ನವದೆಹಲಿ: ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಹಂತಕರ ಗಲ್ಲುಶಿಕ್ಷೆಯನ್ನು ಜೀವಾವಧಿಗಿಳಿಸಿ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ಆದೇಶ ನೀಡಿದೆ. ರಾಜೀವ್ ಹತ್ಯೆಗೈದ ಮೂವರು ಅಪರಾಧಿಗಳ ಕ್ಷಮಾದಾನ ಅರ್ಜಿಇತ್ಯರ್ಥಗೊಳಿಸಲು ಕೇಂದ್ರ ಸರ್ಕಾರ 11 ವರ್ಷ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಕೋರ್ಟ್ ಈ ಆದೇಶ ನೀಡಿದೆ. ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಇದೇ ಕಾರಣ ಹೇಳಿ ನರಹಂತಕ ವೀರಪ್ಪನ್ ಸಹಚರರ ಗಲ್ಲುಶಿಕ್ಷೆಯನ್ನೂ ಜೀವಾವಧಿಗಿಳಿಸಿ ಆದೇಶ ಹೊರಡಿಸಿತ್ತು.
ವಿಳಂಬವೇ ಕಾರಣ: ಅಪರಾಧಿಗಳಾದ ಸಂತನ್, ಮುರುಗನ್ ಹಾಗೂ ಪೆರಾರಿವೇಲನ್ ಅವರ ಕ್ಷಮಾದಾನ ಅರ್ಜಿಯ ಇತ್ಯರ್ಥಕ್ಕೆ ಅಕಾರಣ ವಿಳಂಬ ಮಾಡಿಲ್ಲ. ಅಲ್ಲದೇ ಅವರು ಜೈಲಿನಲ್ಲಿದ್ದುಕೊಂಡು ಪಶ್ಚಾತ್ತಾಪ ಪಡುತ್ತಿಲ್ಲ. ಆರಾಮದ ಜೀವನ ನಡೆಸುತ್ತಿದ್ದಾರೆ ಎಂದು ಸರ್ಕಾರ ವಾದಿಸಿತ್ತು. ಆದರೆ ಸರ್ಕಾರದ ವಾದವನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ನೇತೃತ್ವದ ನ್ಯಾಯಪೀಠ, ನಿಮ್ಮ ವಾದವನ್ನು ಒಪ್ಪಲಾಗದು ಎಂದಿತು.
ಹಾಗಾಗಿ ಅಪರಾಧಿಗಳ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲಾಗುವುದು ಎಂದಿತು.
ಸರ್ಕಾರಕ್ಕೆ ಸಲಹೆ: ಇದೇ ವೇಳೆ, ವಿನಾಕಾರಣ ಕ್ಷಮಾದಾನ ಅರ್ಜಿ ಇತ್ಯರ್ಥದಲ್ಲಿ ವಿಳಂಬ ಮಾಡದಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಸಲಹೆ ನೀಡಿ ಎಂದೂ ಕೋರ್ಟ್ ಸರ್ಕಾರಕ್ಕೆ ಸೂಚಿಸಿತು. ಜತೆಗೆ, ಕ್ಷಮಾದಾನ ಪ್ರಕರಣಗಳನ್ನು ಸರ್ಕಾರವು ಆದಷ್ಟು ವ್ಯವಸ್ಥಿತವಾಗಿ ನಿಭಾಯಿಸಬೇಕು ಎಂಬ ಸಲಹೆಯನ್ನೂ ನೀಡಿತು.
1991ರ ಮೇ ತಿಂಗಳಲ್ಲಿ ರಾಜೀವ್ ಹತ್ಯೆ ನಡೆದಿತ್ತು. 1998ರ ಜನವರಿಯಲ್ಲಿ ಟಾಡಾ ಕೋರ್ಟ್ ರಾಜೀವ್ ಹಂತಕರನ್ನು ದೋಷಿಗಳೆಂದು ತೀರ್ಪು ನೀಡಿ ಗಲ್ಲುಶಿಕ್ಷೆಯನ್ನು ವಿಧಿಸಿತ್ತು. 199ರ ಮೇ 11ರಂದು ಸುಪ್ರೀಂ ಕೋರ್ಟ್ ಕೂಡ ಟಾಡಾ ಕೋರ್ಟ್‌ನ ತೀರ್ಪನ್ನು ಎತ್ತಿಹಿಡಿದಿತ್ತು.
