ಗುಲ್ಬರ್ಗಾ : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಈಗಾಗಲೇ ದರ ಏರಿಕೆಗೆ ಶಿಫಾರಸ್ಸು ಮಾಡಿರುವ ಹಿನ್ನಲೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಗಳ ಬಳಿಕ ವಿದ್ಯುತ್ ದರ ಏರಿಕೆಗೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ವಿದ್ಯುತ್ ದರ ಏರಿಕೆಗೆ ಇದುವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಮುಖ್ಯವಾಗಿ ವಿದ್ಯುತ್ ಕಂಪನಿಗಳು ಹಾನಿಯಲ್ಲಿವೆ. ಇದರ ಜೊತೆಗೆ ಉಚಿತ ವಿದ್ಯುತ್ ನ್ನು ಸಹ ನೀಡುತ್ತಿದ್ದೇವೆ. ವಿದ್ಯುತ್ ಸೋರಿಕೆ ಕೂಡಾ ನಿರಂತರವಾಗಿದೆ. ನಿಗಮ ಮಾಡಿರುವ ಶಿಫಾರಸ್ಸಿನಲ್ಲಿ ಗೊಂದಲವಿದೆ. ಹೀಗಾಗಿ ಈ ಕುರಿತು ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಪತ್ರಕರ್ತರಿಗೆ ತಿಳಿಸಿದರು.
ಕೇಂದ್ರ ಸರಕಾರದ ಸಹಕಾರದೊಂದಿಗೆ ಗ್ರಾಮೀಣ ಪ್ರದೇಶಕ್ಕೆ ಮಾರ್ಚ್ ತಿಂಗಳಲ್ಲಿ 6 ತಾಸು ಮೂರು ಫೇಸ್ ವಿದ್ಯುತ್ ನೀಡಲು ನಿರ್ಧರಿಸಲಾಗಿದೆ. ಛತ್ತೀಸ್ ಗಢದಿಂದ 300 ಮೆ.ವ್ಯಾ ವಿದ್ಯುತ್ ಖರೀದಿಸಲಾಗುವುದು. ಹೊಸ ವರ್ಷದಲ್ಲಿ 600 ಮೆ.ವ್ಯಾ ಸಾಮರ್ಥ್ಯದ ಯೋಜನೆ ಸಿದ್ಧಗೊಳ್ಳಲಿದೆ. ಈ ಕುರಿತು ಕೇಂದ್ರ ಪರಿಸರ ಸಚಿವ ಜೈರಾಮ್ ರಮೇಶ್ ಅವರೊಂದಿಗೆ ಚರ್ಚಿಸಲಾಗುವುದು ಎಂದು ಶೋಭಾ ಕರಂದ್ಲಾಜೆ ಹೇಳಿದರು.
Click this button or press Ctrl+G to toggle between Kannada and English