ಮಂಗಳೂರು: ರಾಹುಲ್ ಗಾಂಧಿಯ ಆಪ್ತ ವಲಯದಲ್ಲಿದ್ದ ಹರ್ಷ ಮೊಯ್ಲಿ ಚುನಾವಣೆ ಕಣದಿಂದ ಹೊರಬೀಳಲು ಕಾರಣ ಸೋನಿಯಾ ಗಾಂಧಿ ಆಪ್ತ ವಲಯದ ಗುಲಾಂ ನಬಿ ಆಜಾದ್!
ಪ್ರೈಮರೀಸ್ ಚುನಾವಣೆಯಲ್ಲಿ ಪಕ್ಷದ ಯಾವುದೇ ಪದಾಧಿಕಾರಿ, ಮಾಜಿ, ಹಾಲಿ ಜನಪ್ರತಿನಿಧಿ ಮತ್ತು ಸಮಾಜ ಸೇವೆ ಅಡಿ ನಾಮಪತ್ರ ಸಲ್ಲಿಸಬಹುದು. ಮೂರನೇ ವಿಭಾಗದಲ್ಲಿ ಹರ್ಷ ಮೊಯ್ಲಿ ನಾಮಪತ್ರ ಸಲ್ಲಿಸಿದ್ದರು. ಸಮಾಜ ಸೇವೆ ವಿಭಾಗದಲ್ಲಿ ನಾಮಪತ್ರ ಸಲ್ಲಿಸಿದರೆ ಪುರಸ್ಕರಿಸುವ ಪರಮಾಧಿಕಾರ ಚುನಾವಣೆ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಗುಲಾಂ ನಬಿ ಅಜಾದ್)ಗೆ.
ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಮಗ ಹರ್ಷ ಮೊಯ್ಲಿ ಕಿಸಾನ್ ಸಭಾ ಟ್ರಸ್ಟ್ ಮತ್ತು ಮೋಕ್ಷ ಯುಗ ಮೂಲಕ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಹಾಲಿನ ಕ್ರಾಂತಿ ಕುರಿತಾದ ಸಮಾಜ ಸೇವೆ ವಿವರಗಳನ್ನು ಲಗತ್ತಿಸಿದ್ದರು. ಸಮಾಜ ಸೇವೆ ಮಾಡಿದ ಕುರಿತ ಪೂರಕ ದಾಖಲೆಗಳು ಇಲ್ಲ ಎಂಬ ಕಾರಣಕ್ಕೆ ನಾಮಪತ್ರ ತಿರಸ್ಕರಿಸಲಾಯಿತು ಎಂದು ಹೇಳಲಾಗುತ್ತಿದೆ. ಆದರೆ ನಿಜವಾದ ಕಾರಣ ಹರ್ಷ ಮೊಯ್ಲಿಯನ್ನು ಕಣದಿಂದ ಹೊರಗಟ್ಟುವುದೇ ಆಗಿತ್ತು. ಹರ್ಷ ಮೊಯ್ಲಿ ಯಾರು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಿಗೆ ಸರಿಯಾಗಿ ಗೊತ್ತೇ ಇರಲಿಲ್ಲ. ಜನಾರ್ದನ ಪೂಜಾರಿ ಒಂದೇ ಹೆಸರಿತ್ತು. ಈ ವೇಳೆ ಟಿಕೆಟ್ ಆಕಾಂಕ್ಷಿ ಎಂದು ಧುತ್ತನೆ ಬಂದು ಪ್ರಚಾರ ಮಾಡಿ, ಪ್ರೈಮರೀಸ್ ಚುನಾವಣೆ ಘೋಷಣೆ ಮಾಡಬೇಕಾದರೆ ಗಾಂಧಿ ಕುಟುಂಬದಲ್ಲಿ ಮೊಯ್ಲಿ ಬಣದ ಪ್ರಭಾವ ಅಂದಾಜು ಮಾಡಬಹುದು.
