ಮಂಗಳೂರು : ಕಾರ್ಮಿಕ ಇಲಾಖೆ ಕಂದಾಯ ಮತ್ತು ಗಣಿವಿಜ್ಞಾನ ಇಲಾಖೆಯ ಸಹಕಾರದಿಂದ ಜಿಲ್ಲೆಯ ಎಲ್ಲ ಕಲ್ಲುಕೋರೆಯಲ್ಲಿರುವ ಕಾರ್ಮಿಕ ವ್ಯವಸ್ಥೆಯ ಬಗ್ಗೆ ಏಳುದಿನಗಳೊಳಗೆ ಸಮಗ್ರ ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಶ್ರೀ ಸುಬೋಧ್ ಯಾದವ್ ಅವರು ಕಾರ್ಮಿಕ ಇಲಾಖೆ ಅಧಿಕಾರಿ ಶ್ರೀ ಅಪ್ಪಯ್ಯ ಶಿಂಧಿಹಟ್ಟಿ ಅವರಿಗೆ ಸೂಚನೆ ನೀಡಿದರು.
ಅಧಿಕಾರಿಗಳು ಮಾನವಹಕ್ಕು ಆಯೋಗದ ನಿರ್ದೇಶನದಂತೆ ಜೀತಪದ್ಧತಿ ಹಾಗೂ ಬಾಲಕಾರ್ಮಿಕ ವ್ಯವಸ್ಥೆಯ ನಿರ್ಮೂಲನಕ್ಕೆ ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ಕಾನೂನನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿದ್ದರೆ ವಿಟ್ಲದಲ್ಲಿ ವರದಿಯಾದ ಜೀತಪದ್ಧತಿಗೆ ಅವಕಾಶವಿರುತ್ತಿರಲಿಲ್ಲ. ಕಲ್ಲುಕೋರೆಯ ಕಾರ್ಮಿಕರ ಸ್ಥಿತಿಗತಿ ಪತ್ತೆಹಚ್ಚುವುದು ಅಸಾಧ್ಯವೇನಲ್ಲ ಎಂದ ಜಿಲ್ಲಾಧಿಕಾರಿಗಳು, ಅಪರಾಧಗಳು ನಡೆಯುವಾಗ ಕಣ್ಣುಮುಚ್ಚಿ ಕೂರುವುದು ಮಹಾಪರಾಧ ಎಂದರಲ್ಲದೆ, ಈ ಸಂಬಂಧ ಅಧಿಕಾರಿಗಳನ್ನು ಹೊಣೆಯಾಗಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದರು.
ತಹಸೀಲ್ದಾರುಗಳಿಗೆ ಕಾರ್ಮಿಕ ಇಲಾಖೆಗೆ ಸಹಕಾರ ನೀಡಲು ಸುತ್ತೋಲೆ ಯನ್ನು ಈಗಾಗಲೇ ಕಳುಹಿಸಲಾಗಿದೆ ಎಂದ ಜಿಲ್ಲಾಧಿಕಾರಿಗಳು,ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಎದುರಾದರೆ ತಮ್ಮನ್ನು ಸಂಪರ್ಕಿಸಿ ಎಂದೂ ಅಧಿಕಾರಿಗಳಿಗೆ ಹೇಳಿದರು. ಕಾರ್ಮಿಕ ಇಲಾಖಾಧಿಕಾರಿಗಳು ಕಾರ್ಮಿಕರ ಪರಿಸ್ಥಿತಿ ಅವಲೋಕಿಸಲು ಸ್ಥಳ ಭೇಟಿ ನಡೆಸಬೇಕೆಂದ ಜಿಲ್ಲಾಧಿಕಾರಿಗಳು ವಿಟ್ಲ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಲೆಕ್ಕಿಗ, ರೆವೆನ್ಯೂ ಇನ್ಸಪೆಕ್ಟರ್ ಅವರ ಮಾಹಿತಿಯನ್ನು ಉಪವಿಭಾಗಾಧಿಕಾರಿ ಶ್ರೀ ಪ್ರಭುಲಿಂಗ ಕವಳಿಕಟ್ಟಿ ಅವರಿಂದ ತರಿಸಿಕೊಂಡು ಕ್ರಮಕೈಗೊಳ್ಳುವ ಬಗ್ಗೆ ಚರ್ಚಿಸಿದರು. ಕಾರ್ಮಿಕ ಇಲಾಖೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English