ನವದೆಹಲಿ: ವಿಶ್ವದ ಅತಿದೊಡ್ಡ ಚುನಾವಣಾ ಪ್ರಕ್ರಿಯೆಗೆ ಕೇಂದ್ರ ಚುನಾವಣಾ ಆಯೋಗ ಚಾಲನೆ ನೀಡಿದ್ದು, ಒಂಬತ್ತು ಹಂತದ ಮತದಾನದ ವೇಳಾಪಟ್ಟಿ ಪ್ರಕಟಿಸಿದೆ. ಜೂನ್ 1ರಿಂದ ಅಸ್ತಿತ್ವಕ್ಕೆ ಬರಬೇಕಿರುವ ಹದಿನಾರನೇ ಲೋಕಸಭೆಗೆ 543 ಸದಸ್ಯರನ್ನು 81.4 ಕೋಟಿ ಜನರು ಆಯ್ಕೆ ಮಾಡಲಿದ್ದಾರೆ. ವೇಳಾಪಟ್ಟಿ ಪ್ರಕಟಿಸುತ್ತಿದ್ದಂತೆ ಚುನಾವಣಾ ನೀತಿ ಸಂಹಿತೆಯೂ ಜಾರಿಗೆ ಬಂದಿದೆ. ಇನ್ನು ಮುಂದೆ ಕೇಂದ್ರ ಅಥವಾ ರಾಜ್ಯ ಸರ್ಕಾರ ಮನಸೋ ಇಚ್ಛೆ ಹೊಸ ಯೋಜನೆಗಳನ್ನು ಘೋಷಿಸುವಂತಿಲ್ಲ.
ಏಪ್ರಿಲ್ 7ರಿಂದ ಆರಂಭವಾಗುವ ಮತದಾನ ಪ್ರಕ್ರಿಯೆ ಒಂಬತ್ತು ಹಂತಗಳಲ್ಲಿ ನಡೆಯಲಿದೆ. ಲೋಕಸಭಾ ಚುನಾವಣೆಗಾಗಿ ಇದೇ ಮೊದಲ ಬಾರಿಗೆ ಇಷ್ಟು ಹಂತಗಳಲ್ಲಿ ಮತದಾನ ನಡೆಯಲಿದೆ ಎಂಬುದೇ ವಿಶೇಷ. ಮೇ 12 ರಂದು ಮತದಾನ ಪ್ರಕ್ರಿಯೆ ಕೊನೆಗೊಳ್ಳಲಿದೆ. ಮೇ 16 ರಂದು ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಏಪ್ರಿಲ್ 17ರಂದು ಮತದಾನ ನಡೆಯಲಿದೆ. 2009ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ, ಮತದಾರರ ಸಂಖ್ಯೆ ಹತ್ತು ಕೋಟಿ ಹೆಚ್ಚಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್. ಸಂಪತ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಿಧಾನಸಭಾ ಅವಧಿ ಮುಗಿಯಲಿರುವ ಆಂಧ್ರಪ್ರದೇಶ (ಸೀಮಾಂಧ್ರ- ತೆಲಂಗಾಣ) ಸಿಕ್ಕಿಂ ಮತ್ತು ಒಡಿಶಾ ರಾಜ್ಯಗಳ ವಿಧಾನಸಭಾ ಚುನಾವಣೆಯೂ ಲೋಕಸಭಾ ಚುನಾವಣೆ ಜತೆ ನಡೆಯಲಿದೆ.
