ಶಿವಮೊಗ್ಗದಲ್ಲೇ ಸ್ಪರ್ಧೆ: ಬಿಎಸ್‌ವೈ

11:52 AM, Wednesday, February 5th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

yeddyurappa ಶಿಕಾರಿಪುರ: ಮಾತೃಪಕ್ಷಕ್ಕೆ ಮರಳಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊನೆಗೂ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದಲೇ ಕಣಕ್ಕಿಳಿಯಲು ತಯಾರಾಗಿದ್ದಾರೆ. ಬಿಜೆಪಿ ಹೈಕಮಾಂಡ್ ಹಾಗೂ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯರು ಕಣಕ್ಕಿಳಿಯುವಂತೆ ಭಾರಿ ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ಸ್ಪರ್ಧಿಸುವ ಅನಿವಾರ್ಯತೆ ಎದುರಾಗಿದ್ದರಿಂದ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿದ್ದಾರೆ.

ಮಂಗಳವಾರ ಶಿಕಾರಿಪುರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಹಿಂದಿನ ಎಲ್ಲ ಕಹಿ ಘಟನೆಗಳನ್ನು ಮರೆತು ಒಂದಾಗಿ, ಒಗ್ಗಟ್ಟಾಗಿ, ಸಾಮೂಹಿಕ ನಾಯಕತ್ವದಲ್ಲಿ ಲೋಕಸಭೆ ಚುನಾವಣೆ ಎದುರಿಸಲಾಗುವುದು. ರಾಜ್ಯಾದ್ಯಂತ ಸಂಚರಿಸಿ ಪಕ್ಷ ಸಂಘಟನೆಯ ಜತೆಗೆ ಶಿವಮೊಗ್ಗ ಲೋಕಸಭೆಯಲ್ಲಿ ಸ್ಪರ್ಧಿಸುತ್ತೇನೆ ಎಂದರು.

ಪ್ರಚಾರದ ಹೊಣೆ ಬೇಕಾಗಿಲ್ಲ: ಇದಕ್ಕೂ ಮುನ್ನ ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನಗೆ ಲೋಕಸಭೆ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಬೇಕಾಗಿಲ್ಲ. ಅದನ್ನು ನಾನು ಎಂದಿಗೂ ಬಯಸಿಲ್ಲ. ಮೊದಲಿಗಿಂತಲೂ ಪಕ್ಷದಲ್ಲಿ ಈಗ ನಾನು ಚೆನ್ನಾಗಿದ್ದೇನೆ. ಪಕ್ಷವನ್ನು ರಾಜ್ಯಾದ್ಯಂತ ಬಲಪಡಿಸುವ ಕಾರ್ಯದಲ್ಲಿ ತೊಡಗಿದ್ದೇನೆ. ಫೆ.6ರಂದು ನವದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹಾಗೂ ನಾನು ಸೇರಿದಂತೆ ಬಿಜೆಪಿ ಸಮನ್ವಯ ಸಮಿತಿ ಸದಸ್ಯರು ಭೇಟಿ ಮಾಡಿ ಮುಂಬರುವ ಲೋಕಸಭೆ ಚುನಾವಣೆಯ ಬಗ್ಗೆ ಚರ್ಚಿಸಲಿದ್ದೇವೆ. ನಂತರ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಎಂದರು.

ದಂಡ ನಾಯಕನೇ ಯುದ್ಧಭೂಮಿಯಿಂದ ಓಡಿದರೆ ಸಾಮಾನ್ಯ ಸೈನಿಕರ ಗತಿಯೇನು? ಈಗ ಅಂಥದ್ದೇ ಪರಿಸ್ಥಿತಿ ರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷದ್ದಾಗಿದೆ. ಮುಂಬರುವ ಲೋಕಸಭೆ ಚುನಾವಣೆ ಪೂರ್ವದಲ್ಲೇ ಕಾಂಗ್ರೆಸ್ ಸಮರ್ಥ ನಾಯಕರಿಲ್ಲದೆ ನಲುಗುತ್ತಿದೆ. ಯುದ್ಧ ಆರಂಭಗೊಳ್ಳುವ ಮುನ್ನವೇ ದಂಡ ನಾಯಕ ಓಡಿ ಹೋದರೆ ಏನೆಂಬ ಸ್ಥಿತಿ ಕಾಂಗ್ರೆಸ್ಸಿಗರದ್ದಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಸತ್ತಂತಿದೆ. ಕಳೆದ 10 ವರ್ಷಗಳಿಗೆ ಹೋಲಿಸಿದರೆ ಅಭಿವೃದ್ಧಿ ಶೂನ್ಯವಾಗಿದೆ. ಪ್ರಗತಿಯನ್ನೇ ಮಾಡದ ಕಾಂಗ್ರೆಸ್ ಸರ್ಕಾರ ತೆರಿಗೆ ಸಂಗ್ರಹದಲ್ಲೂ ವಿಫಲವಾಗಿದೆ ಎಂದರು.

ಸಿಬಿಐಗೆ ಒಪ್ಪಿಸಿ: ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಹಾಗೂ ರೌಡಿ ಮುನ್ನಾ ಸಾವಿಗೆ ಪೊಲೀಸರೇ ಕಾರಣ ಎಂದು ಮುನ್ನಾ ಪತ್ನಿ ಗೌಸಿಯಾ ಬೇಗಂ ಹೇಳಿದ್ದಾರೆ. ಈ ಪ್ರಕರಣವನ್ನು ಏಕೆ ಸಿಬಿಐಗೆ ತನಿಖೆಗೆ ಒಪ್ಪಿಸುತ್ತಿಲ್ಲ. ಹೀಗಾದರೆ ಪ್ರಾಮಾಣಿಕ ಅಧಿಕಾರಿಗಳು ಕೆಲಸ ಮಾಡುವುದಾದರೂ ಹೇಗೆ? ಸಾಧನೆ ಮಾತನಾಡಬೇಕು. ಆದರೆ ಸಿದ್ದರಾಮಯ್ಯನವರ ಸರ್ಕಾರದ್ದು ಮಾತೇ ಸಾಧನೆಯಾಗಿದೆ ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English