ವೀರಪ್ಪನ್ ಸಹಚರರ ಶಿಕ್ಷೆ ಇಳಿಸಬೇಡಿ

2:02 PM, Thursday, February 6th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Rajiv-gandhiಮೈಸೂರು: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಆರೋಪಿಗಳಿಗೆ ಮರಣದಂಡನೆಯನ್ನು ಜೀವಾವಧಿಗಿಳಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ವಿರೋಧಿಸಿರುವಂತೆ ಕಾಡುಗಳ್ಳ, ನರಹಂತಕ ವೀರಪ್ಪನ್‌ನ ನಾಲ್ವರು ಸಹಚರರಿಗೆ ಮರಣದಂಡನೆಯನ್ನು ಜೀವಾವಧಿಗಿಳಿಸುವುದಕ್ಕೆ ಸಬ್ ಇನ್‌ಸ್ಪೆಕ್ಟರ್ ಶಕೀಲ್ ಅಹ್ಮದ್ ಅವರ ಸಹೋದರ ಎಂ.ಜಮೀಲ್ ಅಹ್ಮದ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಅವರು ಈ ಸಂಬಂಧ ಕೇಂದ್ರ ಗೃಹ ಕಾರ್ಯದರ್ಶಿಗೆ ಬರೆದಿರುವ ಪತ್ರ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.

ಸ್ವಾತಂತ್ರ್ಯೋತ್ಸವದ ಮುನ್ನಾ ದಿನ ಅಂದರೆ 1992ರ ಆ.14ರಂದು ವೀರಪ್ಪನ್ ಕೊಳ್ಳೇಗಾಲ ತಾಲೂಕು ಮೀಣ್ಯಂ ಬಳಿ ನಡೆಸಿದ ಹತ್ಯಾಕಾಂಡದಲ್ಲಿ ಮೈಸೂರು ಎಸ್ಪಿ ಟಿ.ಹರೀಕೃಷ್ಣ, ಪಿಎಸ್‌ಐ ಶಕೀಲ್ ಅಹ್ಮದ್ ಹತರಾಗಿದ್ದರು. ಕನ್ನಡದ ವರನಟ ಡಾ.ರಾಜ್‌ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದಾಗ ಮೈಸೂರು ಜೇಲಿನಲ್ಲಿದ್ದ ಟಾಡಾ ಆರೋಪಿಗಳನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಮುಂದಾಗಿತ್ತು. ಇದನ್ನು ವಿರೋಧಿಸಿ  ಶಕೀಲ್ ಅಹ್ಮದ್ ಅವರ ತಂದೆ, ನಿವೃತ್ತ ಡಿವೈಎಸ್ಪಿ ಅಬ್ದುಲ್ ಕರೀಂ ಕಾನೂನು ಹೋರಾಟ ನಡೆಸಿದ್ದರು. ಹೀಗಾಗಿ ಟಾಡಾ ಆರೋಪಿಗಳ ಬಿಡುಗಡೆ ಸುಪ್ರೀಂ ಕೋರ್ಟ್‌ನಲ್ಲಿ ರದ್ದಾಗಿತ್ತು. ಅಬ್ದುಲ್ ಕರೀಂ ಅವರ ನಿಧನದ ನಂತರ ಅವರ ಪುತ್ರ ಹಾಗೂ ಶಕೀಲ್ ಅವರ ಸೋದರ, ಮೈಸೂರು ವಿವಿಯಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿರುವ ಎಂ.ಜಮೀಲ್ ಅಹ್ಮದ್ ಅವರು ವೀರಪ್ಪನ್ ಸಹಚರರಿಗೆ ಗಲ್ಲು ಶಿಕ್ಷೆ ಆಗಲೇಬೇಕು ಎಂದು ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ.

ಹಂತಕರ ಕ್ಷಮಾದಾನ ಅರ್ಜಿಗೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬವಾಗಿರಬಹುದು. ಆದರೆ ಶಿಕ್ಷೆಯಲ್ಲಿ ಯಾವುದೇ ಕಾರಣಕ್ಕೂ ವಿನಾಯ್ತಿ ನೀಡಬಾರದು ಎಂಬುದು ಅವರ ಆಗ್ರಹ. ಕೇಂದ್ರ ಸರ್ಕಾರ ಕೇವಲ ಅದೇ ಪೀಠದ ಮುಂದೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವುದರಿಂದ ಯಾವುದೇ ಪ್ರಯೋಜನವಾಗದು. ಇದರ ಬದಲು ಇದೊಂದು ವಿಶೇಷ ಪ್ರಕರಣವಾಗಿರುವುದರಿಂದ ಹಾಗೂ ಆಪಾದಿತರು 22 ಮಂದಿಯನ್ನು ಅಮಾನವೀಯವಾಗಿ ಹತ್ಯೆ ಮಾಡಿರುವುದರಿಂದ ಯಾವುದೇ ಕ್ಷಮೆಗೆ ಅರ್ಹರಲ್ಲ.

