ಚುನಾವಣೆ ಹೊಸ್ತಿಲಲ್ಲಿ ಭರವಸೆಗಳ ಸುಗ್ಗಿ, ಸರ್ಕಾರಿ ನೌಕರ, ಪಿಂಚಣಿದಾರರೇ ಟಾರ್ಗೆಟ್, ಇದು ಕೊಡುಗೈ ಸಂಪುಟ

11:32 AM, Saturday, March 1st, 2014
Share
1 Star2 Stars3 Stars4 Stars5 Stars
(5 rating, 6 votes)
Loading...

K.H.-Muniyappaನವದೆಹಲಿ: ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಯುಪಿಎ ಸರ್ಕಾರ ತನ್ನ ಕೊನೆಯ ಸಚಿವ ಸಂಪುಟ ಸಭೆಯಲ್ಲಿ ಮತದಾರರ ಓಲೈಕೆಗೆ ಕೆಲ ನಿರ್ಧಾರಗಳನ್ನು ತೆಗೆದುಕೊಂಡಿದೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ.10ರಷ್ಟು ಹೆಚ್ಚಳ, ಕರ್ನಾಟಕ ಸೇರಿದಂತೆ ದೇಶಾದ್ಯಂತ ಹೊಸದಾಗಿ 54 ಕೇಂದ್ರೀಯ ವಿದ್ಯಾಲಯ ಹಾಗೂ 3,500 ಮಾದರಿ ಶಾಲೆ, ಕೋಲಾರದಲ್ಲಿ ರೈಲು ಬೋಗಿ ಕಾರ್ಖಾನೆ ಸ್ಥಾಪನೆ ಸೇರಿದಂತೆ ಅನೇಕ ಮಹತ್ವದ ನಿರ್ಧಾರಗಳಿಗೆ ಒಪ್ಪಿಗೆ ಸೂಚಿಸಿದೆ.

ಕೇಂದ್ರ ಸರ್ಕಾರಿ ನೌಕರರ ಓಲೈಕೆ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟ ನೌಕರರ ತುಟ್ಟಿ ಭತ್ಯೆಯನ್ನು ಶೇ.10ರಷ್ಟು ಹೆಚ್ಚಿಸಿದೆ. ಈ ಮೂಲಕ ಸರ್ಕಾರಿ ನೌಕರರ ತುಟ್ಟಿ ಭತ್ಯೆಯು ಶೇ.90ರಿಂದ ಶೇ.100ಕ್ಕೇರಿದಂತಾಗಿದೆ. ಇದರಿಂದ ದೇಶದ ಸುಮಾರು 80 ಲಕ್ಷ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸರ್ಕಾರ ತುಟ್ಟಿಭತ್ಯೆಯನ್ನು ಶೇ.10ರಷ್ಟು ಹೆಚ್ಚಿಸಿತ್ತು. ಇದರ ಬೆನ್ನಲ್ಲೇ ಈಗ ಜನವರಿಯಿಂದಲೇ ಅನ್ವಯವಾಗುವಂತೆ ಮತ್ತೊಮ್ಮೆ ತುಟ್ಟಿಭತ್ಯೆ ಹೆಚ್ಚಿಸಿದೆ.

ಪಿಂಚಣಿ ಸಾವಿರಕ್ಕೇರಿಕೆ, ಪ್ರತಿ ತಿಂಗಳು ಕನಿಷ್ಠ್ಠ 1 ಸಾವಿರ ಪಿಂಚಣಿ ಪಡೆಯುವ ನೌಕರರ ಕನಸು ಇನ್ನು

ಮುಂದೆ ನನಸಾಗಲಿದೆ. ಪ್ರತಿ ತಿಂಗಳ ಪಿಂಚಣಿಯನ್ನು ಕನಿಷ್ಠ 1 ಸಾವಿರಕ್ಕೆ ಹೆಚ್ಚಿಸುವಂತೆ ನೌಕರರ ಭವಿಷ್ಯನಿಧಿ ಸಂಸ್ಥೆಯ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು ಫೆ.5ರಂದು ಮಾಡಿದ್ದ ಶಿಫಾರಸಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಸರ್ಕಾರದ ಈ ನಿರ್ಧಾರದಿಂದ 28 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಹೊಸ ಯೋಜನೆ ಏ.1ರಿಂದಲೇ ಜಾರಿಗೆ ಬರುವಂತೆ ಅನುಷ್ಠಾನಕ್ಕೆ ಬರಲಿದೆ.

