ಬೆಂಗಳೂರು: ಚಿನ್ನದ ಗಟ್ಟಿ ಹಾಗೂ ಆಭರಣ ಸೇರಿದಂತೆ ಒಟ್ಟು 3 ಕೆ.ಜಿ. ಚಿನ್ನವನ್ನು ಅಕ್ರಮವಾಗಿ ಹೊಂದಿದ್ದ ವ್ಯಕ್ತಿಗಳಿಬ್ಬರನ್ನು ಮಹಾಲಕ್ಷಿ ಬಡಾವಣೆ ಪೊಲೀಸರು ಬಂಧಿಸಿದ್ದಾರೆ.
ರಾಮನಗರ ಜಿಲ್ಲೆ ಕುರುಬರಹಳ್ಳಿಯ ಚೆಲುವರಾಜು ಮತ್ತು ಜಯಂತಿ ಬಂಧಿತರು. ಬಂಧಿತರಿಂದ 1 ಕೆ.ಜಿ. ತೂಕದ 1 ಚಿನ್ನದ ಗಟ್ಟಿ ಹಾಗೂ 2 ಕೆ.ಜಿ. ತೂಕದ ಚಿನ್ನಾಭರಣ ಸೇರಿದಂತೆ ಒಟ್ಟು 90 ಲಕ್ಷ ಮೌಲ್ಯದ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅವರು ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
ಮೂಲತಃ ರಾಮನಗರದವನಾದ ಚೆಲುವರಾಜು ನಗರದ ರಿಚ್‌ಮಂಡ್ ಟೌನ್‌ನಲ್ಲಿರುವ ಆಶೀರ್ವಾದ್ ಜುವೆಲ್ಲರಿಯಲ್ಲಿ ಕೆಲಸ ಮಾಡುತ್ತಿದ್ದ. ಹತ್ತು ತಿಂಗಳ ಹಿಂದೆ ಅಲ್ಲಿ ಕೆಲಸ ಬಿಟ್ಟಿದ್ದ ಆತ ತನ್ನ ಬಳಿಯಿದ್ದ ಚಿನ್ನವನ್ನು ರಾಗಿ ಮೂಟೆಯಲ್ಲಿ ಹಾಕಿ ಪಕ್ಕದ ಮನೆಯ ಪರಿಚಿತ ಮಹಿಳೆ ಜಯಂತಿ ಎಂಬುವರ ಮನೆಯಲ್ಲಿರಿಸಿದ್ದ.
ಸಂಶಯಗೊಂಡು ರಾಗಿ ಮೂಟೆ ತೆರೆದ ಜಯಂತಿಗೆ ಅದರಲ್ಲಿ ಚಿನ್ನ ಕಂಡಿತ್ತು. ಅದನ್ನು ಸ್ವಂತಕ್ಕೆ ಬಳಸಿಕೊಂಡ ಆಕೆ ಅದನ್ನು ಮಾರಾಟ ಮಾಡಲು ಹೋದಾಗ ಅನುಮಾನ ಬಂದ ಚಿನ್ನದ ಅಂಗಡಿಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಇಬ್ಬರನ್ನೂ ಬಂಧಿಸಿದ್ದು, ಅವರು ನೀಡಿದ ಸುಳಿವಿನ ಮೇರೆಗೆ ಚಿನ್ನದ ಗಟ್ಟಿ ಹಾಗೂ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಚೆಲುವರಾಜು ಕೆಲಸ ಮಾಡುತ್ತಿದ್ದ ಆಶೀರ್ವಾದ್ ಜುವೆಲ್ಲರಿ ಮಾಲೀಕರು ಅವರಲ್ಲಿ ಯಾವುದೇ ಕಳ್ಳತನ ಆಗಿರುವ ಬಗ್ಗೆ ದೂರು ನೀಡಿಲ್ಲ. ಅಲ್ಲದೆ, ಚಿನ್ನದ ಗಟ್ಟಿ ಎಲ್ಲಿಂದ ತರಲಾಗಿದೆ ಎಂಬ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ. ವಶಪಡಿಸಿಕೊಳ್ಳಲಾದ ಚಿನ್ನವು ಕದ್ದಿದ್ದೇ ಅಥವಾ ಕಳ್ಳಸಾಗಣೆ ಮಾಡಿದ ಸರಕೇ ಎಂಬ ಬಗ್ಗೆ ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಿ ಸ್ಪಷ್ಟಪಡಿಸಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ, ಹೇಮಂತ್ ನಿಂಬಾಳ್ಕರ್, ಉಪ ಪೊಲೀಸ್ ಆಯುಕ್ತರಾದ ಲಾಬೂರಾಮ್ ಹಾಗೂ ಸಂದೀಪ್ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
Click this button or press Ctrl+G to toggle between Kannada and English