ಬೆಂಗಳೂರು: ಲೋಕಸಭೆ ಚುನಾವಣೆ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ಪ್ರಮುಖ ರಾಜಕೀಯ ಪಕ್ಷಗಳ ಚಟುವಟಿಕೆ ಗರಿಗೆದರಿ ನಿಂತಿವೆ.
ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಾಳೆಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿದ್ದು, ಬಹುತೇಕ ಎಲ್ಲ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಖೈರುಗೊಂಡಿದ್ದರೂ, ಯಾವುದೇ ಪಕ್ಷ ಇದುವರೆಗೂ ಪಟ್ಟಿ ಬಿಡುಗಡೆ ಮಾಡಿಲ್ಲ. ಆದರೆ ಕೆಲವು ಪ್ರಮುಖ ಕ್ಷೇತ್ರಗಳಿಗೆ ಪ್ರಭಾವಿ ಅಭ್ಯರ್ಥಿಗಳ ಆಯ್ಕೆಗೆ ತೆರೆಮರೆಯಲ್ಲಿ ಕಸರತ್ತು ನಡೆದಿದೆ.
ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಅವರ ವಿರುದ್ಧ ತಮ್ಮ ಸೊಸೆ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ನಿರ್ಧರಿಸಿದ್ದಾರೆ. ಇದಕ್ಕೆ ಅನಿತಾ ಅವರ ಪತಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಮ್ಮತಿ ಸೂಚಿಸಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಸಾಕಷ್ಟು ನೆಲೆ ಹೊಂದಿದ್ದು, ಅನಿತಾ ಕುಮಾರಸ್ವಾಮಿ ಅವರ ತವರೂರು ಸಹ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಹೀಗಾಗಿ ಅವರ ಸ್ಪರ್ಧೆಯಿಂದ ಚುನಾವಣಾ ಕಣ ರಂಗೇರುವುದು ಸ್ಪಷ್ಟವಾಗಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಅವರು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸುಲಭವಾಗಿ ಗೆದ್ದು, ಸಂಸತ್ ಪ್ರವೇಶಿಸಿ, ಕೇಂದ್ರದಲ್ಲಿ ಐದು ವರ್ಷ ಸಚಿವರೂ ಆಗಿರುವ ವೀರಪ್ಪ ಮೊಯಿಲಿ ಅವರಿಗೆ ಈ ಬಾರಿ ಜೆಡಿಎಸ್ ಹಾಗೂ ಬಿಜೆಪಿಯಿಂದ ಪ್ರಬಲ ಸ್ಪರ್ಧೆ ಎದುರಿಸಬೇಕಾಗಿದೆ.
ಇನ್ನು ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುತ್ರಿ ಹಾಗೂ ಖಾಟ ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
ಗೀತಾ ಶಿವರಾಜ್ ಕುಮಾರ್ ಅವರ ಸ್ಪರ್ಧೆಗೆ ನಟ ಶಿವರಾಜ್ ಕುಮಾರ್ ಅವರು ಸಹ ಸಮ್ಮತಿ ಸೂಚಿಸಿದ್ದು, ಪತ್ನಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.
2008ರ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರ ವಿರುದ್ಧ ಸ್ಪರ್ಧಿಸಿದ್ದ ಬಂಗಾರಪ್ಪ ಅವರು ಪರಾಭವಗೊಂಡಿದ್ದರು. ನಂತರ 2009ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ವಿರುದ್ಧ ಸ್ಪರ್ಧಿಸಿದ್ದ ಬಂಗಾರಪ್ಪ ಮತ್ತೆ ಸೋಲು ಅನುಭವಿಸಿದ್ದರು. ತಮ್ಮ ತಂದೆಯ ಈ ಎರಡೂ ಸೋಲಿನ ಸೇಡು ತಿರಿಸಿಕೊಳ್ಳಬೇಕಾದ ಹೊಣೆ ಈಗ ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜ್ ಕುಮಾರ್ ಅವರ ಮೇಲಿದೆ. ಹೀಗಾಗಿ ಈ ಬಾರಿ ಶಿವಮೊಗ್ಗ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಚುನಾವಣೆ ನಡೆಯುವುದು ಖಚಿತವಾಗಿದೆ.
