ಬೆಂಗಳೂರುಃ ದೇಶದ ಪರಮೋತ್ಛ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ಸ್ವೀಕರಿಸಿ ಬೆಂಗಳೂರಿಗೆ ಹಿಂತಿರುಗಿದ ಖ್ಯಾತ ವಿಜ್ಞಾನಿ ಡಾ.ಸಿ.ಎನ್.ಆರ್. ರಾವ್ ಅವರನ್ನು ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.
ಬುಧವಾರ ಮಧ್ಯಾಹ್ನ 12.20ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ನಿ ಇಂಧುಮತಿ ರಾವ್ ಜತೆ ಬಂದಿಳಿದ ಸಿ.ಎನ್.ಆರ್.ರಾವ್ ಅವರನ್ನು ಸರ್ಕಾರದ ಪರವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ವಿಜಯ್‌ಕುಮಾರ್ ತೋರ್‌ಗಲ್ ಸೇರಿದಂತೆ ಜವಾಹರಲಾಲ್ ಉನ್ನತ ವಿಜ್ಞಾನ ಅಧ್ಯಯನ ಕೇಂದ್ರದ ಅಧಿಕಾರಿಗಳು ಹೂಗುತ್ಛ ನೀಡಿ ಸ್ವಾಗತಿಸಿದರು.
ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ವಿಜ್ಞಾನಿ ಸಿ.ಎನ್.ಆರ್.ರಾವ್, ದೇಶದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿ ತಮಗೆ ದೊರೆತಿರುವುದಕ್ಕೆ ಅತೀವ ಸಂತಸವಾಗಿದ್ದು, ತಮಗೆ ಬಂದ ಪ್ರಶಸ್ತಿಯು ಯುವಜನಾಂಗಕ್ಕೆ ಸ್ಫೂರ್ತಿಯಾಗಲಿ. ಆ ಮೂಲಕ ವಿಜ್ಞಾನ ಕ್ಷೇತ್ರಕ್ಕೆ ಯುವಜನರು ಹೆಚ್ಚಾಗಿ ಬರಬೇಕು ಎಂದು ಆಶಿಸಿದರು.
ವಿಜ್ಞಾನ ಕ್ಷೇತ್ರವನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಹೆಚ್ಚಿನ ಸಂತೋಷ ತಂದಿದೆ. ಮುಂದೆಯೂ ವೈಜ್ಞಾನಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲಿದ್ದು, ತಮ್ಮಿಂದ ಸಾಧ್ಯವಾದಷ್ಟು ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಲು ಪ್ರಯತ್ನಿಸುವುದಾಗಿ ಹೇಳಿದರು.
ಬಹಳ ವರ್ಷಗಳ ನಂತರ ಪ್ರಶಸ್ತಿಗೆ ವಿಜ್ಞಾನ ಕ್ಷೇತ್ರವನ್ನು ಗುರುತಿಸಿರುವುದು ಸಂತಸವಾಗಿದ್ದು, ವಿಜ್ಞಾನ ಕ್ಷೇತ್ರದಲ್ಲೂ ವಿಪುಲ ಅವಕಾಶಗಳಿವೆ. ಇದನ್ನರಿತು ಮುನ್ನಡೆದರೆ ಸಾಧನೆಯ ಮೇರು ಶಿಖರ ಏರುವುದರಲ್ಲಿ ಸಂಶಯವಿಲ್ಲ. ತಾವು ಪಡೆದಿರುವ ಈ ಪ್ರಶಸ್ತಿ ಯುವಜನರಿಗೆ ಮಾದರಿಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಭಾರತ ರತ್ನ ಪ್ರಶಸ್ತಿಯು ತುಂಬಾ ತಡವಾಗಿ ದಕ್ಕಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಂತಹ ಭಾವನೆ ಮೂಡಿಲ್ಲ. 30 ವರ್ಷದ ಹಿಂದೆಯೇ ಪದ್ಮವಿಭೂಷಣ ಪ್ರಶಸ್ತಿ ಸಿಕ್ಕಿದೆ ಎಂದಷ್ಟೆ ಹೇಳಿದರು.
ರಾಷ್ಟ್ರದ ಪ್ರತಿಷ್ಠಿತ ‘ಭಾರತ ರತ್ನ’ ಪ್ರಶಸ್ತಿ ಸ್ವೀಕರಿಸಿ ಬೆಂಗಳೂರಿಗೆ ಮರಳಿದ ವಿಜ್ಞಾನಿ ಡಾ. ಸಿ.ಎನ್.ಆರ್.ರಾವ್ ಅವರನ್ನು ಸ್ವಾಗತಿಸಲು ಸರ್ಕಾರದ ಪ್ರತಿನಿಧಿಯಾಗಿ ಸೌಜನ್ಯಕ್ಕೂ ಯಾವೊಬ್ಬ ಸಚಿವರೂ ವಿಮಾನ ನಿಲ್ದಾಣಕ್ಕೆ ಬಾರದಿದ್ದುದು ಹಲವರ ಬೇಸರಕ್ಕೆ ಕಾರಣವಾಯಿತು
Click this button or press Ctrl+G to toggle between Kannada and English