ದೇಶದಲ್ಲಿ ಹೊಸದಾಗಿ 54 ಕೇಂದ್ರೀಯ ವಿದ್ಯಾಲಯಗಳು ಹಾಗೂ 3500 ಮಾದರಿ ಶಾಲೆಗಳನ್ನು ಆರಂಭಿಸುವ ಪ್ರಸ್ತಾಪಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಅದರಂತೆ 12ನೇ ಹಣಕಾಸು ಯೋಜನೆಯಡಿ ದೇಶದ 17 ರಾಜ್ಯಗಳ 53 ಜಿಲ್ಲೆಗಳಲ್ಲಿ 54 ವಿದ್ಯಾಲಯಗಳು ಆರಂಭವಾಗಲಿವೆ. ಇದಕ್ಕಾಗಿ ಸರ್ಕಾರ 927.40 ಕೋಟಿ ವೆಚ್ಚ ಮಾಡಲಿದೆ.

ಇನ್ನು 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶೈಕ್ಷಣಿಕವಾಗಿ ಹಿಂದುಳಿದಿರುವ ಬ್ಲಾಕ್‌ಗಳಲ್ಲಿ ಮಾದರಿ ಶಾಲೆಗಳನ್ನು ತೆರೆಯಲಾಗುವುದು. ಈ ಶಾಲೆಗಳನ್ನು ಶೇ.75ಃ25 ವೆಚ್ಚ ಹಂಚಿಕೆ ಮಾದರಿಯಲ್ಲಿ ನಿರ್ಮಿಸಲಾಗುತ್ತದೆ.

ಕೋಲಾರದಲ್ಲಿ ರೈಲು ಬೋಗಿಗಳ ನಿರ್ಮಾಣ ಘಟಕ ಸ್ಥಾಪಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. 1461 ಕೋಟಿ ಅಂದಾಜು ವೆಚ್ಚದ ರೈಲು ಬೋಗಿ ನಿರ್ಮಾಣ ಘಟಕ ಸ್ಥಾಪನೆಗೆ ರೇಲ್ವೆ ಸಚಿವಾಲಯ ಶೇ.50 ರಷ್ಟು ವೆಚ್ಚ ಭರಿಸುತ್ತದೆ. ಉಳಿದ ಶೇ.50ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕು. ಜತೆಗೆ ರಾಜ್ಯ ಸರ್ಕಾರ ರೈಲು ಬೋಗಿ ಘಟಕ ಸ್ಥಾಪನೆಗೆ ಉಚಿತ ಭೂಮಿ ಒದಗಿಸಬೇಕು ಎಂಬ ಷರತ್ತಿನ ಮೇಲೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ವಾರ್ಷಿಕ 500 ಬೋಗಿಗಳ ನಿರ್ಮಾಣ ಸಾಮರ್ಥ್ಯದ ಈ ಘಟಕಕ್ಕೆ ರಾಜ್ಯ ಸರ್ಕಾರ 1118 ಎಕರೆ ಭೂಮಿ ಒದಗಿಸಬೇಕಿದೆ. ಉದ್ದೇಶಿತ ಘಟಕ ಸ್ಥಾಪನೆ ಆದ ನಂತರ ರೇಲ್ವೆ ಇಲಾಖೆ ಬೋಗಿಗಳ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗಲಿದೆ.

ಮುನಿಯಪ್ಪ ಕೃತಜ್ಞತೆ: ಕೋಲಾರದಲ್ಲಿ ರೈಲು ಬೋಗಿ ನಿರ್ಮಾಣ ಘಟಕ ಸ್ಥಾಪನೆಗೆ ಅನುಮೋದನೆ ನೀಡಿರುವುದಕ್ಕೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಎಚ್. ಮುನಿಯಪ್ಪ ಅವರು, ಪ್ರಧಾನಿ ಮನಮೋಹನ್ ಸಿಂಗ್, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English