2. ಬೆಂಗಳೂರು ಉತ್ತರ, 3. ಬೆಂಗಳೂರು ಕೇಂದ್ರ, 4. ಬೆಂಗಳೂರು ಗ್ರಾಮಾಂತರ, 5. ಕೋಲಾರ, 6. ತುಮಕೂರು, 7. ಹಾಸನ, 8. ಮೈಸೂರು, 9. ಚಾಮರಾಜನಗರ, 10. ಶಿವಮೊಗ್ಗ, 11. ಉತ್ತರ ಕನ್ನಡ, 12. ಹಾವೇರಿ, 13. ಬೀದರ್ ಮತ್ತು 14. ಬಳ್ಳಾರಿ ಲೋಕಸಭೆ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗಿದೆ.
ಶೋಭಾ ಕರಂದ್ಲಾಜೆ, ಜಾವಗಲ್ ಶ್ರೀನಾಥ್ ಗೆ ಟಿಕೆಟ್: ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ, ಬೆಂಗಳೂರು ಕೇಂದ್ರ- ಪಿಸಿ ಮೋಹನ್, ಬೆಂಗಳೂರು ದಕ್ಷಿಣ- ಅನಂತ್ ಕುಮಾರ್, ಬೆಂಗಳೂರು ಗ್ರಾಮಾಂತರ- ಮುನಿರಾಜು, ಹಾವೇರಿ- ಸಿದ್ದೇಶ್, ಕೋಲಾರ- ನಾರಾಯಣಸ್ವಾಮಿ/ ಬಿಎಸ್ ವೀರಯ್ಯ, ಮೈಸೂರು- ಶೋಭಾ ಕರಂದ್ಲಾಜೆ, ಹಾಸನ- ಜಾವಗಲ್ ಶ್ರೀನಾಥ್, ಬೀದರ್- ಸೂರ್ಯವಂಶಿ ನಾಗಮಾರಪಲ್ಲಿ, ಉತ್ತರ ಕನ್ನಡ- ಅನಂತ್ ಕುಮಾರ್ ಹೆಗಡೆ ಅವರ ಹೆಸರುಗಳು ಕೇಳಿ ಬಂದಿದ್ದು, ಇದೇ ಬಹುತೇಕ ಅಂತಿಮಗೊಳ್ಳುವ ಸಾಧ್ಯತೆಗಳಿವ.