ನವದೆಹಲಿ: ಅಕ್ರಮ ಗಣಿಗಾರಿಕೆಗೆ ಅನುಮತಿ ನೀಡಿರುವ ಆರೋಪ ಕುರಿತು ಲೋಕಾಯುಕ್ತ ತನಿಖೆ ನಡೆಸಲು ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪ್ರಕರಣಕ್ಕೆ ಸೀಮಿತವಾಗಿ ತಡೆಯಾಜ್ಞೆ ನೀಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಸ್ಪಷ್ಟಪಡಿಸಿದೆ.
ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಧರಂಸಿಂಗ್ ಅವರ ವಿರುದ್ಧ ಇರುವ ಆರೋಪ ಕುರಿತು ಲೋಕಾಯುಕ್ತ ಪೊಲೀಸರು ತಮ್ಮ ತನಿಖೆ ಮುಂದುವರಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಪ್ರಕರಣದಲ್ಲಿ ಹೆಸರಿಸಲಾಗಿರುವ ಐವರು ಐಎಎಸ್ ಅಧಿಕಾರಿಗಳ ವಿರುದ್ಧವೂ ತನಿಖೆ ಮುಂದುವರೆಸುವಂತೆ ಸುಪ್ರೀಂ ಕೋರ್ಟ್ ತಿಳಿಸಿದೆ.
ಟಿ.ಜೆ.ಅಬ್ರಹಾಂ 2011, ನ.29ರಂದು ಲೋಕಾಯುಕ್ತ ಕೋರ್ಟ್‌ನಲ್ಲಿ ಖಾಸಗಿ ದೂರು ಸಲ್ಲಿಸಿ, ಎಸ್.ಎಂ. ಕೃಷ್ಣ, ಧರಂಸಿಂಗ್ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಅಕ್ರಮ ಗಣಿಗಾರಿಕೆಗೆ ಅನುಮತಿ ನೀಡಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಕೋರಿದ್ದರು.
2011, ಡಿ.3ರಂದು ಲೋಕಾಯುಕ್ತ ಕೋರ್ಟ್, ಈ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿ, 2012, ಜ.6ರೊಳಗೆ ತನಿಖಾ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಲೋಕಾಯುಕ್ತ ಪೊಲೀಸರು ಮೂವರು ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ, ಅರಣ್ಯ ಕಾಯ್ದೆ 1980, ಕರ್ನಾಟಕ ಅರಣ್ಯ ಕಾಯ್ದೆ 1963, ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ 1957 ಹಾಗೂ ವಿವಿಧ ಐಪಿಸಿ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಿದ್ದರು.
ಅಂದು ವಿದೇಶಾಂಗ ಸಚಿವರಾಗಿದ್ದ ಎಸ್.ಎಂ. ಕೃಷ್ಣ ತಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುವುದಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿದ್ದರು. ಆದರೆ, ಕರ್ನಾಟಕ ಹೈಕೋರ್ಟ್ 2012, ಜ.21ರಂದು ತಡೆಯಾಜ್ಞೆ ನೀಡಲು ನಿರಾಕರಿಸಿದ್ದಲ್ಲದೇ, ತನಿಖೆ ಮುಂದುವರೆಸುವಂತೆ ಆದೇಶಿಸಿತ್ತು.
ಎಸ್.ಎಂ. ಕೃಷ್ಣ ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 2012, ಜ.27ರಂದು ಸುಪ್ರೀಂ ಕೋರ್ಟ್ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. ಸುಪ್ರೀಂ ಕೋರ್ಟ್ ಎಸ್.ಎಂ. ಕೃಷ್ಣ ಅವರಿಗೆ ತಡೆಯಾಜ್ಞೆ ನೀಡಿದ್ದರಿಂದಾಗಿ ಎಚ್.ಡಿ.ಕುಮಾರಸ್ವಾಮಿ ಮತ್ತು ಧರಂಸಿಂಗ್ ಅವರಿಗೂ ಲೋಕಾಯುಕ್ತ ಪೊಲೀಸರು ತನಿಖೆಯಿಂದ ರಕ್ಷಣೆ ಸಿಕ್ಕಂತಾಗಿತ್ತು.
ಸ್ಪಷ್ಟನೆ ಕೇಳಿದ್ದ ಅಬ್ರಹಾಂ: ದೂರು ಸಲ್ಲಿಸಿದ್ದ ಟಿ.ಜೆ. ಅಬ್ರಹಾಂ ಅವರು ಸುಪ್ರೀಂ ಕೋರ್ಟ್‌ಗೆ ಮತ್ತೊಂದು ಅರ್ಜಿ ಸಲ್ಲಿಸಿ ತಡೆಯಾಜ್ಞೆ ಎಸ್.ಎಂ. ಕೃಷ್ಣ ಅವರಿಗೆ ಮಾತ್ರ ಅನ್ವಯಿಸುತ್ತದೆಯೋ ಅಥವಾ ಪ್ರಕರಣದ ಎಲ್ಲಾ ಆರೋಪಿತರಿಗೂ ಅನ್ವಯವಾಗುತ್ತದೆಯೋ ಎಂದು ಸ್ಪಷ್ಟೀಕರಣ ಕೇಳಿದ್ದರು. ಮಂಗಳವಾರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಲೋಕಾಯುಕ್ತ ಪೊಲೀಸರು ತನಿಖೆ ನಡೆಸುವುದಕ್ಕೆ ತಾನು ನೀಡಿರುವ ತಡೆಯಾಜ್ಞೆ ಎಸ್.ಎಂ.ಕೃಷ್ಣ ಅವರ ಪ್ರಕರಣಕ್ಕೆ ಮಾತ್ರ ಸೀಮಿತವಾಗಿದೆ. ಪ್ರಕರಣದಲ್ಲಿ ಉಳಿದ ಆರೋಪಿತರ ವಿರುದ್ಧ ತನಿಖೆ ಮುಂದುವರೆಸಬಹುದು ಎಂದು ಸ್ಪಷ್ಟಪಡಿಸಿದೆ.
ಈ ನಡುವೆ ಇತ್ತೀಚೆಗಷ್ಟೆ ಎಚ್.ಡಿ. ಕಮಾರಸ್ವಾಮಿ ಅವರೂ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರ ಅರ್ಜಿ ಇನ್ನೂ ವಿಚಾರಣೆಗೆ ಬಂದಿಲ್ಲ. ಧರಂಸಿಂಗ್ ಅವರು ತಡೆಯಾಜ್ಞೆಗೆ ಅರ್ಜಿ ಸಲ್ಲಿಸಿಲ್ಲ. ಸುಪ್ರೀಂ ಕೋರ್ಟ್ ಮಂಗಳವಾರ ನೀಡಿರುವ ಸ್ಪಷ್ಟೀಕರಣದಿಂದಾಗಿ ಲೋಕಾಯುಕ್ತ ಪೊಲೀಸರು ಎಚ್.ಡಿ.ಕುಮಾರಸ್ವಾಮಿ, ಧರಂಸಿಂಗ್ ಹಾಗೂ ಐವರು ಅಧಿಕಾರಿಗಳ ವಿರುದ್ಧ ತನಿಖೆ ಮುಂದುವರೆಸಬಹುದಾಗಿದೆ.
Click this button or press Ctrl+G to toggle between Kannada and English