ರಾಹುಲ್ ಆಪ್ತವಲಯದಲ್ಲಿ ವೀರಪ್ಪ ಮೊಯ್ಲಿ ಮಗಳು ಮತ್ತು ಅಳಿಯ ಆನಂದ ಅಡ್ಕೊಳ್ಳಿ ಇದ್ದಾರೆ. ರಾಹುಲ್ ಗಾಂಧಿಗೆ ಮಾಹಿತಿ ತಂತ್ರಜ್ಞಾನ ವಿಚಾರದಲ್ಲಿ ಆನಂದ ಅಡ್ಕೊಳ್ಳಿ ಅವರೇ ಸಲಹೆಗಾರರು. ರಾಹುಲ್ ಗಾಂಧಿಯ ಪ್ರೈಮರೀಸ್ ಚುನಾವಣೆ ರೂಪುರೇಷೆ ರೂಪಿಸಿದವರೇ ಆನಂದ ಅಡ್ಕೊಳ್ಳಿ. ಮಂಗಳೂರಲ್ಲಿ ಪ್ರೈಮರೀಸ್ ನಡೆಯಬೇಕು ಎಂದು ರಾಹುಲ್ ಹೇಳಲು ಇದೇ ಪ್ರಭಾವಳಿ ಕಾರಣವಾಗಿತ್ತು.
ಆರಂಭದಿಂದಲೂ ನೆಹರು ಕುಟುಂಬಕ್ಕೆ ನಿಷ್ಠರಾಗಿದ್ದ ಜನಾರ್ದನ ಪೂಜಾರಿ, ಸೋನಿಯಾ ಗಾಂಧಿಗೂ ಅಪರಿಮಿತ ನಿಷ್ಠೆ ಪ್ರದರ್ಶಿಸುತ್ತಿದ್ದರು. ಮೊಯ್ಲಿ ಸ್ಪರ್ಧೆ ಪೂಜಾರಿಗೆ ತೀವ್ರ ಮುಖಭಂಗ ಮತ್ತು ನೋವಿಗೂ ಕಾರಣ ಆಗಿತ್ತು. ಇದರ ಬಿಸಿ ಗುಲಾಂ ನಬಿ ಆಜಾದ್‌ಗೆ ತಟ್ಟಿತ್ತು.
ಎತ್ತಿನಹೊಳೆಯೂ ಕಾರಣ: ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸುವುದು ಖಚಿತ. ಎತ್ತಿನಹೊಳೆ ಯೋಜನೆ ಜಾರಿಗೊಳಿಸುತ್ತಿರುವ ಮೊಯ್ಲಿಯಿಂದಾಗಿ ದಕ್ಷಿಣ ಕನ್ನಡದಲ್ಲಿ ಮಗ ಹರ್ಷ ಮೊಯ್ಲಿ ಸ್ಪರ್ಧೆಗೆ ನಿಂತರೆ ಕಾಂಗ್ರೆಸ್‌ಗೆ ಮುಳುವಾಗಬಹುದು. ದಕ್ಷಿಣ ಕನ್ನಡದಲ್ಲಿ ಮೊಯ್ಲಿ ಕುಟುಂಬದ ವಿರುದ್ಧ ಜನರ ಆಕ್ರೋಶವೂ ಹೆಚ್ಚುತ್ತಿತ್ತು. ಹೀಗಾಗಿ ಹರ್ಷ ಮೊಯ್ಲಿಯನ್ನು ಕಣದಿಂದ ಹೊರಗಿಡಲು ಗುಲಾಂ ನಬಿ ಅಜಾದ್ ಪರಮಾಧಿಕಾರ ಬಳಸಿಕೊಂಡರು ಎನ್ನಲಾಗಿದೆ.
ಶನಿವಾರ ನಾಮಪತ್ರ ಸಲ್ಲಿಸಿ ಸಂಜೆ ಪರಿಶೀಲನೆ ನಡೆದಿತ್ತು. ಆಗ ಯಾವ ತಕರಾರು ಇರಲಿಲ್ಲ. ಬಳಿಕ ಐಸಿಸಿ ಪ್ರಧಾನಕಾರ್ಯದರ್ಶಿ ಪರಾಮರ್ಶೆಗೆ ಕಳುಹಿಸಿದ್ದರು. ಮರುದಿನ ಜಿಲ್ಲಾ ಕಾಂಗ್ರೆಸ್ ನೋಟಿಸ್ ಬೋರ್ಡ್‌ನಲ್ಲಿ ಹರ್ಷ ಮೊಯ್ಲಿ ಹೆಸರು ಇರಲಿಲ್ಲ!
