ರಾಜೀವ್ ಹಂತಕರ ಬಿಡುಗಡೆ ಸದ್ಯಕ್ಕಿಲ್ಲ

2:04 PM, Friday, February 21st, 2014
Share
1 Star2 Stars3 Stars4 Stars5 Stars
(5 rating, 6 votes)
Loading...

P.-Sathasivamನವದೆಹಲಿ/ಚೆನ್ನೈ: ಸದ್ಯಕ್ಕೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹಂತಕರಿಗೆ ಬಿಡುಗಡೆ ಭಾಗ್ಯ ಇಲ್ಲ…
ತಮಿಳುನಾಡು ಸರ್ಕಾರದ ನಿರ್ಧಾರ ಮತ್ತು ರಾಜೀವ್ ಹಂತಕರ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಕೆ ಮಾಡಿದ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ಕುರಿತಂತೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತಮಿಳುನಾಡು ಸರ್ಕಾರದ ನಿರ್ಧಾರಕ್ಕೆ ತಡೆ ನೀಡಿದೆ.

‘ಕೈದಿಗಳ ಬಿಡುಗಡೆ ಸಂಬಂಧ ತಮಿಳುನಾಡು ಸರ್ಕಾರ ಸೂಕ್ತ ವಿಧಿ ವಿಧಾನಗಳನ್ನು ಅನುಸರಿಸಿಲ್ಲ. ಹೀಗಾಗಿ ಕೋರ್ಟ್ ಜಯಲಲಿತಾ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಅವರ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.

ಅಲ್ಲದೆ ಮುಂದಿನ ವಿಚಾರಣೆಯನ್ನು ಮಾರ್ಚ್ 6ಕ್ಕೆ ನಿಗದಿಗೊಳಿಸಿದೆ.

ಜೊತೆಗೆ ಮೂವರು ಹಂತಕರ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸಿದ್ದ ತನ್ನ ತೀರ್ಪಿನ ಬಗ್ಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆಯೂ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಅಲ್ಲದೆ ಉಳಿದ ನಾಲ್ವರು ಅಪರಾಧಿಗಳ ಕುರಿತಂತೆ ನಿರ್ಧಾರ ಕೈಗೊಳ್ಳಲು ಹೊಸದಾಗಿ ಅರ್ಜಿ ಸಲ್ಲಿಸುವಂತೆಯೂ ಕೇಂದ್ರಕ್ಕೆ ಅದು ಆದೇಶಿಸಿದೆ. ಇದರ ಜೊತೆಗೆ ತಮಿಳುನಾಡು ಸರ್ಕಾರ ಮತ್ತು ಅಪರಾಧಿಗಳಿಗೂ ಇನ್ನೆರಡು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಆದೇಶಿಸಿದೆ.

ಸಂತನ್, ಮುರುಗನ್ ಮತ್ತು ಪೆರಾರಿವೇಲನ್ ಅವರ ಗಲ್ಲುಶಿಕ್ಷೆಯನ್ನು ಫೆ. 18 ರಂದು ಸುಪ್ರೀಂಕೋರ್ಟ್ ಜೀವಾವಧಿಗೆ ಇಳಿಸಿತ್ತು. ಇದಾದ ಮಾರನೇ ದಿನವೇ ತಮಿಳುನಾಡು ಸರ್ಕಾರ ರಾಜೀವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಏಳೂ ಅಪರಾಧಿಗಳನ್ನು ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡು ವಿಧಾನಸಭೆಯಲ್ಲಿ ಪ್ರಕಟಿಸಿತ್ತು.

ಈ ಸಂಬಂಧ ತೀವ್ರ ಟೀಕೆ ಮಾಡಿದ ಕೇಂದ್ರ ಸರ್ಕಾರ ಗುರುವಾರ ಬೆಳಗ್ಗೆಯೇ ಸುಪ್ರೀಂಕೋರ್ಟ್‌ಗೆ ಅರ್ಜಿ ದಾಖಲಿಸಿತ್ತು. ಅಲ್ಲದೆ ಸ್ವತಃ ರಾಹುಲ್ ಗಾಂಧಿ ಕೂಡ ಜಯಲಲಿತಾ ಅವರ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ್ದರು. ಪ್ರಧಾನಿ ಹತ್ಯೆ ಮಾಡಿದವರನ್ನೇ ಬಿಟ್ಟರೆ, ಸಾಮಾನ್ಯ ಜನರ ಪಾಡೇನು ಎಂದು ಪ್ರಶ್ನಿಸಿದ್ದರು.

