ಬೆಂಗಳೂರುಃ ಕೃಷ್ಣಾ ನದಿ ನೀರು ಹಂಚಿಕೆ ವಿಷಯದಲ್ಲಿ ಕೃಷ್ಣಾ ಜಲವಿವಾದ ನ್ಯಾಯಾಧಿಕರಣ ಮುಂದುವರಿದ ವರದಿಯಲ್ಲಿ ನೀಡಿರುವ ಕೆಲವು ಸ್ಪಷ್ಟೀಕರಣ ಹಾಗೂ ಮಾರ್ಪಾಡುಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಅನುಮತಿ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ನ್ಯಾಯಾಧಿಕರಣದ ತೀರ್ಪಿನ ನಂತರ ರಾಜ್ಯ ಸರ್ಕಾರ ಕಾನೂನು ಮತ್ತು ತಾಂತ್ರಿಕ ಪರಿಣಿತರೊಂದಿಗೆ ಚರ್ಚೆ ನಡೆಸಿದ ನಂತರ ವಿಶೇಷ ಅನುಮತಿಗೆ ಸುಪ್ರೀಂಕೋರ್ಟ್‌ಗೆ ಹೋಗುವುದು ಸೂಕ್ತ ಎಂಬ ಸಲಹೆ ಬಂದಿದೆ. ಹೀಗಾಗಿ ಅರ್ಜಿ ಸಲ್ಲಿಸಲಾಗುತ್ತಿದೆ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ತಿಳಿಸಿದರು.
ಕೃಷ್ಣಾ ಜಲವಿವಾದ ನ್ಯಾಯಾಧಿಕರಣ-2 ದಿ. 29.11.2013ರಂದು ಮೂರು ಸಂಪುಟಗಳಲ್ಲಿ ಮುಂದುವರಿದ ವರದಿ ನೀಡಿದೆ. ಈ ತೀರ್ಪಿನ ಮೊದಲು ಕರ್ನಾಟಕಕ್ಕೆ ಹಂಚಿಕೆ ಮಾಡಿದ್ದ ನೀರಿನ ಪ್ರಮಾಣದಲ್ಲಿ 4 ಟಿಎಂಸಿ ನೀರಿನ ಪ್ರಮಾಣವನ್ನು ಕಡಿಮೆಗೊಳಿಸಿದೆ. ಇದರಿಂದ ರಾಜ್ಯಕ್ಕೆ ನಿವ್ವಳ 907 ಟಿಎಂಸಿ ನೀರು ಹಂಚಿಕೆಯಾಗಿದೆ.
ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 524.256 ಮೀಟರ್‌ಗೆ ಎತ್ತರಿಸಿ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-2 ಹಂಚಿಕೆ ಮಾಡಿರುವ ನೀರಿನ ಪ್ರಮಾಣ ಉಪಯೋಗಿಸಿಕೊಳ್ಳುವ ರಾಜ್ಯದ ಹಕ್ಕು ಸ್ಥಾಪಿಸುವುದು ಆದ್ಯತೆ ಕ್ರಮವಾಗಿದೆ. ಈ ಸಂಬಂಧ ಉಭಯ ಸದನಗಳ ಮುಖಂಡರು, ಹಿಂದಿನ ಜಲಸಂಪನ್ಮೂಲ ಸಚಿವರೊಂದಿಗೆ ಸಭೆ ನಡೆಸಲಾಯಿತು. ಅವರ ಸಲಹೆಗಳ ಜತೆಗೆ ವರದಿ ಅಂಶಗಳ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಲು ಹಿರಿಯ ವಕೀಲ ಎಫ್.ಎಸ್. ನಾರಿಮನ್ ಅವರೊಂದಿಗೆ ಸಮಾಲೋಚಿಸಲಾಯಿತು. ಸುಪ್ರೀಂಕೋರ್ಟ್‌ಗೆ ಸ್ಪೆಷಲ್ ಲೀವ್ ಪಿಟಿಶನ್ ದಾಖಲಿಸಲು ಅವರು ಸಲಹೆ ನೀಡಿದ್ದಾರೆ.
ಕೃಷ್ಣಾ ಕಣಿವೆಯ ಕೆಲವು ಜಿಲ್ಲೆಗಳ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಜಲಸಂಪನ್ಮೂಲ ಸಚಿವರು ಸಭೆ ನಡೆಸಿದ್ದಾರೆ. ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ. ತೀರ್ಪು ಬಂದ 90 ದಿನಗಳ ಒಳಗೆ ಅರ್ಜಿ ಸಲ್ಲಿಸಬೇಕಾಗಿರುವುದರಿಂದ ಈ ವಿಷಯವನ್ನು ಸದನದ ಗಮನಕ್ಕೆ ತರುತ್ತಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Click this button or press Ctrl+G to toggle between Kannada and English