ತೆರಿಗೆ ವಂಚನೆ, ಪಾಲಿಕೆಗೆ 3 ಪಟ್ಟು ಹೆಚ್ಚು ಬಾಡಿಗೆ!

5:08 PM, Tuesday, February 18th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

City-Corporationಮಂಗಳೂರು: ದೈತ್ಯ ಕೈಗಾರಿಕೆ ಸಂಸ್ಥೆಗಳಿಂದಲೇ ನೀರಿನ ಕಳವು, ಸುರತ್ಕಲ್‌ನಲ್ಲಿ ಪಾಲಿಕೆ ಕಚೇರಿಯ ಲೆಕ್ಕಕ್ಕಿಂತ ಹೆಚ್ಚಿಗೆ ಬಾಡಿಗೆ ಜಾಲ, ಖಾಸಗಿ ಮಾಲ್‌ಗಳ ತೆರಿಗೆ ವಂಚನೆ ಪುರಾಣ, ಅನಧಿಕೃತ ಪಾರ್ಕಿಂಗ್ ಶುಲ್ಕ… ಒಂದೇ ರಡೇ ಮಹಾನಗರ ಪಾಲಿಕೆಯ ಬಜೆಟ್ ಪೂರ್ವ ಸಿದ್ಧತೆ ಸಭೆಯಲ್ಲಿ ಸಾರ್ವಜನಿಕರು, ಕಾರ್ಪೊರೇಟರ್‌ಗಳು ಒಂದೊಂದೇ ವಂಚನೆಯನ್ನು ಬಟಾ ಬಯಲು ಮಾಡಿದರು. ಪ್ರತಿ ವಿಚಾರಗಳು ಬಂದಾಗ ಸರಿಯಾಗಿ ಮಾಹಿತಿ ಇಲ್ಲದೆ ಪಾಲಿಕೆ ಎಂಜಿನಿಯರ್‌ಗಳು, ಅಧಿಕಾರಿಗಳು ತಡಬಡಾಯಿಸಿದರು.

ನೀರಿನ ಬಿಲ್ಲಿನ ಅಕ್ರಮ ತಡೆಗಟ್ಟುವ ಸಲುವಾಗಿ ಕೈಗಾರಿಕೆಗಳಿಗೆ ಡಿಜಿಟಲ್ ಮಾದರಿಯ ಮೀಟರ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಹೇಳಿದರು.

ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಗಳು ಮಂಗಳೂರು ಮಹಾನಗರ ಪಾಲಿಕೆಯ ನಿಯಮ ಉಲ್ಲಂಘಿಸುವುದರಿಂದ ವ್ಯವಹಾರದಲ್ಲಿ ಸೋರಿಕೆ ಉಂಟಾಗುತ್ತಿದ್ದು, ಇದರಿಂದ ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ. ಆದ್ದರಿಂದ ಡಿಜಿಟಲ್ ನೀರಿನ ಮೀಟರ್ ಅಳವಡಿಸುವಂತೆ ಮಂಗಳೂರು ಪಾಲಿಕೆ ಸದಸ್ಯರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಡಿಜಿಟಲ್ ಮೀಟರ್ ಅಳವಡಿಕೆಗೆ ನಾಲ್ಕು ಬಾರಿ ಟೆಂಡರ್ ಕರೆದಿದ್ದರೂ ಫಲಪ್ರದವಾಗಿಲ್ಲ. ಅಕ್ರಮ ಸಂಪರ್ಕ ಕಡಿತಗೊಳಿಸಲು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದರು. ಪಾಲಿಕೆ ವ್ಯಾಪ್ತಿಯಲ್ಲಿ 567 ಕೈಗಾರಿಕೆಗಳಿದ್ದು, ಇವುಗಳಿಂದ ನೀರಿನ ಬಿಲ್ ಪಾವತಿಯಾಗುತ್ತಿರುವುದು ಕೇವಲ 1.60 ಕೋಟಿ ಮಾತ್ರ. ಕೈಗಾರಿಕೆಗಳು ನಡೆಸುತ್ತಿರುವ ಮೋಸದಿಂದ ಪಾಲಿಕೆಗೆ ಆದಾಯ ಕಡಿಮೆಯಾಗುತ್ತಿದೆ.

