ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಖ್ಯಾತ ನಟ ಶಿವರಾಜ್ ಕುಮಾರ್ ಅವರ ಪತ್ನಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜ್ ಕುಮಾರ್ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
ಶಿವಮೊಗ್ಗ ಕ್ಷೇತ್ರ ಈ ಬಾರಿ ಜಿದ್ದಾ ಜಿದ್ದಿನ ಕಣವಾಗಿ ಮಾರ್ಪಡಲಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದು, ಅವರ ವಿರುದ್ಧ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದ್ದ ಜೆಡಿಎಸ್ ಅಂತಿಮವಾಗಿ ಗೀತಾ ಶಿವರಾಜ್ ಕುಮಾರ್ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಕ್ಷೇತ್ರದಲ್ಲಿ ಬಂಗಾರಪ್ಪ ಕುಟುಂಬದ ಸದಸ್ಯರ ಪೈಕಿ ಯಾರಾದರು ಒಬ್ಬರನ್ನು ಕಣಕ್ಕಿಳಿಸಲು ಆರಂಭದಿಂದಲೂ ಜೆಡಿಎಸ್ ಒಲವು ತೋರಿತ್ತು. ಬಂಗಾರಪ್ಪ ಅವರ ಪತ್ನಿ ಶಕುಂತಲಮ್ಮ ಅವರೇ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿಯೂ ಹರಡಿತ್ತು. ಆದರೆ ಈಗ ಅಂತಿಮವಾಗಿ ಬಂಗಾರಪ್ಪ ಕುಟುಂಬ ಸದಸ್ಯರ ಒಟ್ಟಾರೆ ಅಭಿಪ್ರಾಯದಂತೆ ಗೀತಾ ಶಿವರಾಜ್ ಕುಮಾರ್ ಹೆಸರನ್ನು ಅಖೈರುಗೊಳಿಸಲಾಗಿದೆ. ಇದಕ್ಕೆ ಶಿವರಾಜ್ ಕುಮಾರ್ ಸಹ ಹಸಿರು ನಿಶಾನೆ ತೋರಿದ್ದಾರೆ ಎನ್ನಲಾಗಿದೆ.
ಬಂಗಾರಪ್ಪ ಅವರ ಎರಡನೇ ಪುತ್ರ ಮಧು ಬಂಗಾರಪ್ಪ ಅವರು ಈಗಾಗಲೇ ಜೆಡಿಎಸ್ ಸೇರಿ ಸೊರಬ ಕ್ಷೇತ್ರದಿಂದ ಶಾಸಕರಾಗಿದ್ದಾರೆ.
ಇನ್ನು ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ಗಾಗಿ ಬಂಗಾರಪ್ಪ ಅವರ ಹಿರಿಯ ಪುತ್ರ ಕುಮಾರ್ ಬಂಗಾರಪ್ಪ ತೀವ್ರ ಯತ್ನ ನಡೆಸಿದ್ದಾರೆ. ಆದರೆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ರಾಜ್ಯ ಕಾಂಗ್ರೆಸ್ ಮುಖಂಡರು ವಿಧಾನಸಭೆಯ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಕಾಗೋಡು ತಿಮ್ಮಪ್ಪ ಒಲವು ತೋರುತ್ತಿಲ್ಲ ಎನ್ನಲಾಗಿದೆ. ಒಂದು ವೇಳೆ ಕಾಗೋಡು ತಿಮ್ಮಪ್ಪ ಅವರು ಸ್ಪರ್ಧಿಸಲು ಒಪ್ಪಿಗೆ ನೀಡದೇ ಇದ್ದರೆ ಪಕ್ಷದ ಮುಖಂಡ ಮಂಜುನಾಥ್ ಭಂಡಾರಿ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರದಲ್ಲಿ ಜೆಡಿಎಸ್, ನಾಲ್ಕು ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಒಂದು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ.
Click this button or press Ctrl+G to toggle between Kannada and English