ಹಂತ 1
07.04.2014
2-ರಾಜ್ಯ 6-ಕ್ಷೇತ್ರ
ಹಂತ 2
09.04.2014
5-ರಾಜ್ಯ 7-ಕ್ಷೇತ್ರ
ಹಂತ 3
10.04.2014
14-ರಾಜ್ಯ 92-ಕ್ಷೇತ್ರ
ಹಂತ 4
12.04.2014
3-ರಾಜ್ಯ 5-ಕ್ಷೇತ್ರ
ಹಂತ 5
17.04.2014
13-ರಾಜ್ಯ 122-ಕ್ಷೇತ್ರ
ಹಂತ 6
24.04.2014
12-ರಾಜ್ಯ 117-ಕ್ಷೇತ್ರ
ಹಂತ 7
30.04.2014
9-ರಾಜ್ಯ 89-ಕ್ಷೇತ್ರ
ಹಂತ 8
07.05.2014
7-ರಾಜ್ಯ 64-ಕ್ಷೇತ್ರ
ಹಂತ 9
12.05.2014
3-ರಾಜ್ಯ 41-ಕ್ಷೇತ್ರ
ಒಟ್ಟು ಕ್ಷೇತ್ರಗಳು 543
ಮೊದಲ ಎರಡು ಮತ್ತು ನಾಲ್ಕನೇ ಹಂತದಲ್ಲಿ ಕ್ರಮವಾಗಿ ಆರು ಮತ್ತು ಏಳು ಮತ್ತು ಐದು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಐದನೇ ಹಂತದಲ್ಲಿ ಕರ್ನಾಟಕ ರಾಜ್ಯ ಸೇರಿದಂತೆ 13 ರಾಜ್ಯಗಳ 122 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಮೂರು ವರ್ಷಗಳಿಂದ ಒಂದೇ ಸ್ಥಾನದಲ್ಲಿರುವ ಅಧಿಕಾರಿಗಳನ್ನು ವರ್ಗ ಮಾಡುತ್ತೇವೆ. ನೀತಿ ಸಂಹಿತೆ ಜಾರಿಯಾಗಿರುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಈಗಾಗಲೇ ಮಾಹಿತಿ ನೀಡಿದ್ದೇವೆ.
– ಅನಿಲ್‌ಕುಮಾರ್ ಝಾ, ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ
ಕರ್ನಾಟಕ
ಒಟ್ಟು ಲೋಕಸಭಾ ಕ್ಷೇತ್ರಗಳು 28
ರಾಜ್ಯದಲ್ಲಿ ಚುನಾವಣೆ ಏ.17
ಫಲಿತಾಂಶ ಮೇ16
ಮಾದರಿ ನೀತಿ ಸಂಹಿತೆ, ಆಳ – ಅಗಲ
ಸಾಮಾನ್ಯ ಸಂಹಿತೆ
1. ಯಾವುದೇ ಪಕ್ಷವಾಗಲಿ ಅಥವಾ ರಾಜಕೀಯ ವ್ಯಕ್ತಿಯಾಗಲಿ ಧರ್ಮಗಳು ಮತ್ತು ಜಾತಿಗಳ ನಡುವೆ ಸಂಘರ್ಷವುಂಟು ಮಾಡುವ ರೀತಿ ಹೇಳಿಕೆ ನೀಡುವಂತಿಲ್ಲ.
2. ರಾಜಕೀಯಕ್ಕೆ ಸಂಬಂಧಿಸಿದ ರೀತಿಯಲ್ಲೇ ಪರಸ್ಪರ ಹೇಳಿಕೆ ನೀಡಬೇಕು. ಇದನ್ನು ಬಿಟ್ಟು ವೈಯಕ್ತಿಕ ನಿಂದನೆ ಸಲ್ಲದು.
3. ಧರ್ಮದ ಆಧಾರದಲ್ಲಿ ಯಾರೂ ಮತ ಕೇಳಬಾರದು. ಮಸೀದಿಗಳು, ದೇವಸ್ಥಾನಗಳು ಮತ್ತು ಚರ್ಚ್‌ಗಳನ್ನು ರಾಜಕೀಯ ಪ್ರಚಾರಕ್ಕಾಗಿ ಬಳಸಿಕೊಳ್ಳಬಾರದು.
4. ಮತದಾರರಿಗೆ ಹಣದ ಆಮೀಷ ಒಡ್ಡುವುದು, ಅವರ ಮೇಲೆ ಪ್ರಭಾವ ಬೆಳೆಸುವುದು, ಮತಗಟ್ಟೆಯಿಂದ 100 ಮೀಟರ್ ಒಳಗೆ ಪ್ರಚಾರ ನಡೆಸುವುದು, ಮತದಾನದ ಮುನ್ನಾ ಎರಡು ದಿನ ಸಾರ್ವಜನಿಕ ಪ್ರಚಾರ ನಡೆಸುವಂತಿಲ್ಲ.
