ಲೋಕಸಭೆ ಚುನಾವಣೆ ದಿನಾಂಕ ಪ್ರಕಟ: ಏ.7ರಿಂದ ಮೇ, 12ರವರೆಗೆ ಮತದಾನ

1:47 PM, Wednesday, March 5th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

S.V.-Sampathನವದೆಹಲಿ: 2014ರ ಲೋಕಸಭೆ ಚುನಾವಣೆಯ ದಿನಾಂಕ ಪ್ರಕಟವಾಗಿದ್ದು,  ಏಪ್ರಿಲ್ 7ರಿಂದ 9 ಹಂತಗಳಲ್ಲಿ 16ನೇ ಲೋಕಸಭೆಗೆ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್ ಅವರು ಬುಧವಾರ ಹೇಳಿದ್ದಾರೆ.

ಈ ಸಂಬಂಧ ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಂಪತ್, ಮೇ 31ಕ್ಕೆ 15ನೇ ಲೋಕಸಭೆಯ ಅವಧಿ ಅಂತ್ಯಗೊಳ್ಳಲಿದ್ದು, ಮೇ 31ರೊಳಗೆ ಚುನಾವಣಾ ಪ್ರಕ್ರಿಯೆಗಳು ಮುಗಿಯಬೇಕು ಮತ್ತು ಜೂನ್ 1ಕ್ಕೆ ಕೇಂದ್ರದಲ್ಲಿ ಹೊಸ ಸರ್ಕಾರ ಅಸ್ಥಿತ್ವಕ್ಕೆ ಬರಬೇಕಿದೆ ಎಂದು ಹೇಳಿದರು.

ಏಪ್ರಿಲ್ 7ರಂದು ಮೊದಲ ಹಂತ, ಏ. 9ರಂದು ಎರಡನೇ ಹಂತ, ಏ. 10ಕ್ಕೆ ಮೂರನೆ ಹಂತ, ಏ. 12ರಂದು ನಾಲ್ಕನೆ ಹಂತ, ಏ. 17ರಂದು 5ನೇ ಹಂತ, ಏ.24ರಂದು 6ನೇ ಹಂತ, ಏ.30ರಂದು 7ನೇ ಹಂತ, ಮೇ,7ರಂದು 8ನೇ ಹಂತ ಹಾಗೂ ಮೇ 12ರಂದು 9ನೇ ಹಾಗೂ ಕಡೆಯ ಹಂತದ ಮತದಾನ ನಡೆಯಲಿದೆ. ಮೇ 16ಕ್ಕೆ ಲೋಕಸಸಮರದ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದರು. ಅಲ್ಲದೆ ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಸಂಪತ್ ತಿಳಿಸಿದರು.

ಲೋಕಸಭೆ ಚುನಾವಣೆಯೊಂದಿಗೆ ಆಂಧ್ರಪ್ರದೇಶ, ಸಿಕ್ಕಿಂ, ಒಡಿಶಾ ಹಾಗೂ ನೂತನ ರಾಜ್ಯ ತೆಲಂಗಾಣ ಸೇರಿದಂತೆ ನಾಲ್ಕು ರಾಜ್ಯಗಳ ವಿಧಾನಸಭೆಯ ಚುನಾವಣೆಯು ನಡೆಯಲಿದೆ ಎಂದು ಸಂಪತ್ ಹೇಳಿದರು.

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಏ.17ರಂದು ಒಂದೇ ಹಂತದ ಚುನಾವಣೆ ನಡೆಯಲಿದೆ.

ಈ ಬಾರಿ 10 ಕೋಟಿ ಮತದಾರರು ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದು, ಈ ಚುನಾವಣೆಯಲ್ಲಿ ಒಟ್ಟು 81.4 ಕೋಟಿ ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ ಎಂದರು. ಅಲ್ಲದೆ ಮಾರ್ಚ್ 9ರೊಳಗೆ ಹೊಸದಾಗಿ ಹೆಸರು ನೊಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಸಂಪತ್ ತಿಳಿಸಿದರು.

ದೇಶದ 543 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಮತದಾರರಿಗೆ ಮೊದಲ ಬಾರಿಗೆ ತಿರಸ್ಕಾರದ ಹಕ್ಕು ನೀಡಲಾಗಿದೆ ಎಂದರು.

ದೇಶಾದ್ಯಂತ ಚುನಾವಣಾ ಭದ್ರತೆಗಾಗಿ 11 ಲಕ್ಷ ಪೊಲೀಸರನ್ನು ಬಳಸಿಕೊಳ್ಳಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತರು ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English