ಮೈಸೂರು: ಇಂದಿನ ಯುವಜನತೆ ಹೆಚ್ಚಾಗಿ ಐಟಿ ಬಿಟಿಯತ್ತ ಮುಖ ಮಾಡಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಹೇಳಿದರು.
ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹೊಸಮಠದ ಸಭಾಂಗಣದಲ್ಲಿ ಲಿಂಗೈಕ್ಯ ವಿದ್ವಾನ್ ಗುರುಶಾಂತಸ್ವಾಮಿಗಳ ಸ್ಮರಣಾರ್ಥ ಮಂಗಳವಾರ ಏರ್ಪಡಿಸಿದ್ದ ಅಂತರ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಬದುಕಿನಲ್ಲಿ ಹಣ ಸಂಪಾದನೆಯೇ ಮುಖ್ಯವಲ್ಲ. ಆದರೆ ಇಂದು ಹಣದತ್ತ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿರುವ ಕಾರಣ, ನಾವು ಹುಟ್ಟಿದ ನಾಡು, ಕಲೆ ಹಾಗೂ ಸಂಸ್ಕೃತಿ ಹಾಗೂ ಸಹ ಜೀವನದ ಬಗ್ಗೆ ಪ್ರೀತಿ ಕ್ಷೀಣಿಸುತ್ತಿದೆ. ಹಣದ ಮೋಹದಿಂದ ಯುವಜನತೆ ಐಟಿ ಬಿಟಿಯತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ವಿಷಾದಿಸಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚಾ ಸ್ಪರ್ಧೆಗಳು ಅಗತ್ಯ. ಯಾವುದೇ ವಿಷಯದ ಬಗ್ಗೆ ಪರ ಹಾಗೂ ವಿರೋಧ ಚರ್ಚೆಗಳಾಗಬೇಕು. ಆಗ ಅದರ ಕೆಡಕು ಮತ್ತು ಒಳಿತು ತಿಳಿಯಲಿದೆ. ಅಲ್ಲದೆ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಹೆಚ್ಚಿಸಲು ಇಂಥ ಸ್ಪರ್ಧೆಗಳು ಸಹಕಾರಿ ಎಂದರು.
ಸಂಚಾರ ನಿಯಮವನ್ನು ವಿದ್ಯಾರ್ಥಿಗಳು ತಪ್ಪದೆ ಪಾಲಿಸಬೇಕು. ದೇಶದ ಮುಂದಿನ ಭವಿಷ್ಯ ನಿರ್ಮಾಣಕಾರರು ಎಂಬ ಅರಿವಿರಬೇಕು. ತಮ್ಮ ಅಮೂಲ್ಯ ಜೀವವನ್ನು ಹಾಗೂ ಜೀವನವನ್ನು ಅಪಘಾತದಲ್ಲಿ ಕಳೆದುಕೊಳ್ಳಬಾರದು ಎಂದರು.
ನಟರಾಜ ಪ್ರತಿಷ್ಠಾನದ ಅಧ್ಯಕ್ಷ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಟರಾಜ ಮಹಿಳಾ ಕಾಲೇಜಿನ ಶೈಕ್ಷಣಿಕ ಸಂಯೋಜಕ ಡಾ. ಎಂ. ಬಸವರಾಜು ಮುಖ್ಯ ಅತಿಥಿಯಾಗಿದ್ದರು. ಕಾಲೇಜು ಪ್ರಾಂಶುಪಾಲ ಡಾ. ಎಂ. ಶಾರದಾ ಅಧ್ಯಕ್ಷತೆ ವಹಿಸಿದ್ದರು. ಚರ್ಚಾಸ್ಪರ್ಧೆ ಸಮಿತಿ ಸಂಚಾಲಕರಾದ ಜಿ. ಪ್ರಸಾದಮೂರ್ತಿ ಹಾಗೂ ತ್ರಿವೇಣಿ, ತೀರ್ಪುಗಾರರಾದ ಡಾ.ಕೆ. ಸೌಭಾಗ್ಯ, ಡಾ. ಜಿ. ಶಂಕರ್‌ನಾಯಕ್ ಹಾಗೂ ಜಿ. ಶಿವಪ್ರಸಾದ್ ಇದ್ದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಪ್ರಜ್ಞಾವಂತ ಮತದಾರರಿಂದ ಭಾರತದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ ಎಂಬ ವಿಷಯ ಕುರಿತು ಚರ್ಚಾ ಸ್ಪರ್ಧೆ ನಡೆಯಿತು.
ಬಹುಮಾನ ವಿತರಣೆ: ಅಂತರ ಕಾಲೇಜು ಕನ್ನಡ ಚರ್ಚಾಸ್ಪರ್ಧೆಯಲ್ಲಿ ಸಮಗ್ರ ಪಾರಿತೋಷಕವನ್ನು ಮಹಾರಾಣಿ ವಿಜ್ಞಾನ ಪದವಿ ಕಾಲೇಜು ಪಡೆಯಿತು. ಇದೇ ಕಾಲೇಜಿನ ಎಚ್.ಎಂ.ರಜಿನಿ ಪ್ರಥಮ, ನಟರಾಜ ಕಾಲೇಜಿನ ಸಿ.ಎಂ. ಅಶ್ವಿನಿ ದ್ವಿತೀಯ ಹಾಗೂ ಮಹಾರಾಜ ಕಾಲೇಜಿನ ನರಸಿಂಹೇಗೌಡ ತೃತೀಯ ಬಹುಮಾನ ಪಡೆದರು. ಸಂಸ್ಥೆಯ ವಿಶೇಷಾಧಿಕಾರಿ ಪ್ರೊ. ಚಂದ್ರಶೇಖರಯ್ಯ ಬಹುಮಾನ ವಿತರಿಸಿದರು.
Click this button or press Ctrl+G to toggle between Kannada and English