5. ಹೇಳಿಕೆಗಳ ವಿರುದ್ಧ ಪ್ರತಿಭಟನೆ ನಡೆಸುವಂತಿಲ್ಲ. ಈ ಮೂಲಕ ಹಿಂಸಾಚಾರ ಸೃಷ್ಟಿಸುವಂತಿಲ್ಲ.
6. ಸ್ವತಂತ್ರ ವ್ಯಕ್ತಿಯೊಬ್ಬನ ಯಾವುದೇ ಆಸ್ತಿಯನ್ನು ರಾಜಕೀಯ ಪಕ್ಷಗಳು ಆತನ ಅನುಮತಿ ಇಲ್ಲದೇ ಬಳಸಿಕೊಳ್ಳುವಂತಿಲ್ಲ.
7. ಇತರೆ ರಾಜಕೀಯ ಪಕ್ಷಗಳು ನಡೆಸುವ ಸಭೆಗಳಿಗೆ ಬೇರೆ ಪಕ್ಷಗಳು ಅಡ್ಡಿಪಡಿಸುವಂತಿಲ್ಲ.
ಸಭೆಗಳು
1. ಸಭೆ ನಡೆಯುವ ಸ್ಥಳ ಮತ್ತು ಸಮಯದ ಬಗ್ಗೆ ಹತ್ತಿರದ ಪೊಲೀಸರಿಗೆ ಮೊದಲೇ ಮಾಹಿತಿ ನೀಡಬೇಕು.
2. ಪೊಲೀಸರು ಸೂಚಿಸುವ ನಿಬಂಧನೆಗಳನ್ನು ರಾಜಕೀಯ ಪಕ್ಷಗಳು ಪಾಲಿಸಲೇಬೇಕು.
3. ಧ್ವನಿ ವರ್ಧಕಗಳ ಬಳಕೆಗೆ ಅನುಮತಿ ಪಡೆಯಬೇಕು.
4. ಸಭೆಗಳಿಗೆ ಯಾರಾದರೂ ಅಡ್ಡಿ ಮಾಡುತ್ತಾರೆ ಎಂಬ ಭಯವಿದ್ದಲ್ಲಿ ಪೊಲೀಸರ ಸಹಾಯ ಪಡೆದುಕೊಳ್ಳಬೇಕು. ಇದು ಬಿಟ್ಟು, ಅವರೇ ಯಾವುದೇ ಕ್ರಮ ತೆಗೆದುಕೊಳ್ಳುವಂತಿಲ್ಲ.
ಮತದಾನ ದಿನ
ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು…
ಎ. ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳು ಶಾಂತಿಯುತವಾಗಿ ಮತದಾನ ನಡೆಯಲು ಸಹಕರಿಸಬೇಕು.
ಬಿ. ಸೂಕ್ತವಾದ ಬ್ಯಾಡ್ಜ್‌ಗಳು ಮತ್ತು ಗುರುತಿನ ಚೀಟಿ ಕೊಟ್ಟು ಮತಗಟ್ಟೆಗೆ ಕಳುಹಿಸುವುದು.
ಸಿ. ಮತದಾರರಿಗೆ ಬಿಳಿ ಹಾಳೆಯಲ್ಲಿ ಅವರ ವಿವರ ಬರೆದುಕೊಡುವುದು. ಇದರಲ್ಲಿ ಯಾವುದೇ ಚಿಹ್ನೆಯಾಗಲಿ ಇರಕೂಡದು.
ಡಿ. ಮತದಾನದ ದಿನ ಮದ್ಯಪಾನ ವಿತರಣೆ ಸಲ್ಲದು.
ಇ. ರಾಜಕೀಯ ಪಕ್ಷಗಳ ಕ್ಯಾಂಪ್ ಬಳಿ ಹೆಚ್ಚು ಜನ ಇರಕೂಡದು.