ವೀರಪ್ಪನ್ ಸಹಚರರಿಗೂ ಸಿಕ್ಕಿತ್ತು ವಿನಾಯ್ತಿ: ಮರಣದಂಡನೆಗೆ ಒಳಗಾಗಿರುವ ಅಪರಾಧಿಗಳ ಕ್ಷಮಾದಾನ ಅರ್ಜಿ ಇತ್ಯರ್ಥಗೊಳಿಸುವಲ್ಲಿ ಸರ್ಕಾರ ಮಾಡುವ ವಿಳಂಬವನ್ನೂ ಅವರ ಶಿಕ್ಷೆ ಕಡಿತಗೊಳಿಸುವ ಮಾನದಂಡವೆಂದು ಪರಿಗಣಿಸಬಹುದು ಎಂಬ ಐತಿಹಾಸಿಕ ತೀರ್ಪನ್ನು ಕಳೆದ ಜನವರಿ 21ರಂದು ಸುಪ್ರೀಂ ಕೋರ್ಟ್ ನೀಡಿತ್ತು. ಅಷ್ಟೇ ಅಲ್ಲದೆ, ವೀರಪ್ಪನ್‌ನ ನಾಲ್ವರು ಸಹಚರರು ಸೇರಿದಂತೆ 15 ಮಂದಿ ಅಪರಾಧಿಗಳ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಗಿಳಿಸಿ ತೀರ್ಪು ನೀಡಿತ್ತು.
ತಮಿಳುನಾಡಲ್ಲಿ ಸಂಭ್ರಮ: ದೇಶದಲ್ಲಿ ಗಲ್ಲುಶಿಕ್ಷೆಯನ್ನು ಸಂಪೂರ್ಣವಾಗಿ ರದ್ದು ಮಾಡಬೇಕು ಎಂದು ಒತ್ತಾಯಿಸುತ್ತಲೇ ಬಂದಿರುವ ಎಂಡಿಎಂಕೆ ನಾಯಕ ವೈಕೋ ಸುಪ್ರೀಂ ತೀರ್ಪನ್ನು ಸ್ವಾಗತಿಸಿದ್ದಾರೆ. ಜತೆಗೆ, ತಮಿಳುನಾಡಿನಲ್ಲಿ ಹಲವು ಸಂಘಟನೆಗಳು ಪಟಾಕಿ ಸಿಡಿಸಿ ಸಂಭ್ರಮಿಸಿದವು. ಇದೇ ವೇಳೆ ತೀರ್ಪಿನ ಸುದ್ದಿ ಹೊರಬೀಳುತ್ತಿದ್ದಂತೆಯೇ ಜೈಲಿನಲ್ಲಿದ್ದ ಅಪರಾಧಿಗಳೂ ಸಂಭ್ರಮದಿಂದ ಕುಣಿದಾಡಿದರು.
ಹೀಗೆಂದು ಹೇಳಿದ್ದು ರಾಜೀವ್ ಹಂತಕರಲ್ಲಿ ಒಬ್ಬನಾದ ಎ.ಜಿ. ಪೆರಾರಿವೇಲನ್‌ನ ತಾಯಿ ಅರ್ಪುತಂ ಅಮ್ಮಾಳ್. ಸುಪ್ರೀಂ ಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆಯೇ ಸಂತಸಗೊಂಡ ಅಮ್ಮಾಳ್, ಮಗನ ಗಲ್ಲುಶಿಕ್ಷೆಯನ್ನು ಜೀವಾವಧಿಗಿಳಿಸಿದ ಮು.ನ್ಯಾ. ಸದಾಶಿವಂ ಅವರಿಗೆ ಧನ್ಯವಾದ ಸಲ್ಲಿಸಿದರು. ಮಾಡದ ತಪ್ಪಿಗಾಗಿ ನನ್ನ ಮಗ ಜೈಲು ಸೇರಿದ್ದಾನೆ. ಇಂತಹ ಆದೇಶಕ್ಕಾಗಿ ನಾನು 23 ವರ್ಷಗಳಿಂದ ಕಾಯುತ್ತಿದ್ದೇನೆ. ಇನ್ನಾದರೂ ಅವನನ್ನು ಬಿಡುಗಡೆ ಮಾಡಿ ಎಂದು ಕೋರಿದ್ದಾರೆ ಅಮ್ಮಾಳ್.
ರಾಜೀವ್ ಹಂತಕರಿಗೆ ಬದುಕುವ ಹಕ್ಕು ಕಲ್ಪಿಸಿಕೊಟ್ಟದ್ದಕ್ಕೆ ಸಂತಸವಾಯಿತು. ಕೇಂದ್ರ, ರಾಜ್ಯ ಸರ್ಕಾರಗಳು ತಕ್ಷಣವೇ ಅವರನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು.
ಕ್ಷಮಾದಾನ ಅರ್ಜಿ ಇತ್ಯರ್ಥ ವಿಳಂಬವಾಗಲೀ, ಆಗದೇ ಇರಲಿ ಗಲ್ಲುಶಿಕ್ಷೆ ಏಕೆ ನೀಡಬೇಕು? ಸಂಸತ್ ದಾಳಿ ಅಪರಾಧಿ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ. ನಮ್ಮಲ್ಲಿ ಒಂದು ಮಾತೂ ಕೇಳದೆ ಅಫ್ಜಲ್‌ನ ಗಲ್ಲಿಗೇರಿಸಿದ್ದು ತಪ್ಪು.
Click this button or press Ctrl+G to toggle between Kannada and English