ಹೊಟೇಲ್, ವಾಣಿಜ್ಯ ಕಟ್ಟಡಗಳಲ್ಲಿ ಎರಡೆರಡು ನೀರಿನ ಸಂಪರ್ಕ ಹೊಂದಿದೆ. ಒಂದು ನೀರಿನ ಸಂಪರ್ಕಕ್ಕೆ ಮಾತ್ರ ಬಿಲ್ ಪಾವತಿಸಿ, ಪಾಲಿಕೆಗೆ ಮೋಸ ಮಾಡುತ್ತಿದೆ ಎಂದು ಪಾಲಿಕೆ ಸದಸ್ಯ ದೀಪಕ್ ಪೂಜಾರಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಗಮನ ಸೆಳೆದರು.

ನೀರಿನ ಬಿಲ್ ಸಂಗ್ರಹಣೆಯನ್ನು ಖಾಸಗಿ ಗುತ್ತಿಗೆ ನೀಡಿದ ನಂತರ ಅವ್ಯವಹಾರ ಹೆಚ್ಚಾಗಿದ್ದು, ಸಂಸ್ಥೆಗಳ ಬಾಕಿ ಬಿಲ್ ಜನಸಾಮಾನ್ಯರ ಮೇಲೆ ಹೊರಿಸಲಾಗುತ್ತಿದೆ. ನೀರಿನ ಬಿಲ್‌ನಲ್ಲಿ ನಡೆಯುತ್ತಿರುವ ಸೋರಿಕೆಯನ್ನು ತಪ್ಪಿಸಿದರೆ ಮನಾಪ ಆದಾಯ ಹೆಚ್ಚಿಸಬಹುದು ಎಂದರು ಅಶೋಕ್ ಕುಮಾರ್ ಡಿ.ಕೆ. ಹೇಳಿದರು. ಪಾಲಿಕೆ ವ್ಯಾಪ್ತಿಯಲ್ಲಿ ನೀರು ವಿತರಣೆಯಾಗುತ್ತಿರುವ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಎಂಜಿನಿಯರ್ ರಾಜಶೇಖರ್, ಪಾಲಿಕೆ ವ್ಯಾಪ್ತಿಯಲ್ಲಿ 140 ಲಕ್ಷ ಲೀಟರ್ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ 55 ಲಕ್ಷ ಲೀಟರ್‌ಗೆ ನೀರಿನ ಬಿಲ್ ಆಗುತ್ತಿದೆ. ಶೇ. 40 ಸೋರಿಕೆಯಾಗುತ್ತಿದೆ ಎಂದರು.

ಪಾಲಿಕೆ ಬಜೆಟ್‌ನಲ್ಲಿ ನಿಯೋಜಿಸಿದ್ದ ಯೋಜನೆಗಳು ಇನ್ನೂ ಪೂರ್ತಿಯಾಗಿಲ್ಲ. ಅದರಲ್ಲಿ ಮೀಸಲಿಟ್ಟ ಅನುದಾನ ಎಲ್ಲಿ ಹೋಯಿತು, ಕೇವಲ ಮುದ್ರಣಕ್ಕಾಗಿ ಮಾತ್ರ ಬಜೆಟ್ ರಚಿಸಲಾಗುತ್ತಿದೆಯಾ ಎಂದು ಪಾಲಿಕೆ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡರು.

ಖಾಸಗಿ ಮಾಲ್ ಪಾರ್ಕಿಂಗ್ ಶುಲ್ಕ ವಿರುದ್ಧ ಕ್ರಮ ಕೈಗೊಳ್ಳಿ: ಪಾಲಿಕೆ ಸದಸ್ಯ ತಿಲಕ್‌ರಾಜ್ ಮಾತನಾಡಿ, ಖಾಸಗಿ ಮಾಲ್‌ಗಳಲ್ಲಿ ಪಾರ್ಕಿಂಗ್ ನಿರ್ಮಿಸುವುದು ಕಟ್ಟಡ ಮಾಲಿಕರ ಕರ್ತವ್ಯ. ಆದರೆ ಇದಕ್ಕಾಗಿ ಮಾಲ್‌ನಲ್ಲಿ ಶುಲ್ಕ ವಿಧಿಸಲಾಗುತ್ತಿದೆ. ಈ ಕುರಿತು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಮಾಲ್‌ಗಳಲ್ಲಿ ಹಣ ವಸೂಲಿ ಮಾಡುವುದಾದರೆ ಅದನ್ನು ಕೂಡ ವಾಣಿಜ್ಯವಾಗಿ ಪರಿಗಣಿಸಿ ಎಂದು ಪಾಲಿಕೆ ಸದಸ್ಯರಾದ ಅಶೋಕ್ ಡಿ.ಕೆ., ರವೂಫ್, ಮಹಾಬಲ ಮಾರ್ಲ ಧ್ವನಿ ಸೇರಿಸಿದರು. ಪಾಲಿಕೆ ಸದಸ್ಯೆ ಅಪ್ಪಿ ಮಾತನಾಡಿ, ಕಳೆದ ಆರ್ಥಿಕ ಆವಯವದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟ ನಿಧಿಯಲ್ಲಿ ಉಳಿಕೆಯಾದ ರು. 2.5 ಕೋಟಿ ಏನಾಗಿದೆ ಎಂದು ಪ್ರಶ್ನಿಸಿದರು.

