ಮೈಸೂರು: ಮೈಸೂರು ತಾಲೂಕು ಸಿದ್ದರಾಮನಹುಂಡಿಯ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿ ಒಂಬತ್ತೂವರೆ ತಿಂಗಳುಗಳಾಗಿದ್ದರೂ ಈವರೆಗೆ ಸ್ವಗ್ರಾಮಕ್ಕೆ ಭೇಟಿ ನೀಡಲು ಆಗಿಲ್ಲ. ಆದರೆ ಅಭಿವೃದ್ಧಿ ಭಾಗ್ಯ ದೊರೆತಿದೆ.
ಸಿದ್ದರಾಮನಹುಂಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳನ್ನು ಸುವರ್ಣ ಗ್ರಾಮೋದಯ ಯೋಜನೆಯಲ್ಲಿ ಅಭಿವೃದ್ಧಿಪಡಿಸಲು 9.60 ಕೋಟಿ ಬಿಡುಗಡೆ ಮಾಡಲಾಗಿದೆ.
ಸುವರ್ಣ ಗ್ರಾಮೋದಯ ಯೋಜನೆಯ 5ನೇ ಹಂತದಲ್ಲಿ ಮೈಸೂರು ತಾಲೂಕಿಗೆ ರಾಜ್ಯ ಸರ್ಕಾರ 6.86 ಕೋಟಿ ನಿಗದಿಪಡಿಸಿತ್ತು. ಇದಕ್ಕಾಗಿ ಒಟ್ಟು 32,845 ಜನಸಂಖ್ಯೆ ಇರುವ 16 ಗ್ರಾಮಗಳನ್ನು ಆಯ್ಕೆ ಮಾಡಲಾಗಿತ್ತು. ಈ ಪೈಕಿ ಸಿದ್ದರಾಮನಹುಂಡಿ ಹಾಗೂ ಅದಕ್ಕೆ ಹೊಂದಿಕೊಂಡಂತೆ ಇರುವ ರಂಗನಾಥಪುರ ಗ್ರಾಮಗಳನ್ನು ಮಾದರಿ ಗ್ರಾಮಗಳಾಗಿ ಪರಿವರ್ತಿಸಲು ತಿಳಿಸಲಾಗಿತ್ತು.
ಇದೀಗ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಎಂ.ರಾಮಯ್ಯ ಅವರ ಸೂಚನೆ, ಜಿಪಂ ಸಿಇಒ ಪಿ.ಎ. ಗೋಪಾಲ್ ಅವರ ಪ್ರಸ್ತಾವನೆ ಮೇರೆಗೆ ಸಿದ್ದರಾಮನಹುಂಡಿ, ರಂಗನಾಥಪುರ ಗ್ರಾಮಗಳ ಜೊತೆಗೆ ಯಡಕೊಳ, ಕಡವೆಕಟ್ಟೆಹುಂಡಿ, ದೇವೇಗೌಡನಹುಂಡಿ, ಅಂಚೆಹುಂಡಿ, ಕುಪ್ಪೇಗಾಲ, ಶ್ರೀನಿವಾಸಪುರ, ಹೊಸಹಳ್ಳಿ ಗ್ರಾಮಗಳ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.
ಈಗಾಗಲೇ ಕೆಆರ್‌ಡಿಸಿಎಲ್ ಉಪ ನಿರ್ದೇಶಕರು ಈ 9 ಗ್ರಾಮಗಳಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಅಂದಾಜುಪಟ್ಟಿ ಸಲ್ಲಿಸಿದ್ದಾರೆ. ಜಿಪಂ ಸಿಇಒ ಪಿ.ಎ. ಗೋಪಾಲ್ ಅವರು ಫೆ.24 ರಂದು ಆಡಳಿತಾತ್ಮಕ ಮಂಜೂರಾತಿಯನ್ನೂ ನೀಡಿದ್ದಾರೆ.
ಸುವರ್ಣ ಗಾಮೋದಯ ಯೋಜನೆಯ ಮಾರ್ಗಸೂಚಿ ಅನ್ವಯ ಕಾಮಗಾರಿ ನಡೆಸಬೇಕು. ಕಾಮಗಾರಿಯ ಮೊದಲು, ಕಾಮಗಾರಿ ಆರಂಭಿಸಿದ ನಂತರ ಹಾಗೂ ಪೂರ್ಣಗೊಂಡ ನಂತರ ಫೋಟೋ ಹಾಗೂ ವಿಡಿಯೋ ದಾಖಲಾತಿ ಮಾಡಿಸಬೇಕು. ಕಾಮಗಾರಿ ಪೂರ್ಣಗೊಂಡ ನಂತರ ಮೂರನೇ ವ್ಯಕ್ತಿಯಿಂದ ತಪಾಸಣೆ ನಡೆಸಿ, ವರದಿ ಸಲ್ಲಿಸಬೇಕು ಎಂಬ ಷರತ್ತು ವಿಧಿಸಲಾಗಿದೆ.
ಯಾವ ಊರಿಗೆ ಎಷ್ಟು?
ಸಿದ್ದರಾಮನಹುಂಡಿ………………………… 3.40 ಕೋಟಿ
ರಂಗನಾಥಪುರ………………………………..1.02 ಕೋಟಿ
ಯಡಕೊಳ………………………………….. 86 ಲಕ್ಷ
ಕಡವೆಕಟ್ಟೆಹುಂಡಿ…………………………… 30 ಲಕ್ಷ
ದೇವೇಗೌಡನಹುಂಡಿ………………………. 67.50 ಲಕ್ಷ
ಅಂಚೆಹುಂಡಿ………………………………….8.50 ಲಕ್ಷ
ಕುಪ್ಪೇಗಾಲ………………………………….. 2.26 ಕೋಟಿ
ಶ್ರೀನಿವಾಸಪುರ…………………………….. 41.10 ಲಕ್ಷ
ಹೊಸಹಳ್ಳಿ………………………………….. 57.40 ಲಕ್ಷ
Click this button or press Ctrl+G to toggle between Kannada and English