ಲೋಕಸಭೆಯಲ್ಲಿ ಗದ್ದಲ: ರಾಜೀವ್ ಹಂತಕರ ಬಿಡುಗಡೆ ಸಂಬಂಧ ತಮಿಳುನಾಡು ಸರ್ಕಾರದ ನಿರ್ಧಾರ ಲೋಕಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು. ಕಾಂಗ್ರೆಸ್ ಸಂಸದ ಸಂಜಯ್ ನಿರುಪಮ್ ಅವರ ನೇತೃತ್ವದಲ್ಲಿ ಸಂಸದರು ಎಐಎಡಿಎಂಕೆ ವಿರುದ್ಧ ಮುಗಿಬಿದ್ದರು. ಜಯಲಲಿತಾ ಅವರು ರಾಜೀವ್ ಹಂತಕರ ಬಿಡುಗಡೆ ಸಂಬಂಧ ರಾಜಕೀಯ ಮಾಡುತ್ತಿದ್ದಾರೆ. ಅವರನ್ನು ಏಕೆ ಬಿಡಬೇಕು ಎಂದು ಪ್ರಶ್ನಿಸಿದರು.

ನನ್ನ ಪೋಷಕರನ್ನು ಬಿಟ್ಟುಬಿಡಿ, ಪ್ಲೀಸ್…: ಮುರುಗನ್ ಮತ್ತು ನಳಿನಿ ಅವರ ಪುತ್ರಿ ಹರಿತ್ರಾ ಶ್ರೀಹರನ್ ಅವರು ತಮ್ಮ ಪೋಷಕರನ್ನು ಕ್ಷಮಿಸಿ ಎಂದು ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿದ್ದಾರೆ. ಲಂಡನ್‌ನಲ್ಲಿರುವ ಹರಿತ್ರಾ, ಖಾಸಗಿ ಚಾನೆಲ್‌ಗಳ ಜೊತೆ ಮಾತನಾಡಿ, ನಿಮ್ಮ ನೋವು ನನಗರ್ಥವಾಗಿದೆ. ನೀವು ತಂದೆಯನ್ನು ಕಳೆದುಕೊಂಡಿದ್ದೀರಿ, ಆದರೆ ನನ್ನ ಪೋಷಕರೂ ಎರಡು ದಶಕಗಳಿಂದ ಜೈಲಿನಲ್ಲಿಯೇ ಇದ್ದಾರೆ. ಅವರಿಗೆ ತಪ್ಪಿನ ಅರಿವಾಗಿದೆ. ದಯಮಾಡಿ ಅವರ ತಪ್ಪನ್ನು ಮನ್ನಿಸಿ, ನನಗೂ ಪೋಷಕರ ಜೊತೆ ಬಾಳ್ವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೆ ರಾಜೀವ್ ಹಂತಕರ ಬಿಡುಗಡೆ ಸಂಬಂಧ ಜಯಲಲಿತಾ ತೆಗೆದುಕೊಂಡ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಸುಪ್ರೀಂಕೋರ್ಟ್‌ಗೂ ವಂದನೆ ಹೇಳಿದ್ದಾರೆ.