ಎಫ್. ಅಭ್ಯರ್ಥಿಗಳ ಕ್ಯಾಂಪ್ ಸರಳವಾಗಿರಬೇಕು.
ಮೆರವಣಿಗೆ
1. ಮೆರವಣಿಗೆ ಆರಂಭಿಸುವ ಸ್ಥಳ, ಹಾದು ಹೋಗುವ ಸ್ಥಳ ಮತ್ತು ಸೇರುವ ಸ್ಥಳದ ಬಗ್ಗೆ ಮೊದಲೇ ಮಾಹಿತಿ ಕೊಡಬೇಕು.
2. ಮೆರವಣಿಗೆಗಾಗಿ ಮೊದಲೇ ಪೊಲೀಸರಿಂದ ಅನುಮತಿ ಪಡೆಯಬೇಕು.
3. ಪೊಲೀಸರು ಯಾವುದಾದರೂ ನಿಬಂಧನೆ ಹಾಕಿದ್ದರೆ ಅವುಗಳನ್ನು ಪಾಲಿಸಬೇಕು.
4. ಮೆರವಣಿಗೆ ನೆಪದಲ್ಲಿ ಜನರ ಸಂಚಾರಕ್ಕೆ ಅಡ್ಡಿ ಪಡಿಸುವಂತಿಲ್ಲ. ಒಂದು ವೇಳೆ ದೊಡ್ಡ ಪ್ರಮಾಣದ ಮೆರವಣಿಗೆ ಆಯೋಜಿಸಿದ್ದರೆ, ಇದಕ್ಕೆ ಮೊದಲೇ ಮಾಹಿತಿ ನೀಡಬೇಕು.
5. ಮೆರವಣಿಗೆಗಾಗಿ ಸೂಕ್ತವಾದ ರಸ್ತೆ ಅಥವಾ ಪೊಲೀಸರ ಸಹಾಯವನ್ನು ಪಡೆದುಕೊಳ್ಳಬೇಕು.
6. ಎರಡು ಪಕ್ಷಗಳು ಮೆರವಣಿಗೆಗಾಗಿ ಒಂದೇ ಸಮಯ, ಒಂದೇ ಸ್ಥಳ ನಿಗದಿ ಮಾಡಿಕೊಂಡಿದ್ದರೆ, ಎರಡೂ ಪಕ್ಷಗಳು ಮೊದಲೇ ಪೊಲೀಸರಿಗೆ ಮಾಹಿತಿ ಕೊಡಬೇಕು. ಆದಕೂ ಟ್ರಾಫಿಕ್‌ಗೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು.
7. ಆ ಕ್ಷಣದ ಆವೇಶಕ್ಕೆ ಈಡಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಆಯೋಜಕರು ನೋಡಿಕೊಳ್ಳಬೇಕು.
8. ರಾಜಕೀಯ ನಾಯಕರ ಪ್ರತಿಕೃತಿ ದಹಿಸಬಾರದು.
ಯಾರು ಯಾರು ಏನೇನನ್ನು ಪಾಲಿಸಬೇಕು, ಇಲ್ಲಿದೆ ನೋಡಿ ಮಾಹಿತಿ…
ಮಾದರಿ ನೀತಿ ಸಂಹಿತೆ ಎಂದರೇನು?
ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಇದೊಂದು ನೀತಿ ಸಂಹಿತೆಯ ಮಾರ್ಗದರ್ಶಿ. ರಾಜಕೀಯ ಪಕ್ಷಗಳ ಒಪ್ಪಿಗೆ ಪಡೆದೇ ಕೆಲವೊಂದು ಸೂತ್ರಗಳನ್ನು ರಚಿಸಲಾಗಿರುತ್ತದೆ. ಇದರಲ್ಲಿರುವ ನಿಯಮಗಳನ್ನು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ಪಾಲಿಸಲೇಬೇಕು.
ಇದರಲ್ಲಿ ಚುನಾವಣಾ ಆಯೋಗದ ಪಾತ್ರವೇನು?