ಜಂಟಿ ಆಯುಕ್ತ ಗೋಕುಲ್‌ದಾಸ್ ನಾಯಕ್ ಮಾತನಾಡಿ, ಪೂರ್ಣ ಪ್ರಮಾಣದ ಬಜೆಟ್ ಸಿದ್ಧಪಡಿಸುವ ಆರಂಭಿಕ ಶುಲ್ಕ ನಮೂದಿಸಲಾಗುತ್ತದೆ. ಅದರಲ್ಲಿ ಉಳಿಕೆ ಸೇರಿದಂತೆ ಪ್ರತಿ ಲೆಕ್ಕಾಚಾರದ ಮಾಹಿತಿ ಹಾಕಲಾಗುತ್ತದೆ. ಮುಂದಿನ ಆರ್ಥಿಕ ವರ್ಷಕ್ಕೆ ಅದನ್ನು ವರ್ಗಾಯಿಸಲಾಗುವುದು ಎಂದರು.

ಅಂಬೇಡ್ಕರ್ ವೃತ್ತವನ್ನು ಜ್ಯೋತಿ ವೃತ್ತ ಎಂದು ಪಾಲಿಕೆ ಕಡತಗಳಲ್ಲಿ ಇರುವುದನ್ನು ಅಪ್ಪಿ ಗಮನಕ್ಕೆ ತಂದರು, ಈ ತಪ್ಪಿಗೆ ಅಧಿಕಾರಿಗಳು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಚರಂಡಿ ಸಮಸ್ಯೆ: ವೆಟ್‌ವೆಲ್‌ಗಳಲ್ಲಿ ಒಳಚರಂಡಿಯಲ್ಲಿ ಹರಿಯುತ್ತಿರುವ ಕಶ್ಮಲಗಳು ರಸ್ತೆ ಮೇಲೆ ಹರಿಯುತ್ತಿದೆ. ವಿದ್ಯುತ್ ಕೈಕೊಡುವಾಗ ಯಂತ್ರ ವಿಫಲವಾಗಿ ಈ ಸಮಸ್ಯೆ ಆಗುತ್ತಿದೆ. ಜನರೇಟರ್ ಆಳವಡಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು. ಆದರೆ ಎಷ್ಟು ಕಡೆ ಜನರೇಟರ್ ವ್ಯವಸ್ಥೆ ಇದೆ ಎಂದು ಎಂಜಿನಿಯರ್‌ಗಳನ್ನು ಜಿಲ್ಲಾಧಿಕಾರಿ ಪ್ರಶ್ನಿಸಿದರೆ ಅದಕ್ಕೆ ಉತ್ತರ ಮಾತ್ರ ಸಿಗಲೇ ಇಲ್ಲ.

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟ ಹಣದಲ್ಲಿ ಕೆಲವೊಂದು ತೊಡುಕುಗಳಿಂದಾಗಿ ಖರ್ಚಾಗುತ್ತಿಲ್ಲ, ಪಾಲಿಕೆಯ ಆದಾಯ ರು. 141.16 ಕೋಟಿ ಆಗಿದೆ. ಇದರಲ್ಲಿ ಪಾಲಿಕೆ ಅಭಿವೃದ್ಧಿ ಕಾಮಗಾರಿಗಳಿಗೆ ರು. 13.85 ಕೋಟಿ ಮೀಸಲಿರಿಸಲಾಗುವುದು. ಪಾಲಿಕೆ ವಾರ್ಷಿಕ ನಿರ್ವಹಣೆಗೆ ರು. 18.41 ಕೋಟಿ ಮೀಸಲಿರಿಸಲಾಗಿದೆ.

ಆರೋಗ್ಯಾಧಿಕಾರಿ ಡಾ. ಮಂಜಯ್ಯ ಶೆಟ್ಟಿ, ಮುಖ್ಯ ಲೆಕ್ಕಾಧಿಕಾರಿ ಜಗದೀಶ್, ಯೋಜನಾ ನಿರ್ದೇಶಕ ತಾಕತ್ ರಾವ್ ಇದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English