ಹಂತಕರಿಗೆ ನಿರಾಸೆ: ಕಳೆದ ಎರಡು ದಿನಗಳಿಂದ ಖುಷಿಯ ಮೇಲೆಯೇ ಸವಾರಿ ಮಾಡುತ್ತಿದ್ದ ರಾಜೀವ್ ಹಂತಕರಿಗೆ ಗುರುವಾರ ನಿರಾಸೆಯ ದಿನ. ಇದಕ್ಕೆ ಕಾರಣ ಸುಪ್ರೀಂಕೋರ್ಟ್‌ನ ತಡೆಯಾಜ್ಞೆ. ಜಯಲಲಿತಾ ಅವರ ಹಂತಕರ ಬಿಡುಗಡೆ ನಿರ್ಧಾರಕ್ಕೆ ಕೋರ್ಟ್ ತಡೆಯಾಜ್ಞೆ ನೀಡುತ್ತಿದ್ದಂತೆ ವೆಲ್ಲೂರು ಜೈಲಿನಲ್ಲಿರುವ ನಳಿನಿ, ಮುರುಗನ್, ಶಂತನ್ ಮತ್ತು ಪೆರಾರಿವೇಲನ್ ಅವರು ತೀವ್ರ ನಿರಾಸೆಗೊಂಡರು. ಆದರೂ ಸುಪ್ರೀಂಕೋರ್ಟ್‌ನಿಂದ ಒಳ್ಳೆಯ ನಿರ್ಧಾರವೇ ಹೊರಬರುತ್ತದೆ ಎಂದು ಕಾಯುತ್ತಿದ್ದೇವೆ ಎಂದು ಅಪರಾಧಿಗಳ ಸಂಬಂಧಿಗಳು ಹೇಳಿದ್ದಾರೆ.

ಹಂತಕರನ್ನು ಬಿಟ್ಟರೆ ಮುಂದಿನ ಚುನಾವಣೆಯಲ್ಲಿ ಯಾವ ಲಾಭವಾಗುತ್ತದೆ ಎಂಬ ಬಗ್ಗೆ ಜಯಲಲಿತಾ ಯೋಚಿಸುತ್ತಿದ್ದಾರೆ. ಆದರೆ ಈ ನಿರ್ಧಾರದಿಂದ ಜಯಾ ಪ್ರಧಾನಿಯಾಗಲು ಲಾಯಕ್ಕಲ್ಲ ಎಂಬುದು ಗೊತ್ತಾಗುತ್ತದೆ. ಇದು ತೀವ್ರ ಗಂಭೀರವಾದ ವಿಚಾರ. ಕೇವಲ ರಾಜೀವ್ ಗಾಂಧಿ ಅವರ ಹತ್ಯೆಗೆ ಸಂಬಂಧಿಸಿದ ವಿಷಯವಲ್ಲ, ಅವರು ಈ ದೇಶದ ಪ್ರಧಾನಿಯಾಗಿದ್ದವರು. ಇಂಥವರನ್ನು ಹತ್ಯೆ ಮಾಡಿದವರ ಬಗ್ಗೆ ಈ ರೀತಿಯ ನಿರ್ಣಯ ಸಲ್ಲದು.

ಕಳೆದ 20 ವರ್ಷಗಳಿಂದ ದೇಶದ ವಿವಿಧ ಜೈಲುಗಳಲ್ಲಿ ಸಾವಿರಾರು ಕೈದಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಇವರೆಲ್ಲರ ಕಥೆ ಏನಾಗಬೇಕು? ಕೇವಲ ರಾಜೀವ್ ಹಂತಕರಿಗೆ ಮಾತ್ರ ಕ್ಷಮೆ ಏಕೆ?

ಯಾವುದೇ ದೇಶ ಭಯೋತ್ಪಾದಕರ ವಿರುದ್ಧ ಮೃದು ಧೋರಣೆ ತಾಳುವುದು ಸರಿಯಲ್ಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ತಮಿಳುನಾಡು ಸರ್ಕಾರದ ನಿರ್ಧಾರ ಟೀಕಿಸಿದ ಅವರು ಕಾನೂನಾತ್ಮಕವಾಗಿ ಜಯಾ ಸರ್ಕಾರಕ್ಕೆ ಇಂಥ ಅವಕಾಶವೇ ಇಲ್ಲ ಎಂದು ಹೇಳಿದ್ದಾರೆ.

ಈ ಪ್ರಕರಣವನ್ನು ಜಯಲಲಿತಾ ಸರ್ಕಾರ ಸರಿಯಾದ ರೀತಿಯಲ್ಲಿ ನಿರ್ವಹಿಸಲಿಲ್ಲ. ಹೀಗಾಗಿಯೇ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಚುನಾವಣೆ ದೃಷ್ಟಿಯಿಂದ ಈ ನಿರ್ಧಾರವನ್ನು ಅವಸರವಾಗಿ ತೆಗೆದುಕೊಳ್ಳಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English