ಸಂವಿಧಾನದ ಆರ್ಟಿಕಲ್ 324ರಂತೆ ಸಂಸತ್ ಮತ್ತು ವಿಧಾನಸಭೆಯ ಚುನಾವಣೆಗಳನ್ನು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತವಾಗಿ ನಡೆಸಲು ಕೇಂದ್ರ ಅಥವಾ ರಾಜ್ಯದಲ್ಲಿ ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳ ಮೇಲೆ ನಿಗಾ ಇಡುವ ಕೆಲಸವನ್ನು ಕೇಂದ್ರ ಚುನಾವಣಾ ಆಯೋಗ ಮಾಡುತ್ತದೆ. ಅಧಿಕಾರಶಾಹಿ ಕೂಡ ಚುನಾವಣೆಗಾಗಿ ದುರ್ಬಳಕೆಯಾಗುವುದನ್ನು ತಡೆಯುತ್ತದೆ. ಜೊತೆಗೆ ಚುನಾವಣಾ ಅಕ್ರಮ, ಭ್ರಷ್ಟಾಚಾರ, ಆಮೀಷ, ಪ್ರಭಾವ ಮತ್ತು ಮತದಾರರ ಮೇಲೆ ದಬ್ಬಾಳಿಕೆ ತಡೆಯುವ ಕೆಲಸವನ್ನೂ ಚುನಾವಣಾ ಆಯೋಗ ಮಾಡುತ್ತೆ.
ಯಾವ ದಿನಾಂಕದಿಂದ ಮಾದರಿ ನೀತಿ ಸಂಹಿತೆ ಜಾರಿಯಾಗುತ್ತೆ?
ಚುನಾವಣಾ ದಿನಾಂಕ ಘೋಷಣೆಯಾದ ದಿನದಿಂದಲೇ.
ಸಾಮಾನ್ಯ ಚುನಾವಣೆ ಮತ್ತು ಉಪ ಚುನಾವಣೆಗಳಲ್ಲಿ ಇದು ಹೇಗೆ ಅನ್ವಯವಾಗುತ್ತೆ?
ಎ. ಲೋಕಸಭೆ ಚುನಾವಣೆ ವೇಳೆ ಇಡೀ ದೇಶಕ್ಕೆ ನೀತಿ ಸಂಹಿತೆ ಜಾರಿಯಾಗುತ್ತದೆ.
ಬಿ. ವಿಧಾನಸಭೆ ಚುನಾವಣೆ ವೇಳೆ ಆ ರಾಜ್ಯಕ್ಕೆ ಮಾತ್ರ ಅನ್ವಯ.
ಸಿ. ಉಪಚುನಾವಣೆ ವೇಳೆ ಆ ಜಿಲ್ಲೆಗೆ ಮಾತ್ರ ಅನ್ವಯ.
ಸಚಿವರೊಬ್ಬರು ಚುನಾವಣಾ ಪ್ರಕ್ರಿಯೆ ಜೊತೆ, ತಮ್ಮ ಅಧಿಕೃತ ಕೆಲಸವನ್ನೂ ಮಾಡಬಹುದೇ?
ಇಲ್ಲ.
ಚುನಾವಣಾ ಕೆಲಸದಲ್ಲಿ ಸರ್ಕಾರಿ ವಾಹನ ಬಳಕೆ ಮಾಡಬಹುದೇ?
ಇಲ್ಲ
ಈ ಸಂದರ್ಭದಲ್ಲಿ ಅಧಿಕಾರಿಗಳ ವರ್ಗಾವರ್ಗಿ ಮತ್ತು ನೇಮಕ ಮಾಡಬಹುದೇ?
ನೀತಿ ಸಂಹಿತೆ ಜಾರಿಯಾದ ಮೇಲೆ ಯಾವುದೇ ಅಧಿಕಾರಿಯ ವರ್ಗಾವರ್ಗಿ ಅಥವಾ ನೇಮಕ ಮಾಡುವುದು ನಿಷಿದ್ಧ. ಒಂದು ವೇಳೆ ಅಧಿಕಾರಿಯ ವರ್ಗಾವಣೆ ಮಾಡಲೇಬೇಕಾದಲ್ಲಿ ಚುನಾವಣಾ ಆಯೋಗದ ಅನುಮತಿ ಪಡೆದುಕೊಳ್ಳಬೇಕು.
