ಸಮಗ್ರ ಅಧ್ಯಯನ ನಡೆಸದೆ ‘ಎತ್ತಿನಹೊಳೆ’ ಅನುಷ್ಠಾನ ಸರಿಯಲ್ಲ: ಯಡಿಯೂರಪ್ಪ

4:27 PM, Wednesday, March 5th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Yeddyurappaಪುತ್ತೂರು: ಎತ್ತಿನಹೊಳೆ ಯೋಜನೆ ಸಾಧಕ- ಬಾಧಕಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸದೆ ಯೋಜನೆ ಅನುಷ್ಠಾನಗೊಳಿಸುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಅವರು ಮಂಗಳವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಎತ್ತಿನಹೊಳೆ ಯೋಜನೆಯನ್ನು ಸಮಗ್ರ ರಾಜ್ಯವನ್ನು ಕಣ್ಮುಂದೆ ಇಟ್ಟುಕೊಂಡು ರೂಪಿಸಬೇಕಾಗಿದೆ. ಅನುಷ್ಠಾನದ ಬಗ್ಗೆ ಕರಾವಳಿ ಹಾಗೂ ಬಯಲುಸೀಮೆ ಜಿಲ್ಲೆಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತ ಚಿಂತನೆ ನಡೆಸುವುದು ಅಗತ್ಯವಾಗಿದೆ ಎಂದ ಅವರು ಬೆಂಗಳೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಮತ್ತು ಕೋಲಾರದ ಜನತೆ ಇದೀಗ ನೀರಿನ ಸಮಸ್ಯೆಗಳಿಂದ ಬಳಲುತ್ತಿದ್ದು ಫ್ಲೋರೈಡ್‌ಯುಕ್ತ ನೀರನ್ನು ಕುಡಿಯುತ್ತಿದ್ದಾರೆ. ಆದ್ದರಿಂದ ಅವರಿಗೆ ಶುದ್ಧ ನೀರು ಒದಗಿಸುವುದು ಮುಖ್ಯವಾಗಿದೆ. ಆದರೆ ಯೋಜನೆಯ ಅನುಷ್ಠಾನದಿಂದ ಕರಾವಳಿ ಜಿಲ್ಲೆಗೂ ಅನ್ಯಾಯವಾಗಬಾರದು. ಈ ನಿಟ್ಟಿನಲ್ಲಿ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಗ್ರ ಚಿಂತನೆ ನಡೆಸಿ ಯೋಜನೆ ಕಾರ್ಯಗತಗೊಳಿಸಬೇಕು. ಅಲ್ಲಿನ ಜನತೆಗೆ ಕುಡಿಯುವ ನೀರಿಗಾಗಿ ಸಕಲೇಶಪುರ- ಹಾಸನ ಜಿಲ್ಲೆಗಳ ಮಳೆಯ ನೀರನ್ನು ಬಳಸುವ ಬಗ್ಗೆಯೂ ಚಿಂತನೆ ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಈ ಬಾರಿ ದೇಶಾದ್ಯಂತ ಮೋದಿ ಗಾಳಿ ಬೀಸುತ್ತಿದ್ದು. ಎಲ್ಲೆಡೆ ಕಾಂಗ್ರೆಸ್‌ಗೆ ಹಿನ್ನಡೆಯಾಗುತ್ತಿದೆ. ಜಯಪ್ರಕಾಶ್ ನಾರಾಯಣ್ ಅವರ ಬಳಿಕ ಈ ರೀತಿಯಾದ ವ್ಯಕ್ತಿಗತ ಅಲೆ ಎದ್ದಿರುವುದು ಇದೇ ಮೊದಲ ಬಾರಿಗೆ ಎಂದರು.

ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಸಾವಿನ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿಲುವು ಕ್ಷಮಿಸಲು ಸಾಧ್ಯವಿಲ್ಲ ಎಂದ ಅವರು ಪೊಲೀಸ್ ಇಲಾಖೆಯಲ್ಲಿ ಹೊಂದಾಣಿಕೆ ಇಲ್ಲದ ಪರಿಣಾಮ ಈ ಸಾವು ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ಹಿಂದೆ ಹೇಳಿದ್ದರು. ಆದರೂ ಈ ಪ್ರಕರಣವನ್ನು ಸಿಬಿಐಗೆ ನೀಡಲು ಹಿಂದೇಟು ಹಾಕುತ್ತಿದ್ದು ಸರ್ಕಾರ ಪ್ರಕರಣವನ್ನು ಮುಚ್ಚಿಟ್ಟು ಯಾರನ್ನೋ ರಕ್ಷಿಸುತ್ತಿದೆ. ಬಂಡೆ ಅವರ ತಲೆಗೆ ಬಿದ್ದಿರುವ ಗುಂಡು ಎಲ್ಲಿಗೆ ಹೋಯಿತು ಎಂಬುದು ಪ್ರಶ್ನಾರ್ಹವಾಗಿದೆ ಎಂದು ದೂರಿದರು.

ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಕ್ಷೇತ್ರ ಬಿಜೆಪಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ಪಕ್ಷದ ಮುಖಂಡರಾದ ರಾಜೇಶ್ ಬನ್ನೂರು, ಚನಿಲ ತಿಮ್ಮಪ್ಪ ಶೆಟ್ಟಿ, ಡಾ. ಪ್ರಸಾದ್ ಭಂಡಾರಿ ಇದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English