ಇದೇ ಮೊದಲ ಬಾರಿಗೆ ಡಾ.ರಾಜಕುಮಾರ್ ಅವರ ಕುಟುಂಬದ ಸದಸ್ಯರೊಬ್ಬರು ಚುನಾವಣೆಗೆ ಸ್ಪರ್ಧಿಸುತ್ತಿರುವುದರಿಂದ ಸಹಜವಾಗಿಯೇ ಚುನಾವಣಾ ಕಣ ರಂಗೇರಲಿದೆ. ಇನ್ನು ಶಿವಮೊಗ್ಗ ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿರುವ ಕಾಂಗ್ರೆಸ್, ವಿಧಾಸಭಾ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರನ್ನೇ ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಆದರೆ ಇದಕ್ಕೆ ಕಾಗೋಡು ತಿಮ್ಮಪ್ಪ ಅವರು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎನ್ನಲಾಗಿದೆ. ಬಂಗಾರಪ್ಪ ಅವರ ಹಿರಿಯ ಪುತ್ರ ಕುಮಾರ್ ಬಂಗಾರಪ್ಪ ಅವರೂ ಸಹ ಕಾಂಗ್ರೆಸ್ ಟಿಕೆಟ್‌ಗಾಗಿ ತೀವ್ರ ಪ್ರಯತ್ನ ನಡೆಸಿದ್ದಾರೆ. ಕುಮಾರ್ ಬಂಗಾರಪ್ಪ ಅವರಿಗೆ ಟಿಕೆಟ್ ನೀಡಿದರೆ, ಅದರಿಂದ ಯಡಿಯೂರಪ್ಪ ಅವರಿಗೆ ಅನುಕೂಲವಾಗಬಹುದು ಎಂಬ ಆತಂಕವೂ ರಾಜ್ಯ ಕಾಂಗ್ರೆಸ್ ಮುಖಂಡರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಒಂದು ವೇಳೆ ಕಾಗೋಡು ತಿಮ್ಮಪ್ಪ ಅವರು ಸ್ಪರ್ಧೆಗೆ ನಿರಾಕರಿಸಿದರೆ, ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಮಂಜುನಾಥ್ ಬಂಡಾರಿ ಅವರು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಸಂಸದೆ ಹಾಗೂ ಚಿತ್ರ ನಟಿ ರಮ್ಯಾ ಅವರ ವಿರುದ್ಧ ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಅವರನ್ನು ಸ್ಪರ್ಧೆಗಿಳಿಸಲು ಜೆಡಿಎಸ್ ಒಲವು ತೊರಿದೆ. ಇತ್ತಿಚೀಗೆ ಈ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ತಿ ಪುಟ್ಟರಾಜು ವಿರುದ್ಧ ರಮ್ಯಾ ಗೆಲುವು ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ತನ್ನ ರಣನೀತಿಯನ್ನು ಬದಲಾಯಿಸಲು ಚಿಂತಿಸುತ್ತಿರುವ ಜೆಡಿಎಸ್ ಈ ಬಾರಿ ಪುಟ್ಟರಾಜು ಬದಲಿಗೆ ತಮ್ಮಣ್ಣ ಅವರನ್ನೇ ರಮ್ಯಾ ವಿರುದ್ಧ ಕಣಕ್ಕಿಳಿಸಲು ಉದ್ದೇಶಿಸಿದೆ. ತಮ್ಮಣ್ಣ ಅವರು ದೇವೇಗೌಡರ ಕುಟುಂಬಕ್ಕೆ ಹತ್ತಿರದ ಸಂಬಂಧಿಯಾಗಿದ್ದಾರೆ.
Click this button or press Ctrl+G to toggle between Kannada and English