ಬೆಳ್ತಂಗಡಿ: ಶಿವ ಧ್ಯಾನದಿಂದ ಮಂಗಳ ಕಾರ್ಯಗಳು ನಡೆದು ದೋಷಗಳು ನಿವಾರಣೆಯಾಗುತ್ತವೆ. ಸಾಧಕನಿಗೆ ಶಿವ ಒಲಿಯುತ್ತಾನೆ ಎಂದು ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಗುರುವಾರ ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಶಿವಪಂಚಾಕ್ಷರಿ ಪಠಣದೊಂದಿಗೆ ಶಿವರಾತ್ರಿ ಜಾಗರಣದ ಕಾರ್ಯಕ್ಕೆ ಚಾಲನೆ ನೀಡಿ ಅವರು ಸಂದೇಶ ನೀಡಿದರು.
ಹಿಂದಿನ ಕಾಲದಲ್ಲಿ ದೇವರ ದರ್ಶನಕ್ಕೆ ಬರುವುದು ಕಷ್ಟಕರವಾಗಿತ್ತು. ಪಾದಯಾತ್ರೆ ಮೂಲಕವೋ, ರೈಲುಗಳ ಮೂಲಕವೋ ಬರಬೇಕಾಗಿತ್ತು. ಅದಕ್ಕೆ ಬೇಕಾದ ಖರ್ಚುವೆಚ್ಚಗಳನ್ನು ವರ್ಷಗಳಿಂದ ಕೂಡಿಡಬೇಕಾಗಿತ್ತು. ಹೀಗೆ ಕಷ್ಟಪಟ್ಟು ಬಂದ ನಂತರ ಮಾಡಿದ ದೇವರ ದರ್ಶನದಿಂದ ಅಪಾರ ಆನಂದ, ಉತ್ಸಾಹ ಸಿಗುತ್ತಿತ್ತು. ಇಂದು ಟಿ.ವಿ. ಮುಂದೆ ಕೂತು ದೇವರ ಉತ್ಸವಾದಿಗಳನ್ನು ನೋಡಿದರೆ ಅಂತಹ ಆನಂದ ಸಿಗಲು ಸಾಧ್ಯವಿಲ್ಲ. ತ್ಯಾಗ, ಸಾಧನೆಯಿಂದ ದೊರಕಿದ ದೇವರ ದರ್ಶನ ವಿಶೇಷ ಎಂದು ಹೇಳಿದರು.
ದೇಹದೊಳಗೆ ಶಿವ ಎಲ್ಲಿದ್ದಾನೆ ಎಂದು ಗೊತ್ತಾಗಬೇಕಾದರೆ ಪಾದಯಾತ್ರೆ ಮಾಡಬೇಕು. ಕಳೆದ 35 ವರ್ಷಗಳಿಂದ ಪಾದಯಾತ್ರೆಯ ಮೂಲಕ ದೂರದೂರಿನಿಂದ ಬರುತ್ತಿರುವ ಭಕ್ತರಿಗೆ ಈ ಬಗ್ಗೆ ಅನುಭವವಿದೆ. ಪಾದಗಳ ಮೇಲೆ ಪಾದಗಳನ್ನಿಡುತ್ತಾ, ಕರವ ಜೋಡಿಸುತ್ತಾ. ಬಾಯಲ್ಲಿ ಸ್ತೋತ್ರಗಳನ್ನು ಪಠಿಸುತ್ತಾ, ಭಯ ಭಕ್ತಿ ಗೌರವದಿಂದ ನಡೆದುಕೊಂಡರೆ ಶಿವ ಸುಖವನ್ನು ಉಂಟುಮಾಡುತ್ತಾನೆ. ಆಸೆಗಳನ್ನು ನಿಗ್ರಹಿಸಿಕೊಳ್ಳಲು, ಹತೋಟಿಯಲ್ಲಿಡಲು ಶಿವರಾತ್ರಿಯ ವ್ರತ ಆಚರಿಸಲಾಗುತ್ತದೆ ಎಂದರು.
ಬಳಿಕ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಶಿವಪಂಚಾಕ್ಷರಿ ಮಂತ್ರೋಚ್ಚಾರಣೆಗೆ ಚಾಲನೆ ನೀಡಿದರು.
ಹೇಮಾವತಿ ವಿ. ಹೆಗ್ಗಡೆ, ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಪಾದಯಾತ್ರೆಯ ರೂವಾರಿ ಹನುಮಂತಪ್ಪ ಇದ್ದರು.
ಶ್ರೀನಿವಾಸ ನಿರ್ವಹಿಸಿದರು. ಮನೋರಮಾ ತೋಳ್ಪಡಿತ್ತಾಯ ಅವರು ಓಂ ನಮಃ ಶಿವಾಯ ಮಂತ್ರೋಚ್ಚಾರ ಜಪಿಸುತ್ತಿದ್ದಂತೆ ಸೇರಿದ್ದ ಭಕ್ತ ಸಂದೋಹ ಪುನರುಚ್ಚರಿಸಿತು.
ಲಕ್ಷಾಂತರ ಭಕ್ತರು: ಶಿವರಾತ್ರಿ ಹಿನ್ನಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಬಂದು ಬೆಳಗಿನಿಂದಲೇ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.
ಕಳೆದ ಒಂದೆರಡು ದಿನಗಳಿಂದ ಭಕ್ತರ ದಂಡೇ ಕ್ಷೇತ್ರದತ್ತ ಹರಿದು ಬರುತ್ತಿದೆ. ಧರ್ಮಸ್ಥಳವು ಭಕ್ತಾದಿಗಳು ಸೇವೆಯ ರೂಪದಲ್ಲಿ ನೀಡಿದ ದೇವಸ್ಥಾನ, ಬೀಡು, ರಥಬೀದಿಯನ್ನು ಹೂವಿನಿಂದ ಅಲಂಕಾರಗೊಳಿಸಿದ್ದಾರೆ.
Click this button or press Ctrl+G to toggle between Kannada and English