ಪರೀಕ್ಷೆಗೆ ಸೀಮಿತವಾಗದಿರಲಿ ಸಿದ್ಧತೆ

2:36 PM, Friday, February 21st, 2014
Share
1 Star2 Stars3 Stars4 Stars5 Stars
(5 rating, 6 votes)
Loading...

S.Rangappaಮೈಸೂರು: ವಿದ್ಯಾರ್ಥಿಗಳು ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಷ್ಟೇ ಸೀಮಿತವಾಗದೆ ಎಲ್ಲ ವಿಷಯಗಳಲ್ಲೂ ವಿಶೇಷ ಕೌಶಲ್ಯ ಬೆಳೆಸಿಕೊಂಡು ಪರಿಣತಿ ಸಾಧಿಸುವಂತೆ ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಕರೆ ನೀಡಿದರು.

ಮೈಸೂರು ವಿವಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ವಿಶೇಷ ಘಟಕ, ವಿದ್ಯಾರ್ಥಿ ಕ್ಷೇಮಾಪಾಲನ ಕೇಂದ್ರ ಹಾಗೂ ಸಾಮರ್ಥ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೇವಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಗುರುವಾರ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಏರ್ಪಡಿಸಿದ್ದ ಬೌದ್ಧಿಕ ಕೌಶಲ್ಯಾಭಿವೃದ್ಧಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಷ್ಟೇ ತಮ್ಮ ಜ್ಞಾನದ ಪರಿಮಿತಿಯನ್ನು ರಚಿಸಿಕೊಂಡಿದ್ದಾರೆ. ಆದರೆ, ಜೀವನದಲ್ಲಿ ಯಶಸ್ಸು ಸಾಧಿಸಲು ಇಷ್ಟೇ ಸಾಲದು. ಇದಕ್ಕಿಂತಲು ವಿಭಿನ್ನವಾಗಿ ಚಿಂತಿಸಿ ವಿಜ್ಞಾನ, ಅರ್ಥಶಾಸ್ತ್ರ, ವೈದ್ಯಕೀಯ ಕ್ಷೇತ್ರದತ್ತ ಗಮನ ಹರಿಸಬೇಕು. ಶೈಕ್ಷಣಿಕ ಮನೋಭಾವ ಬೆಳೆಸಿಕೊಂಡು ಒಳ್ಳೆಯ ಅಧಿಕಾರಿಯಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಯೋಚಿಸಬೇಕು ಎಂದರು.

ಮೈಸೂರು ವಿವಿ ಶತಕದ ಹೊಸ್ತಿಲಿನಲ್ಲಿದೆ. ವಿದ್ಯಾರ್ಥಿಗಳಿಗೆ ನೀಡುತ್ತಿರುವ ಜ್ಞಾನವನ್ನು ವಿಸ್ತರಿಸುವುದರ ಜೊತಗೆ ಆಕ್ಸ್ಫರ್ಡ್, ಕೇಂಬ್ರಿಡ್ಜ್ ವಿವಿಗಳ ಮಟ್ಟಕ್ಕೆ ಬೆಳೆಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ನಾನು ಕುಲಪತಿಯಾದ ನಂತರ ಯಾರ್ಯಾರೋ ಯಾವ್ಯಾವುದೋ ವಿಚಾರ ಹಿಡಿದುಕೊಂಡು ಪ್ರತಿಭಟಿಸಿದರು. ನನ್ನ ವಿರುದ್ಧ ಘೋಷಣೆ ಕೂಗಿದರು. ಹಿಯ್ಯಾಳಿಸಿದರು. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇನೆ. ಅದರ ಒಂದು ಭಾಗವೇ ಈ ಕಾರ್ಯಾಗಾರ. ಇಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳನ್ನು ನೋಡಿ ಸಂತೋಷವಾಗುತ್ತಿದೆ ಎಂದರು.

ಕಾರ್ಯಾಗಾರ ಉದ್ಘಾಟಿಸಿದ ನಿವೃತ್ತ ಡಿಜಿಪಿ ಕೆ.ವಿ. ರವೀಂದ್ರನಾಥ ಠಾಗೂರ್, ನಾವು ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದನ್ನು ಈಗಲೇ ನಿರ್ಧರಿಸಿಕೊಳ್ಳಬೇಕು. ದೊಡ್ಡ ಗುರಿ ಇಟ್ಟುಕೊಂಡಾಗ ಅಂದುಕೊಂಡದ್ದನ್ನು ಸಾಧಿಸಬಹುದು. ಪ್ರಶ್ನೆ ಕೇಳುವ ಮನೋಭಾವನೆ ಬೆಳೆಸಿಕೊಂಡು ಜ್ಞಾನ ಹೆಚ್ಚಿಸಿಕೊಳ್ಳಬೇಕು. ಜೀವನದಲ್ಲಿ ಸದಾ ನಗುವಿದ್ದರೆ ಉನ್ನತ ಮಟ್ಟಕ್ಕೆ ಬೆಳೆಯಬಹುದು. ನಗುವಿನೊಂದಿಗೆ ಬಾಳಿನಲ್ಲಿ ಸಂತೃಪ್ತಿ ಕಂಡುಕೊಳ್ಳಬೇಕಾದದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎಂದರು.

ಮೈಸೂರು ವಿವಿ ಕುಲಸಚಿವ ಪ್ರೊ.ಸಿ. ಬಸವರಾಜು ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿಶೇಷ ಘಟಕದ ಉಪಕುಲಸಚಿವ ಡಾ.ಕೆ.ಬಿ. ಉಮೇಶ್, ವಿದ್ಯಾರ್ಥಿ ಕ್ಷೇಮಪಾಲನಾ ಕೇಂದ್ರದ ನಿರ್ದೇಶಕ ಪ್ರೊ.ಎಂ. ರುದ್ರಯ್ಯ ಇದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English