ಅಧಿಕಾರಿಯ ವರ್ಗಾವಣೆ ಆಗಿದ್ದಾಗ್ಯೂ, ಆತ ಹೊಸ ಸ್ಥಳದಲ್ಲಿ ಇನ್ನೂ ಚಾರ್ಜ್ ತೆಗೆದುಕೊಂಡಿಲ್ಲವಾದರೆ, ಆತ ಅಲ್ಲಿ ಅಧಿಕಾರ ಸ್ವೀಕರಿಸಬಹುದೇ?
ಇಲ್ಲ. ಯಥಾಸ್ಥಿತಿ ಕಾಯ್ದುಕೊಳ್ಳಬೇಕು.
ಸರ್ಕಾರದ ಕೆಲಸದ ಬಗ್ಗೆ ಮಾತನಾಡಲು ಯಾವುದೇ ಅಧಿಕಾರಿಯನ್ನು ಸಚಿವರು ಕರೆಸಿಕೊಳ್ಳಬಹುದೇ?
ಇಲ್ಲ.
ಆದರೂ, ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಕೇಂದ್ರ ಸಚಿವರೊಬ್ಬರು ದೆಹಲಿ ಹೊರಗೆ ಸಂಚರಿಸಿದಾಗ ಆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಪತ್ರ ಮುಖೇನ ಮಾಹಿತಿ ನೀಡಬೇಕು. ಜೊತೆಗೆ ಚುನಾವಣಾ ಆಯೋಗಕ್ಕೂ ಮಾಹಿತಿ ನೀಡಬೇಕು.
ಚುನಾವಣೆ ನಡೆಯುವ ಕ್ಷೇತ್ರಕ್ಕೆ ಸಚಿವರು ಅಧಿಕೃತ ಭೇಟಿ ನೀಡಬಹುದೇ?
ಒಂದು ವೇಳೆ ಸಚಿವರು ಭೇಟಿ ನೀಡಿದಲ್ಲಿ ಅದು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಅಲ್ಲದೆ ಚುನಾವಣಾ ಆಯೋಗ ಗುರಿ ಪಡಿಸುವ ಶಿಕ್ಷೆಗೆ ತಲೆಬಾಗಬೇಕಾಗುತ್ತದೆ.
ಸಚಿವರು ಸರ್ಕಾರಿ ವಾಹನ ಬಳಕೆ ಮಾಡಬಹುದೇ?
ಕಚೇರಿಯಿಂದ ಮನೆಗೆ, ಮನೆಯಿಂದ ಕಚೇರಿಗೆ ಮಾತ್ರ ಸರ್ಕಾರಿ ವಾಹನ ಬಳಕೆ ಮಾಡಬೇಕು. ಯಾವುದೇ ಚುನಾವಣಾ ಸಂಬಂಧಿ ಕಾರ್ಯಗಳಿಗೆ ಬಳಕೆ ಮಾಡುವಂತಿಲ್ಲ.
ಕೆಂಪು ದೀಪ ಒಳಗೊಂಡ ಕಾರು ಬಳಕೆ ಮಾಡಬಹುದೇ?
ಯಾವುದೇ ಸರ್ಕಾರಿ ಕಾರ್ಯಕ್ರಮ ಅಥವಾ ಚುನಾವಣಾ ಅಥವಾ ಖಾಸಗಿ ಕೆಲಸಗಳಿಗೆಗಾಗಿ ಯಾರೊಬ್ಬರೂ ಕೆಂಪು ದೀಪ ಇರುವ ಕಾರು ಬಳಕೆ ಮಾಡುವಂತಿಲ್ಲ.
ರಾಷ್ಟ್ರಪತಿ ಅಥವಾ ಉಪರಾಷ್ಟ್ರಪತಿ ಭೇಟಿ ನೀಡಿದಲ್ಲಿ ಸಚಿವರು ವಿಐಪಿ ಕಾರು ಬಳಕೆ ಮಾಡಬಹುದೇ?