ಇವರ ಈ ಕುಕೃತ್ಯದಿಂದ 22 ಮಂದಿಯ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ಯಾರಿಗೆ ದಯೆ ಇಲ್ಲವೋ ಅವರಿಗೆ ಯಾವುದೇ ದಯೆ ತೋರಿಸಬಾರದು ಎಂದು ಭುಲ್ಲಾರ್ ಪ್ರಕರಣದಲ್ಲಿ ಸುಪ್ರೀ ಕೋರ್ಟ್ ಹೇಳಿರುವುದನ್ನು ಗಮನಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಸುಪ್ರೀಂ ಕೋರ್ಟ್‌ನ ಪೂರ್ಣ ಪೀಠದ ಮುಂದೆ ಕ್ರಿಮಿನಲ್ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವ ಮೂಲಕ  ಈ ನಾಲ್ವರಿಗೆ ಮರಣದಂಡನೆ ಆಗುವಂತೆ ನೋಡಿಕೊಂಡು, ವೀರಪ್ಪನ್‌ನಿಂದ ಹತರಾದ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಅವರು ಕೋರಿದ್ದಾರೆ.
1993ರಲ್ಲಿ ವೀರಪ್ಪನ್ ತಂಡ ಪಾಲಾರ್ ಸೇತುವೆ ಬಳಿ ನಡೆಸಿದ ನೆಲಬಾಂಬ್ ಸ್ಫೋಟದಲ್ಲಿ ಪೊಲೀಸರು, ಮಾಹಿತಿದಾರರು ಸೇರಿದಂತೆ 22 ಮಂದಿ ಹತರಾಗಿದ್ದರು. ಈ ಪ್ರಕರಣದಲ್ಲಿ 16 ಮಂದಿಗೆ ಜೀವಾವಧಿ ಶಿಕ್ಷೆಯಾಗಿತ್ತು. ಅವರಲ್ಲಿ ಸೈಮನ್- ಬಿಲವೇಂದ್ರನ್, ಜ್ಞಾನಪ್ರಕಾಶ್, ಮೀಸೆಕಾರ ಮಾದಯ್ಯ ಕೂಡ ಸೇರಿದ್ದರು. ಈ ನಾಲ್ವರು ಇದನ್ನು ಪ್ರಶ್ನಿಸಿ 2004ರಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅಲ್ಲಿ ಅವರಿಗೆ ಮರಣದಂಡನೆ ವಿಧಿಸಲಾಗಿತ್ತು.

ನಂತರ ಅವರು ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕಳೆದ ವರ್ಷದ ಫೆ.13 ರಂದು ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದರು. ಆದರೆ ಈ ಅರ್ಜಿಯ ಬಗ್ಗೆ ತೀರ್ಮಾನ ಕೈಗೊಳ್ಳಲು ವಿಳಂಬವಾಗಿದೆ ಎಂಬ ಆಧಾರದ ಮೇಲೆ ಕಳೆದ ತಿಂಗಳು ಸುಪ್ರೀಂ ಕೋರ್ಟ್ ಈ ನಾಲ್ವರಿಗೆ ಜೀವದಾನ ನೀಡಿತ್ತು.

ಇವರಿಗೆ ಯಾವುದೇ ಪ್ರಶಸ್ತಿ ಬರಲಿಲ್ಲ: ಆರಂಭಿಕ ಹಂತದಲ್ಲಿ ಟಿ.ಹರಿಕೃಷ್ಣ ಹಾಗೂ ಶಕೀಲ್ ಅಹ್ಮದ್ ಅವರು ವೀರಪ್ಪನ್ ತಂಡವನ್ನು ಮಟ್ಟ ಹಾಕಲು ಯತ್ನಿಸಿದ್ದರು. ಅದರಲ್ಲೂ ಶಕೀಲ್ ಅಹ್ಮದ್ ದಂತ ಖರೀದಿಸುವವರ ಮಾರುವೇಷದಲ್ಲಿ ಹೋಗಿ ವೀರಪ್ಪನ್‌ನ ಬಲಗೈ ಬಂಟ ಗುರುನಾಥನ್‌ನನ್ನು ಬಂಧಿಸಿದ್ದರು. ನಂತರ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಗ ಗುಂಡು ಹಾರಿಸಿ ಕೊಂದಿದ್ದರು. ಇದಕ್ಕೆ ಪ್ರತಿಕಾರವಾಗಿಯೇ ವೀರಪ್ಪನ್ ಟಿ.ಹರಿಕೃಷ್ಣ ಮತ್ತು ಶಕೀಲ್ ಅಹ್ಮದ್ ಅವರನ್ನು ಮೀಣ್ಯಂ ಬಳಿ ಕರೆಸಿಕೊಂಡು, ಗೆರಿಲ್ಲಾ ಮಾದರಿಯ ತಂತ್ರ ಬಳಸಿ, ಹತ್ಯೆ ಮಾಡಿದ್ದ. ಆದರೆ ಹರಿಕೃಷ್ಣ ಮತ್ತು ಶಕೀಲ್ ಅವರಿಗೆ ಮರಣೋತ್ತರವಾಗಿ ಯಾವುದೇ ಪ್ರಶಸ್ತಿ ಸಿಗಲಿಲ್ಲ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English