ಬೆಂಗಳೂರು: ಆರ್ಥಿಕ ವರ್ಷ ಅಂತ್ಯವಾಗುತ್ತಿದ್ದಂತೆ ಆಡಳಿತಕ್ಕೆ ಇನ್ನಷ್ಟು ಚುರುಕು ನೀಡುವ ಉದ್ದೇಶದಿಂದ ಹಿರಿಯ ಐಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡುವುದರ ಜತೆಗೆ ಕೆಲವರನ್ನು ಆಯಕಟ್ಟಿನ ಸ್ಥಳಗಳಿಗೆ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಆದಾಯ ಸಂಗ್ರಹದಲ್ಲಿ ನಿರೀಕ್ಷಿತ ಪ್ರಗತಿ ಕಾಣದೇ ಇರುವುದರಿಂದ ಹಣಕಾಸು ವಿಭಾಗದ ಜವಾಬ್ದಾರಿಯನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಕೈಗೆ ನೀಡಲಾಗಿದೆ. ಇದಕ್ಕಾಗಿ ಕರ್ನಾಟಕ ನಗರ ಮೂಲ ಸೌಕರ್ಯ ಮತ್ತು ಹಣಕಾಸು ನಿಗಮದ ಅಧ್ಯಕ್ಷರಾಗಿದ್ದ ಎಲ್.ವಿ. ನಾಗರಾಜನ್ ಅವರನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಿ ಅವರಿಗೆ ಹಣಕಾಸು ಇಲಾಖೆ ಜವಾಬ್ದಾರಿ ವಹಿಸಲಾಗಿದೆ. ಜತೆಗೆ ನಗರ ಮೂಲ ಸೌಕರ್ಯ ಮತ್ತು ಹಣಕಾಸು ನಿಗಮದ ಅಧ್ಯಕ್ಷ ಸ್ಥಾನವನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಐ.ಎನ್.ಎಸ್. ಪ್ರಸಾದ್ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ ಇಲಾಖೆ) ಎಸ್.ಕೆ. ಪಟ್ನಾಯಕ್ ಅವರಿಗೆ ಬಿಡಿಎ ಅಧ್ಯಕ್ಷ ಸ್ಥಾನವನ್ನು ಹೆಚ್ಚುವರಿಯಾಗಿ ವಹಿಸಲಾಗಿದೆ. ಅದೇ ರೀತಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಿ ಅದೇ ಸ್ಥಾನದಲ್ಲಿ ಮುಂದುವರಿಸಲಾಗಿದೆ.
ಅದೇ ರೀತಿ ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲ ಸೌಕರ್ಯ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಿ.ಬಿ. ರಾಮಮೂರ್ತಿ ಅವರಿಗೆ ಬಡ್ತಿ ನೀಡಿ ಅದೇ ಸ್ಥಾನದಲ್ಲಿ ಮುಂದುವರಿಸಲಾಗಿದೆ. ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಡಿ. ಸತ್ಯಮೂರ್ತಿ ಅವರಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಿ ನಗರಾಭಿವೃದ್ಧಿ ಇಲಾಖೆಗೆ ವರ್ಗ ಮಾಡಲಾಗಿದೆ.
ಹೆಚ್ಚುವರಿ ಬಡ್ತಿ: ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿದ್ದ ಡಿ.ಎನ್. ನರಸಿಂಹಮೂರ್ತಿ ಅವರಿಗೆ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಬಡ್ತಿ ನೀಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ. ಮದನಗೋಪಾಲ್ ಅವರಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದರ್ಜೆಗೆ ಬಡ್ತಿ ನೀಡಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಗೆ ನೇಮಕ ಮಾಡಲಾಗಿದೆ.
Click this button or press Ctrl+G to toggle between Kannada and English