ಈ ಬಾರಿ ತೃತೀಯ ರಂಗ ಸರ್ಕಾರ ಅಸ್ತಿತ್ವಕ್ಕೆ: ಅಜೀಂ

4:26 PM, Thursday, February 6th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

HD-Deve-Gowdaಮೈಸೂರು: ಈ ಬಾರಿ ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ತೃತೀಯ ರಂಗದ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಸರ್ಕಾರ ರಚನೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಜೆಡಿಎಸ್ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಂ ಹೇಳಿದರು.

ತೃತೀಯ ರಂಗ ರಚನೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈ ತಿಂಗಳ ಮೂರನೇ ವಾರ ಬೆಂಗಳೂರಿನಲ್ಲಿ 14 ಪ್ರಾದೇಶಿಕ ಪಕ್ಷಗಳ ಸಭೆ ಕರೆದಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ದೇವೇಗೌಡರು ವಹಿಸುವರು. ತೃತೀಯ ರಂಗಕ್ಕೆ ಈಬಾರಿ ಚುನಾವಣೆಯಲ್ಲಿ 240 ಸ್ಥಾನ ಖಚಿತ. ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಹೆಸರಿಗೆ ಪ್ರಧಾನಿ ಆಗುವ ಅದೃಷ್ಟ ಇಲ್ಲ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ನಗರದ ಮೂರು ಕ್ಷೇತ್ರ, ಚಾಮುಂಡೇಶ್ವರಿ, ಹುಣಸೂರು ಮತ್ತು ಪಿರಿಯಾಪಟ್ಟಣ ಕ್ಷೇತ್ರಗಳಿಂದ ಜೆಡಿಎಸ್‌ಗೆ 2.46 ಲಕ್ಷ, ಕಾಂಗ್ರೆಸ್‌ಗೆ 3.46 ಲಕ್ಷ ಮತ್ತು ಬಿಜೆಪಿಗೆ 1 ಲಕ್ಷ ಮತಗಳು ದೊರಕಿವೆ. ನಮಗೂ ಕಾಂಗ್ರೆಸ್‌ಗೂ 1 ಲಕ್ಷ ಮತಗಳ ವ್ಯತ್ಯಾಸ ಇದೆ. ಕಳೆದ ಬಾರಿ ಅಲ್ಪಸಂಖ್ಯಾತರು ನಮಗೆ ಮತ ನೀಡಲಿಲ್ಲ. ಆದರೆ ಈ ಬಾರಿ ಅಲ್ಪಸಂಖ್ಯಾತರು ನಮ್ಮ ಪರವಿದ್ದಾರೆ. ಆದ್ದರಿಂದ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರಕ್ಕೆ ಸಂಭಾವಿತ, ಸುಸಂಸ್ಕೃತ ಮತ್ತು ವಿದ್ಯಾವಂತ ಅಭ್ಯರ್ಥಿಗಾಗಿ ಹುಡುಕಾಟ ಆರಂಭಿಸಿದ್ದೇವೆ ಎಂದರು.

2014ರ ಲೋಕಸಭಾ ಚುನಾವಣೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಸರ್ಕಾರದ ಅವಧಿಯ ಸಾಧನೆಯನ್ನು ಜನರ ಮುಂದಿಡುತ್ತೇವೆ. ಲೋಕಪಾಲ, ಮಹಿಳೆಯರಿಗೆ ಶೇ. 33 ಮೀಸಲಾತಿ ಮತ್ತು ಅಲ್ಪಸಂಖ್ಯಾತರಿಗೆ ಉದ್ಯೋಗದಲ್ಲಿ ಶೇ. 4 ಮೀಸಲಾತಿಯು ಎಚ್.ಡಿ. ದೇವೇಗೌಡರು ಪ್ರಧಾನಿ ಆಗಿದ್ದ ವೇಳೆಯಲ್ಲಿಯೆ ಮಂಡನೆ ಆಗಿತ್ತು ಎಂದರು.

9ರಂದು ಸಮಾವೇಶ: ಫೆ.9ರಂದು ಮೈಸೂರಿನಲ್ಲಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ ಆಯೋಜಿಸಿದ್ದೇವೆ. ಈ ಸಮಾವೇಶದಲ್ಲಿ ಹಿಂದುಳಿದ ವರ್ಗದವರು ಮಾತ್ರವಲ್ಲದೆ, ಬ್ರಾಹ್ಮಣ, ಲಿಂಗಾಯಿತ ಜಾತಿಯಲ್ಲಿನ ಹಿಂದುಳಿದವರನ್ನೂ ಆಹ್ವಾನಿಸುತ್ತಿದ್ದೇವೆ. ಅಹಿಂದ ಎಂಬುದು ಕೇವಲ ಕಾಂಗ್ರೆಸ್‌ನ ಆಸ್ತಿ ಅಲ್ಲ. ಬೀದರ್, ಬೆಂಗಳೂರು ಕೇಂದ್ರ ಮತ್ತು ದಾವಣಗೆರೆ ಲೋಕಸಭಾ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರನ್ನು ಕಣಕ್ಕಿಳಿಸಲು ಚಿಂತಿಸಲಾಗಿದೆ ಎಂದರು.

ಪಕ್ಷವನ್ನು ಪುನಾ ರಚಿಸಲಾಗಿದೆ. 20 ಘಟಕಗಳಾಗಿ ವಿಭಾಗಿಸಲಾಗಿದೆ. ಸಾಮಾಜಿಕ ನ್ಯಾಯ ಮತ್ತು ಸಾಮೂಹಿಕ ನಾಯಕತ್ವದ ಆಧಾರದ ಮೇಲೆ ಅಧಿಕಾರ ಹಂಚಿಕೆ ಮಾಡಲಾಗಿದೆ. ಅಲ್ಲದೆ ಪಕ್ಷದ ಬ್ಯಾನರ್‌ಗಳು ಮತ್ತು ಪೋಸ್ಟರ್‌ಗಳಲ್ಲಿಯೂ ಸಾಮೂಹಿಕ ನಾಯಕತ್ವದ ಆಧಾರದ ಮೇಲೆಯೆ ಎಲ್ಲರ ಭಾವಚಿತ್ರ ಹಾಕಬೇಕು ಎಂಬ ಸೂಚನೆ ನೀಡಲಾಗಿದೆ ಎಂದರು.

ಅಲ್ಪಸಂಖ್ಯಾತರ ಘಟಕದ ರಾಷ್ಟ್ರೀಯ ಅಧ್ಯಕ್ಷ ಫೈರೋಜ್ ಮಹಮ್ಮದ್, ನಗರ ಜೆಡಿಎಸ್ ಅಧ್ಯಕ್ಷ ರಾಜಣ್ಣ, ಪ್ರಧಾನ ಕಾರ್ಯದರ್ಶಿ ಎಸ್.ಬಿ.ಎಂ. ಮಂಜು, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಮಾಜಿ ಉಪ ಮೇಯರ್ ಎಂ.ಜೆ.ರವಿಕುಮಾರ್, ಪಾಲಿಕೆ ಸದಸ್ಯರಾದ ಬಿ.ಎಂ.ನಟರಾಜು, ಅನುಸೂಯ, ಕೆಂಪಣ್ಣ, ರಮೇಶ್ ಇದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English