ಗೆಲ್ಲುವ ಅಭ್ಯರ್ಥಿಗಳ ಸಮೀಕ್ಷೆ ಮಾಡುವ ಸಂಸ್ಥೆ ಹರ್ಷ ಮೊಯ್ಲಿ ಗೆಲ್ಲುವ ಸಾಧ್ಯತೆ ಇಲ್ಲ ಎಂಬ ವರದಿ ನೀಡಿತ್ತು. ಈ ಆಧಾರದಲ್ಲಿ ತಿರಸ್ಕರಿಸಲಾಯಿತು ಎಂದು ಹೇಳಿ ಹೈಕಮಾಂಡ್ ಹರ್ಷ ಮೊಯ್ಲಿಗೆ ಸಮಾಧಾನ ಮಾಡಿದೆ ಎಂದು ಮೊಯ್ಲಿ ಆಪ್ತವಲಯ ಹೇಳುತ್ತಿದೆ. ‘ಸಮಾಜ ಸೇವೆ ವಿಭಾಗದಲ್ಲಿ ನಾಮಪತ್ರ ಸಲ್ಲಿಸಬಹುದೇ ಎಂದು ಹೈಕಮಾಂಡ್ ಬಳಿ ಕೇಳಿದ್ದೇನೆ. ಪರಮಾಧಿಕಾರ ಬಳಸಿರುವುದು ಸರಿ ಅಲ್ಲ’ ಎಂದು ಹರ್ಷ ಮೊಯ್ಲಿ ಸ್ಪಷ್ಟ ಪಡಿಸಿದ್ದಾರೆ.
ಯುವ ಕಾಂಗ್ರೆಸ್: ದಕ್ಷಿಣ ಕನ್ನಡಕ್ಕೆ ಚುನಾವಣೆ ಉಸ್ತುವಾರಿಗೆ ಬಂದಿಳಿದಿದ್ದ ಎಲ್ಲ ವೀಕ್ಷಕರು ಯುವಕಾಂಗ್ರೆಸ್ ಪದಾಧಿಕಾರಿಗಳಾಗಿದ್ದರು. ಮತದಾರ ಪಟ್ಟಿಯಿಂದ ಹಿಡಿದು ಎಲ್ಲವೂ ಹರ್ಷ ಮೊಯ್ಲಿ ಪರವಾಗಿಯೇ ನಡೆದಿತ್ತು. ಪೂಜಾರಿ ಕಟ್ಟಾ ಬೆಂಬಲಿಗರು ಮತದಾರ ಪಟ್ಟಿಯಿಂದ ಹೊರಗುಳಿದು, ವಿರೋಧಿಗಳು ಸ್ಥಾನ ಪಡೆದಿದ್ದರು.
ಹರ್ಷ ಮೊಯ್ಲಿ ನಗರದಲ್ಲಿ ಚುನಾವಣೆ ಕಚೇರಿ ಕೂಡಾ ಆರಂಭಿಸಿದ್ದರು. ಐಟಿಯ ನುರಿತ ಕೆಲಸಗಾರರು ಮತ್ತು ಮೋಕ್ಷಯುಗದ ಚಾಣಾಕ್ಷ ಯುವಕರ ದಂಡನ್ನು ಮಂಗಳೂರಿಗೆ ತಂದಿದ್ದರು. ಪ್ರೈಮರೀಸ್‌ನ ಪ್ರತಿ ಮತದಾರ ಪಟ್ಟಿ, ವಿಳಾಸ, ಮೊಬೈಲ್ ಫೋನ್ ಸಂಗ್ರಹಿಸಿ ನೇರವಾಗಿ ಸಂಪರ್ಕಿಸುತ್ತಿದ್ದರು. ಪೂಜಾರಿ ಬಣದಲ್ಲಿನ ಎಲ್ಲ ವಿಚಾರಗಳು ಹರ್ಷ ಮೊಯ್ಲಿಗೆ ಕಾಲ ಕಾಲಕ್ಕೆ ತಿಳಿಯುತ್ತಿತ್ತು. ಆದರೆ ಎಲ್ಲವೂ ಇದ್ದು ತಲೆ ಜುಟ್ಟು ಮಾತ್ರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೈಯಲ್ಲಿತ್ತು!
ಎಲ್ಲ ಮುಗಿದ ಮೇಲೆ: ಪೂಜಾರಿ ವಿರುದ್ಧ ಕೆಲಸ ಮಾಡಿದ ಆರೋಪ ಬಾರದಿರಲು ಪ್ರೈಮರೀಸ್ ಚುನಾವಣೆ ಮುಗಿದ ಬಳಿಕವೇ ಮಂಗಳೂರಿಗೆ ಬರಲು ಹರ್ಷ ಮೊಯ್ಲಿ ನಿರ್ಧರಿಸಿದ್ದಾರೆ.
Click this button or press Ctrl+G to toggle between Kannada and English