ನವದೆಹಲಿ: ಕಾಂಗ್ರೆಸ್-ಬಿಜೆಪಿಯೇತರ, ಜೆಡಿಎಸ್ ಸೇರಿದಂತೆ ಪ್ರಮುಖ ಹನ್ನೊಂದು ಪಕ್ಷಗಳನ್ನೊಳಗೊಂಡ ತೃತೀಯ ರಂಗ ಮಂಗಳವಾರ ಅಸ್ವಿತ್ವಕ್ಕೆ ಬಂದಿದೆ.
ಭ್ರಷ್ಟ ಕಾಂಗ್ರೆಸ್ ಹಾಗೂ ಕೋಮುವಾದಿ ಬಿಜೆಪಿಯನ್ನು ಕೇಂದ್ರದಿಂದ ದೂರ ಇಡಲು ತೃತೀಯ ರಂಗ ರಚಿಸಿರುವುದಾಗಿ ಘೋಷಿಸಿರುವ ನಾಯಕರು, ಒಗ್ಗೂಡಿ ಚುನಾವಣೆ ಎದುರಿಸಲಿದ್ದಾರೆ. ಆದರೆ, ಚುನಾವಣೆಗೂ ಮುನ್ನ ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡದಿರಲು ಮಂಗಳವಾರ ತ್ರಿಪುರ ಭವನದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಬಹುತೇಕ ಪಕ್ಷಗಳು ಬೇರೆ ಬೇರೆ ರಾಜ್ಯಗಳನ್ನು ಪ್ರತಿನಿಧಿಸುವುದರಿಂದ ಆಯಾ ಪ್ರದೇಶದಲ್ಲಿ ಸೀಟು ಹಂಚಿಕೆ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ, ಅಗತ್ಯವಿದ್ದ ಕಡೆಗಳಲ್ಲಿ ತೃತೀಯ ರಂಗದ ಪಕ್ಷಗಳ ಅಭ್ಯರ್ಥಿಗಳು ಗೆಲ್ಲಲು ಅನುಕೂಲವಾಗುವಂಥ ಕಾರ್ಯತಂತ್ರ ರೂಪಿಸಲು ನಿರ್ಧರಿಸಲಾಗಿದೆ.
ಜೆಡಿಎಸ್‌ನ ವರಿಷ್ಠ ಎಚ್.ಡಿ. ದೇವೇಗೌಡ, ಜೆಡಿಯುನ ನಿತಿಶ್ ಕುಮಾರ್, ಶರದ್ ಯಾದವ್, ಎಸ್ಪಿಯ ಮುಲಾಯಂ ಸಿಂಗ್ ಯಾದವ್, ಎಡರಂಗದ ಪ್ರಮುಖರಾದ ಪ್ರಕಾಶ್ ಕಾರಟ್, ಸೀತಾರಾಂ ಯೆಚೂರಿ ಸೇರಿದಂತೆ ಒಂಭತ್ತು ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು. ಅಸ್ಸಾಂ ಗಣ ಪರಿಷತ್ ಹಾಗೂ ಬಿಜೆಡಿ ನಾಯಕರು ಸಭೆಯಲ್ಲಿ ಭಾಗಿಯಾಗಿರಲಿಲ್ಲ. ಆದರೆ, ಸಭೆ ಕೈಗೊಳ್ಳುವ ನಿರ್ಧಾರಗಳಿಗೆ ತಮ್ಮ ಸಹಮತ ಇದೆ ಎಂದು ತಿಳಿಸಿದ್ದಾರೆ. ಈಗಾಗಲೇ ಎರಡು ಬಾರಿ ಅನೌಪಚಾರಿಕ ಸಭೆ ಸೇರಿ ಚರ್ಚಿಸಿದ್ದ ತೃತೀಯ ರಂಗದ ನಾಯಕರು ಮಂಗಳವಾರ ಅಧಿಕೃತವಾಗಿ ತಮ್ಮ ಅಸ್ತಿತ್ವವನ್ನು ಘೋಷಿಸಿಕೊಂಡರು.
ಇತ್ತೀಚಿನ ಮಾಧ್ಯಮಗಳ ಸಮೀಕ್ಷೆಗಳು ಕಾಂಗ್ರೆಸ್-ಬಿಜೆಪಿಗಿಂತ ಇತರೇ ಪಕ್ಷಗಳು ಹೆಚ್ಚು ಸ್ಥಾನ ಪಡೆಯುವ ಸಾಧ್ಯತೆ ಬಗ್ಗೆ ಭವಿಷ್ಯ ನುಡಿದಿರುವ ಹಿನ್ನೆಲೆಯಲ್ಲಿ ತೃತೀಯ ರಂಗಕ್ಕೆ ಮತ್ತೆ ಮಹತ್ವ ಬಂದಿದೆ. ತೃತೀಯ ರಂಗಕ್ಕೆ ಇನ್ನಷ್ಟು ಪಕ್ಷಗಳು ಸೇರ್ಪಡೆಗೊಳ್ಳುವ ನಿರೀಕ್ಷೆ ಇದ್ದು ಚುನಾವಣೆ ವೇಳೆಗೆ ತೃತೀಯ ರಂಗದ ಅಂಗಪಕ್ಷಗಳ ಸಂಖ್ಯೆ ಹದಿನೈದಕ್ಕೇರುವ ನಿರೀಕ್ಷೆಯನ್ನು ಮುಲಾಯಂ ಸಿಂಗ್ ಯಾದವ್ ಇಟ್ಟುಕೊಂಡಿದ್ದಾರೆ.