ಹೌದು, ಮಾಡಬಹುದು. ಆದರೆ ರಾಷ್ಟ್ರಪತಿ ಅವರ ಮುಖ್ಯ ಕಚೇರಿಯಿಂದ ತಮ್ಮ ಕಚೇರಿಗೆ ಹೋಗಿ ಬರಲು ಮಾತ್ರ ಬಳಕೆ ಮಾಡಬಹುದು.
ಒಂದು ವೇಳೆ ಸರ್ಕಾರಿ ಕಾರಿಗೆ ಸಚಿವರು ಭತ್ಯೆ ನೀಡಿ ಬಳಕೆ ಮಾಡುತ್ತಿದ್ದರೂ, ಉಪಯೋಗಿಸಬಹುದೇ?
ಯಾವುದೇ ರೀತಿಯ ಸರ್ಕಾರಿ ಕಾರುಗಳನ್ನೂ ಬಳಕೆ ಮಾಡುವಂತಿಲ್ಲ.
ನೀತಿ ಸಂಹಿತೆ ಉಲ್ಲಂಘಿಸುವ ಸಚಿವರ ಕಾರುಗಳನ್ನು ವಾಪಸ್ ಪಡೆಯಬಹುದೇ?
ಪಡೆಯಬಹುದು. ಈ ಸಂಬಂಧ ಪೂರ್ಣ ಪ್ರಮಾಣದಲ್ಲಿ ಚುನಾವಣಾಧಿಕಾರಿಗೆ ಅಧಿಕಾರವಿರುತ್ತದೆ.
ವಿವಿಯ ಘಟಿಕೋತ್ಸವಗಳಲ್ಲಿ ಮುಖ್ಯಮಂತ್ರಿ, ಸಚಿವರು, ರಾಜ್ಯಪಾಲರು ಪಾಲ್ಗೊಳ್ಳಬಹುದೇ?
ರಾಜ್ಯಪಾಲರು ಮಾತ್ರ ಪಾಲ್ಗೊಳ್ಳಬಹುದು. ಉಳಿದವರು ಪಾಲ್ಗೊಳ್ಳುವಂತಿಲ್ಲ.
ಸರ್ಕಾರಿ ಬೊಕ್ಕಸದ ಹಣದಿಂದ ಆಯೋಜಿಸಲಾಗುವ ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳಬಹುದೇ?
ಇಲ್ಲ, ಆದರೆ ವ್ಯಕ್ತಿಯೊಬ್ಬ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು.
ಸಮಾಜಕಲ್ಯಾಣ ಕಾರ್ಯಕ್ರಮಗಳಲ್ಲಿ ಹಣ ನೀಡಬಹುದೇ?
ಬಳಕೆ ಮಾಡುವಂತಿಲ್ಲ.
ಟೆಂಡರ್, ಹರಾಜು, ಲಿಕ್ಕರ್ ಹರಾಜು ಮಾಡಬಹುದೇ?
ಮಾಡುವಂತಿಲ್ಲ.
ಬಾಬು ಜಗಜೀವನ್ ರಾಂ, ಅಂಬೇಡ್ಕರ್ ರಂಥವರ ಹುಟ್ಟು ಹಬ್ಬದ ಆಚರಣೆ ಮಾಡಬಹುದೇ?
ಮಾಡಬಹುದು. ಜೊತೆಗೆ ಸಾಹಿತ್ಯ ಸಮ್ಮೇಳನ, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಗಳನ್ನು ಮಾಡಬಹುದು. ಆದರೆ ಮುಖ್ಯಮಂತ್ರಿಯಾದಿಯಾಗಿ ಪಾಲ್ಗೊಳ್ಳುವ ಯಾವ ನೇತಾರರೂ ರಾಜಕೀಯ ಭಾಷಣ ಮಾಡುವಂತಿಲ್ಲ.
Click this button or press Ctrl+G to toggle between Kannada and English