ಮೈಸೂರು: ಸರ್ಕಾರ ಈಗಾಗಲೇ ರಾಜ್ಯಾದ್ಯಂತ ಹಲವು ಸುತ್ತಿನ ಉದ್ಯೋಗ ಮೇಳವನ್ನು ಆಯೋಜಿಸಿ ಯಶಸ್ವಿಯಾಗಿದ್ದು, ಇದೀಗ ಮೈಸೂರಿನಲ್ಲಿ ಎರಡು ದಿನಗಳ ಬೃಹತ್ ಉದ್ಯೋಗ ಮೇಳ ಏರ್ಪಡಿಸಿದೆ. ಭಾನುವಾರ ಆರಂಭವಾದ ಮೇಳದಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡು ಮೊದಲನೇ ದಿನ ಯಶಸ್ವಿಗೊಳಿಸಿದರು.
ಮಹಾರಾಜ ಕಾಲೇಜು ಮೈದಾನದಲ್ಲಿ ಭವ್ಯ ವೇದಿಕೆ ನಿರ್ಮಿಸಿ 206 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್, ಬ್ಯಾಂಕಿಂಗ್, ಫೈನಾನ್ಸಿಯಲ್, ಹೆಲ್ತ್‌ಕೇರ್, ಹಾಸ್ಟಿಟಾಲಿಟಿ, ಮ್ಯಾನ್ಯೂಫ್ಯಾಕ್ಚುರಿಂಗ್, ಸೇಲ್ಸ್, ಮಾರ್ಕೆಟಿಂಗ್, ಟೆಲಿಕಾಂ, ತರಬೇತಿ, ಗಾರ್ಮೆಂಟ್ಸ್, ವಿಮಾ ಕ್ಷೇತ್ರ, ಭದ್ರತೆ ವಲಯ ಸೇರಿದಂತೆ ಒಟ್ಟು 128ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು. ಇವುಗಳಲ್ಲಿ ಒಟ್ಟಾರೆ 37376 ಹುದ್ದೆಗಳಿಗೆ ಈ ಎರಡು ದಿನಗಳಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಎಸ್ಸೆಸ್ಸೆಲ್ಸಿ ತನಕ ಓದಿರುವವರಿಗೆ- 1312, ಎಸ್ಸೆಸ್ಸೆಲ್ಸಿ- 2889, ಪಿಯುಸಿ- 4215, ಪದವೀಧರರ- 1124, ಸ್ನಾತಕೋತ್ತರ- 2694, ಬಿಇ, ಬಿ.ಟೆಕ್- 3361, ಜೆಒಸಿ, ಜೆಎಲ್‌ಸಿ- 727, ಐಟಿಐ- 3751, ಡಿಪ್ಲೊಮಾ- 6820, ನರ್ಸಿಂಗ್- 383 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ವೇದಿಕೆ ಮುಂಭಾಗದಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ನೋಂದಣಿಗೆ ವ್ಯವಸ್ಥೆ ಮಾಡಲಾಗಿತ್ತು. ಸ್ವಯಂ ಸೇವಕರನ್ನು ನಿಯೋಜಿಸಿ ಅಗತ್ಯ ಮಾಹಿತಿ ನೀಡಲಾಗುತ್ತಿತ್ತು. ಕಾರ್ಯಕ್ರಮ ಉದ್ಘಾಟನೆಯಾದ ಬಳಿಕ ಸುಮಾರು ಎರಡು ಗಂಟೆಯೊಳಗೆ 17,600 ಮಂದಿ ಹೆಸರು ನೋಂದಾಯಿಸಿಕೊಂಡಿದ್ದರು. ಅವರಲ್ಲಿ 14600 ಪುರುಷರು ಹಾಗೂ 3000 ಮಹಿಳೆಯರು ಸೇರಿದ್ದರು. 18ರಿಂದ 40 ವರ್ಷದೊಳಗಿನ ವಯೋವಾನದವರೆ ಹೆಚ್ಚಾಗಿ ಪಾಲ್ಗೊಂಡಿದ್ದರು. ಅದರಲ್ಲೂ ಉದ್ಯೋಗದಲ್ಲಿದ್ದು ಮತ್ತೊಂದು ಉದ್ಯೋಗ ಬಯಸುವವರು ಇದ್ದರು ಎಂದು ಉದ್ಯಮಿಯೊಬ್ಬರು ಪತ್ರಿಕೆಗೆ ತಿಳಿಸಿದರು.
ಕೃಷ್ಣರಾಜ ಕ್ಷೇತ್ರದ ಶಾಸಕ ಎಂ.ಕೆ. ಸೋಮಶೇಖರ್ ಅವರು ಜಿಲ್ಲಾಡಳಿತದೊಂದಿಗೆ ಮೇಳದ ಯಶಸ್ಸಿಗ ಶ್ರಮಿಸುತ್ತಿದ್ದಾರೆ. ಮಹಾರಾಜ ಕಾಲೇಜು ಮೈದಾನದಲ್ಲಿ ಏರ್ಪಡಿಸಿರುವ ಉದ್ಯೋಗ ಮೇಳದ ಮೊದಲನೇ ದಿನದಂತ್ಯಕ್ಕೆ ಒಟ್ಟು 14 ಕಂಪನಿಗಳು 359 ಮಂದಿಯನ್ನು ಹುದ್ದೆಗೆ ಆಯ್ಕೆ ಮಾಡಿಕೊಂಡಿದ್ದು, ಸ್ಥಳದಲ್ಲಿಯೇ 290 ಮಂದಿಗೆ ಪ್ರಮಾಣ ಪತ್ರ ವಿತರಿಸಿದವು. ಉಳಿದವರಿಗೆ ನಾಳೆ ನೀಡಲಾಗುವುದು ಎಂದು ಉದ್ಯೋಗ ಮೇಳದ ಆಯೋಜಕರು ತಿಳಿಸಿದ್ದಾರೆ.
Click this button or press Ctrl+G to toggle between Kannada and English