ಒಗ್ಗಟ್ಟಿನ ಹೋರಾಟ: ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಮಾಧ್ಯಮಗಳಿಗೆ ವಿವರಿಸಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ದುರಾಡಳಿತ, ಭ್ರಷ್ಟಾಚಾರ ನಡೆಸಿದೆ. ಬೆಲೆ ಏರಿಕೆಯಿಂದಾಗಿ ರೈತರು ಜನಸಾಮಾನ್ಯರು ಕಂಗೆಟ್ಟಿದ್ದಾರೆ. ಆಡಳಿತ ಕುಸಿದು ಹೋಗಿದೆ. ಹೀಗಾಗಿ ಕಾಂಗ್ರೆಸ್‌ನ್ನು ಸೋಲಿಸುವುದು ನಮ್ಮ ಗುರಿ. ಬಿಜೆಪಿ ಭ್ರಷ್ಟಾಚಾರದಲ್ಲಿ ಕಾಂಗ್ರೆಸ್‌ಗಿಂತ ಭಿನ್ನವಾಗಿಲ್ಲ. ಬಿಜೆಪಿ ಮತ್ತು ಆ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನಮ್ಮ ಜಾತ್ಯತೀತ ಸಮಾಜಕ್ಕೆ ದೊಡ್ಡ ಸವಾಲಾಗಿದ್ದಾರೆ. ಬಿಜೆಪಿಯು ಮತೀಯ ಶಕ್ತಿಗಳೊಂದಿಗೆ ಸೇರಿ ಈ ದೇಶವನ್ನು ನರೇಂದ್ರ ಮೋದಿ ಅವರಿಗೆ ಒಪ್ಪಿಸುವುದಕ್ಕೆ ನಾವು ಅವಕಾಶ ನೀಡುವುದಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಉಭಯ ಪಕ್ಷಗಳು ಕೇಂದ್ರದಲ್ಲಿ ಅಧಿಕಾರ ಹಿಡಿಯಲಾರವು. ಈ ಹಿನ್ನೆಲೆಯಲ್ಲಿ ನಾವು ಈ ರಾಷ್ಟ್ರಕ್ಕೆ ಪರ್ಯಾಯ ರಾಜಕೀಯ ಶಕ್ತಿ ನೀಡಲು ನಿರ್ಧರಿಸಿದ್ದೇವೆ ಎಂದರು.
3ನೇ ರಂಗದ ನೀತಿಗಳು: ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸುವುದು, ಆಡಳಿತದಲ್ಲಿ ಉತ್ತರದಾಯಿತ್ವ ಮತ್ತು ಭ್ರಷ್ಟಾಚಾರ ರಹಿತ ಸರ್ಕಾರ ರೂಪಿಸುವುದು, ಜನಾಧಾರಿತ ಅಭಿವೃದ್ಧಿ, ಸಾಮಾಜಿಕ ನ್ಯಾಯ, ರೈತರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಕಾಯುವುದು ನಮ್ಮ ಗುರಿ. ಗಣರಾಜ್ಯ ಸ್ವರೂಪವನ್ನು ಮತ್ತಷ್ಟು ಬಲಪಡಿಸಿ ಅಗತ್ಯವಿದ್ದ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡುವುದಾಗಿಯೂ ತೃತೀಯ ರಂಗದ ನಾಯಕರು ಘೋಷಿಸಿದ್ದಾರೆ.
ಸಿಂಧ್ಯಾ ಸೇರಿದಂತೆ ಹಲವರು ಬಿಜೆಪಿಗೆ
ಶಿವಮೊಗ್ಗ: ಜೆಡಿಎಸ್‌ನ ಪಿಜಿಆರ್ ಸಿಂಧ್ಯಾ, ರಾಜುಗೌಡ, ಕಾಂಗ್ರೆಸ್‌ನ ತೇಜಸ್ವಿನಿ ಗೌಡ, ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಬಾಬಾಗೌಡ ಪಾಟೀಲ್, ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಸೇರಿದಂತೆ ಇನ್ನೂ ಹಲವು ನಾಯಕರು ಶೀಘ್ರವೇ ಬಿಜೆಪಿ ಸೇರಲಿದ್ದಾರೆ. ಈ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
Click this button or press Ctrl+G to toggle between Kannada and English